

IND vs SL Match: ನಿನ್ನೆ (ಸೆ.26) ಏಷ್ಯಾಕಪ್ ಟಿ20 ಟೂರ್ನಿಯ ಸೂಪರ್-4ರ ಭಾಗವಾಗಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ರೋಚಕ ಜಯ ಸಾಧಿಸಿತು. ಸೂಪರ್ ಓವರ್ ಹಂತ ತಲುಪಿದ ಮ್ಯಾಚ್ನಲ್ಲಿ ಭಾರತ ಗೆಲುವು ದಾಖಲಿಸಿತು. ಇದು ಟೀಮ್ ಇಂಡಿಯಾ ಗೆಲುವಿನ ಓಟಕ್ಕೆ ಪುಷ್ಠ ನೀಡಿತು. ಇನ್ನು ಇದೇ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಹಲವರ ಅಚ್ಚರಿಗೆ ಕಾರಣವಾಗಿದೆ.
ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಹೊಡೆದ ಸಿಕ್ಸರ್, ನೇರವಾಗಿ ಬೌಂಡರಿ ಲೈನ್‌ನಲ್ಲಿ ನಿಂತಿದ್ದ ಅಕ್ಷರ್ ಪಟೇಲ್ ಕೈಗೆ ಹೋಯಿತು. ಆದರೆ, ಈ ಕ್ಯಾಚ್ನ ಅಕ್ಷರ್ ಕೈಬಿಟ್ಟರು. ಇದು ಸಿಕ್ಸ್ ಎಂದೇ ನಿರ್ಧರಿಸಿ, ಕುಣಿದು ಕುಪ್ಪಳಿಸುತ್ತಿದ್ದ ಶ್ರೀಲಂಕಾ ಅಭಿಮಾನಿಗಳಿಗೆ ಅಂಪೈರ್ ನಿರ್ಧಾರ ಭಾರೀ ನಿರಾಶೆ ಮೂಡಿಸಿತು. ಕಾರಣ, ವರುಣ್ ಚಕ್ರವರ್ತಿ ಹಾಕಿದ ಬಾಲ್ ಅನ್ನು ಡೆಡ್ ಬಾಲ್ ಎಂದು ಆನ್ಫೀಲ್ಡ್ ಅಂಪೈರ್ ಘೋಷಿಸಿದರು. ಇದರ ವಿಡಿಯೋ ಪ್ರಸ್ತುತ ಜಾಲತಾಣಗಳಲ್ಲಿ ಹರಿದಾಡಿದೆ. ಅಂಪೈರ್ ಡೆಡ್ ಬಾಲ್ ಏಕೆ ಕೊಟ್ಟರು? ಎಂದು ಕ್ರಿಕೆಟ್ ಪ್ರಿಯರು ಕಮೆಂಟ್ ಮೂಲಕ ತಮ್ಮ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಮತ್ತೊಂದೆಡೆ, ಅದು ಸಿಕ್ಸರ್ ಎಂದು ಪರಿಗಣಿಸಿದ್ದರೆ, ಶ್ರೀಲಂಕಾ ಈ ಪಂದ್ಯವನ್ನು ಗೆಲ್ಲುತ್ತಿತ್ತು ಎಂದು ಕೆಲವರು ವಾದಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿತು. ಅಭಿಷೇಕ್ ಶರ್ಮಾ (61 ರನ್, 31 ಎಸೆತ), ತಿಲಕ್ ವರ್ಮಾ (ಅಜೇಯ 49, 34 ಎಸೆತ) ಮತ್ತು ಸಂಜು ಸ್ಯಾಮ್ಸನ್ (39 ರನ್, 23 ಎಸೆತ) ಟೀಮ್ ಇಂಡಿಯಾ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತ ನೀಡಿದ ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, 9 ಓವರ್‌ಗಳ ಕೊನೆಯಲ್ಲಿ, ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದೇ ಸಮಯದಲ್ಲಿ 103 ರನ್‌ಗಳ ಗುರಿಯನ್ನು ತಲುಪುವ ಭರದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪಾತುಮ್ ನಿಸ್ಸಂಕಾ, ಅದಾಗಲೇ ಅರ್ಧಶತಕ ಗಳಿಸಿ, ಉತ್ತಮ ಇನ್ನಿಂಗ್ಸ್ನತ್ತ ಸಾಗಿದ್ದರು. ವರುಣ್ ಚಕ್ರವರ್ತಿ ಅವರ 10ನೇ ಓವರ್ನಲ್ಲಿ ನಿಸ್ಸಂಕಾ ಬಾರಿಸಿದ ಸಿಕ್ಸರ್ ಅನ್ನು ಅಂಪೈರ್ ಡೆಡ್‌ಬಾಲ್ ಎಂದು ಘೋಷಿಸಿದರು.
ನಿಯಮಗಳ ಪ್ರಕಾರ, ಅಂಪೈರ್ ಬಾಲ್ ಅನ್ನು ಡೆಡ್ ಬಾಲ್ ಎಂದು ಘೋಷಿಸಿದರು. ಆ ಸಮಯದಲ್ಲಿ, ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಗಾಯದ ಕಾರಣ ಮೈದಾನದಿಂದ ಹೊರಹೋಗುತ್ತಿದ್ದರು. ಅವರ ಬದಲಿಗೆ ಮತ್ತೊಬ್ಬ ಫೀಲ್ಡರ್ ಮೈದಾನಕ್ಕೆ ಓಡಿ ಬರುತ್ತಿದ್ದರು. ಅಭಿಷೇಕ್ ಇನ್ನೂ ಮೈದಾನದಿಂದ ಹೊರ ಹೋಗಿರಲಿಲ್ಲ. ಇದನ್ನು ಗಮನಿಸದ ವರುಣ್ ಚಕ್ರವರ್ತಿ, ಏಕಾಏಕಿ ಬೌಲಿಂಗ್ ಮಾಡಿದರು. ಈ ಹಿನ್ನೆಲೆ ಅಂಪೈರ್ ಅದನ್ನು ಡೆಡ್ ಬಾಲ್ ಎಂದು ಸಿಗ್ನಲ್ ನೀಡಿದರು. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದ್ದು, ಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದೆ,(ಏಜೆನ್ಸೀಸ್).