

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಕ್ಯಾಂಪಸ್ ನಲ್ಲಿರುವ ಸಾಯಿಕೃಷ್ಣ ಮೈದಾನದಲ್ಲಿ ಫೆ. 8ರಂದು ‘ಜಾಗತಿಕ ಮಾನವೀಯ ಸೇವಾ ಅಭಿಯಾನ’ದ ಭಾಗವಾಗಿ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಶ್ರೀಲಂಕಾ ಮಾಜಿ ಕ್ರಿಕೆಟಿಗರಾದ ಅರವಿಂದ ಡಿಸಿಲ್ವಾ, ಚಾಮಿಂಡ ವಾಸ್ ಸೇರಿ 15 ಮಂದಿ ಆಗಮಿಸಲಿದ್ದಾರೆ. ವೆಂಕಟೇಶ ಪ್ರಸಾದ್, ಸುನೀಲ್ ಜೋಶಿ, ಇರ್ಫಾನ್ ಹಾಗೂ ಯೂಸುಫ್ ಪಠಾಣ್ ಇತರರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ.
ಪಂದ್ಯದಲ್ಲಿ ಗೆಲುವು ಸಾಧಿಸಿದವರು ಪಡೆಯುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಅನ್ನು ಸೋಮವಾರ ಕ್ರಿಕೆಟ್ ದಿಗ್ಗಜ ಜಿ.ಆರ್. ವಿಶ್ವನಾಥ್ ಹಾಗೂ ಶ್ರೀ ಮಧುಸೂದನ ಸಾಯಿ ಅನಾವರಣಗೊಳಿಸಿದರು. ‘ವಸುಧೈವ ಕುಟುಂಬಕಂ’ ಕಲ್ಪನೆಯಡಿ ಮಾನವೀಯತೆಯ ಪ್ರೇರಣೆಗಾಗಿ ಈ ಪಂದ್ಯ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ಶ್ರೀ ಮಧುಸೂದನ ಸಾಯಿ ವಿವರಣೆ ನೀಡಿದರು. ಕಳೆದ ಬಾರಿ ಉತ್ತಮ ರೀತಿಯಲ್ಲಿ ಪಂದ್ಯ ನಡೆದಿತ್ತು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಭಾಗವಹಿಸಿದ್ದರು ಎಂದರು.
ಶ್ರೀಲಂಕಾದಲ್ಲಿ ನಮ್ಮ ಸಂಸ್ಥೆಯಿಂದ ಆಸ್ಪತ್ರೆ ನಿರ್ವಹಿಸುತ್ತಿದ್ದು, 2 ಸಾವಿರ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರಿಂದ ಪ್ರೇರಣೆ ಹೊಂದಿ ಶ್ರೀಲಂಕಾ ಆಟಗಾರರು ಪಂದ್ಯ ಆಡಲು ಒಪ್ಪಿದ್ದಾರೆ. ನಮ್ಮ ದೇಶದ ಜಿಆರ್ವಿ, ಸುನೀಲ್ ಗವಾಸ್ಕರ್ ಕೂಡ ಹಾಜರಿರಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಮನವಿ
ನಿಜವಾದ ಹಿರಿಮೆಯು ನಾವು ಗಳಿಸುವ ರನ್ಗಳಲ್ಲಿ ಇಲ್ಲ. ಬದಲಿಗೆ, ನಾವು ಎಷ್ಟು ಜನರ ಜೀವನವನ್ನು ಪರಿವರ್ತಿಸಿದ್ದೇವೆ ಎಂಬುದು ಮುಖ್ಯವೆಂದು ಕ್ರಿಕೆಟ್ ನನಗೆ ಕಲಿಸಿದೆ. ನನ್ನ ಕ್ರೀಡಾ ದಿನಗಳಲ್ಲಿ ನಾವು ಪ್ರತಿಷ್ಠೆಗಾಗಿ ಆಡಿದ್ದೇನೆ. ಆದರೆ, ಇಂದು ನಾವು ಮಾನವೀಯತೆಯ ಉದ್ದೇಶದಲ್ಲಿ ಆಡುತ್ತೇವೆ ಎಂದು ಜಿ.ಆರ್. ವಿಶ್ವನಾಥ್ ಹೇಳಿದರು.
ಮುದ್ದೇನಹಳ್ಳಿ ಕ್ಯಾಂಪಸ್ನಲ್ಲಿ ಗವಾಸ್ಕರ್- ಜಿ.ಆರ್. ವಿಶ್ವನಾಥ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ಆರಂಭಿಸುವ ಕುರಿತು ಶ್ರೀ ಮಧುಸೂದನ ಸಾಯಿ ಮಾಹಿತಿ ಹಂಚಿಕೊಂಡರು. 30 ಮಕ್ಕಳಿಗೆ ವಸತಿ, ಊಟೋಪಚಾರ ಸಹಿತ ಉಚಿತ ಕೋಚಿಂಗ್ಗೆ ವ್ಯವಸ್ಥೆ ಮಾಡಲಾಗುತ್ತದೆ. ಫೆ.8ರ ನಂತರ ಅರ್ಜಿ ಆಹ್ವಾನಿಸಲಾಗುತ್ತದೆ. ಜತೆಗೆ ಆಯ್ಕೆಯಾದವರಿಗೆ ಇಲ್ಲಿ ಕೋಚಿಂಗ್ ಸಹಿತ, ವಿವಿಧ ಹಂತದ ಪಂದ್ಯಗಳಲ್ಲಿ ಆಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಭಾರತ (ಒನ್ವರ್ಲ್ಡ್ ತಂಡ): ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಎಚ್.ಬದ್ರಿನಾಥ್, ನಮನ್ ಓಜಾ, ಪ್ರಗ್ಯಾನ್ ಓಜಾ, ಅಭಿಮನ್ಯು ಮಿಥುನ್, ಅಶೋಕ್ ದಿಂಡಾ, ವೆಂಕಟೇಶ್ ಪ್ರಸಾದ್, ಸುನೀಲ್ ಜೋಶಿ
ಶ್ರೀಲಂಕಾ (ಒನ್ ಫ್ಯಾಮಿಲಿ ತಂಡ): ಅರವಿಂದ ಡಿ ಸಿಲ್ವಾ, ಅರ್ಜುನ್ ರಣತುಂಗಾ, ತಿಲಕರತ್ನೆ ದಿಲ್ಶನ್, ಉಪುಲ್ ತರಂಗ, ತಿಸಾರ ಪರೇರಾ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಸ್, ಚಮಿಂಡಾವಾಸ್, ರವೀಂದ್ರ ಪುಷ್ಪಕುಮಾ, ಅಸೆಲಾ ಗುಣರತ್ನೆ, ಮಿಲಿಂದ ಸಿರಿವರ್ಧನ, ತರಂಗ ಪರವಿತನ, ನುವಾನ್ ಜೋಯ್ಸಾ, ಥಿಲಾನ್ ತುಷಾರ, ರೋಮೇಶ್ ಕಲುವಿತರಣ.
ದಿಗ್ಗಜ ಜಿ.ಆರ್. ವಿಶ್ವನಾಥ್ ಕ್ರಿಕೆಟ್ ಹಾದಿಯಲ್ಲಿ 50 ವರ್ಷ ಸಾಗಿ ಬಂದಿದ್ದು, ಫೆ.8ರಂದು ಭಾರತ- ಶ್ರೀಲಂಕಾ ಪಂದ್ಯ ಈ ಸಂದರ್ಭದಲ್ಲಿ ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಧುಸೂದನ ಸಾಯಿ ತಿಳಿಸಿದರು.