

IND vs PAK: ನಾಳೆ (ಫೆ.23) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದ್ದು, ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕಾತರ, ಕೂತೂಹಲ ಮೂಡಿದೆ. ಮೊದಲ ಪಂದ್ಯ ಸೋತ ಪಾಕ್ಗೆ ಎರಡನೇ ಪಂದ್ಯವನ್ನು ಭಾರತ ವಿರುದ್ಧ ಗೆದ್ದು, ವಶಪಡಿಸಿಕೊಳ್ಳುವ ತವಕ ಎದುರಾದರೆ, ಆತಿಥೇಯರನ್ನು ಬಗ್ಗುಬಡಿಯಲು ರೋಹಿತ್ ಶರ್ಮ ಪಡೆ ತುದಿಗಾಲಿನಲ್ಲಿ ನಿಂತಿದೆ. ಈ ಮಧ್ಯೆ ಪಾಕ್ ಮಾಜಿ ಕ್ರಿಕೆಟಿಗರಾದ ಶೋಯಿಬ್ ಮಲಿಕ್ ಮತ್ತು ರಾವಲ್ಪಿಂಡಿ ಎಕ್ಸ್ಪ್ರೆಸ್ ಶೋಯಿಬ್ ಅಖ್ತರ್, ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಅವಕಾಶವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಳ್ಳಾಲದಲ್ಲಿ ಕ್ಷಯರೋಗ ಜಾಗೃತಿ ಬೀದಿನಾಟಕ
2025ರ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು ಸೋತ ಆತಿಥೇಯ ಪಾಕಿಸ್ತಾನ, 60 ರನ್‌ಗಳ ಅಂತರದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಇದು ತಂಡಕ್ಕೆ ಭಾರೀ ಮುಖಭಂಗ ಉಂಟುಮಾಡಿತು. ಮೊದಲ ಪಂದ್ಯದಲ್ಲೇ ಹೀನಾಯ ಸೋಲುಂಡಿರುವ ಪಾಕ್, ಎರಡನೇ ಪಂದ್ಯದಲ್ಲಿ ಭಾರತವನ್ನು ಮಣಿಸಲು ಸಾಧ್ಯವಿದೆಯೇ? ಎಂಬ ಮಾತುಗಳು ಕೇಳಿಬಂದಿವೆ. ಎರಡು ತಂಡಗಳಿಗೂ ಇದು ನಿರ್ಣಾಯಕ ಪಂದ್ಯವಾಗಿದ್ದು, ಗೆಲುವಿನ ಅನಿವಾರ್ಯತೆ ಎದುರಾಗಿದೆ. ಆಟಗಾರರಿಗಿಂತ ದೇಶದ ಜನರಲ್ಲಿ ಉತ್ಸಾಹ, ಆತಂಕ, ಕಾತರ ಎಲ್ಲವೂ ಬೆಂಬಿಡದೆ ಕಾಡುತ್ತಿದೆ.
"ಶುಭಾರಂಭ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 321 ರನ್‌ಗಳ ಗುರಿಯನ್ನು ಬೆನ್ನತ್ತಿದ ಮೊಹಮ್ಮದ್ ರಿಜ್ವಾನ್ ಪಡೆ, ಕೇವಲ 260ಕ್ಕೆ ಆಲ್ಔಟ್ ಆಯಿತು. ಇದು ತೀರ ಬೇಸರ ಮೂಡಿಸಿತು. ನಮ್ಮ ಆಟಗಾರರ ಪ್ರದರ್ಶನ ತುಂಬಾ ನಿರಾಶಾದಾಯಕ. ಹಲವು ವಿಷಯಗಳಲ್ಲಿ ತಂಡ ಪುಟಿದೇಳಬೇಕು. ಅಲ್ಲಲ್ಲಿ ಸ್ವಲ್ಪ ತಪ್ಪಾಗಿರುವುದು ಕಂಡುಬಂದಿದೆ. ಟೂರ್ನಿ ಆರಂಭದಿಂದಲೇ ಮಾಡು ಇಲ್ಲವೆ ಮಡಿ ಎಂಬಂತೆ ಹೋರಾಡಿದ್ದರೆ, ಫಲಿತಾಂಶ ಬೇರೆಯೇ ಆಗುತ್ತಿತ್ತು" ಎಂದರು.
"ಉತ್ತಮ ಕ್ಷೇತ್ರರಕ್ಷಣೆ, ಮೈದಾನದಲ್ಲಿ ಹೆಚ್ಚಿನ ಪ್ರಯತ್ನ ಇವೆಲ್ಲವೂ ಪಂದ್ಯದ ಗತಿಯನ್ನೇ ಬದಲಾಯಿಸುತ್ತಿತ್ತು. ಪ್ರಸ್ತುತ ತಮ್ಮನ್ನು ತಾವು ಕಠಿಣ ಸ್ಥಾನದಲ್ಲಿ ಇರಿಸಿಕೊಂಡಿರುವುದು ಬೇಸರದ ಸಂಗತಿಯೇ. ಈಗಲೂ ಭಾರತವನ್ನು ಸೋಲಿಸುವ ಅವಕಾಶ ನಿಮಗಿದೆ" ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ,(ಏಜೆನ್ಸೀಸ್).