

IND vs PAK Final: ಇದೇ ಭಾನುವಾರ (ಸೆ.28) ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿಯ ಅಂತಿಮ ಕಾಳಗದಲ್ಲಿ ಟೀಮ್ ಇಂಡಿಯಾ ಪಾಕ್ ಜತೆಗೆ ಸೆಣಸಲಿದ್ದು, ಮೂರನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಲು ಎದುರುನೋಡುತ್ತಿದೆ. ಏಷ್ಯಾಕಪ್ನ 41 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಇಷ್ಟಲ್ಲದೇ, ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಪರಸ್ಪರ ಎದುರಾಗುತ್ತಿರುವುದು ಸಹ ಇದೇ ಮೊದಲು.
ಇನ್ನು ನಿನ್ನೆಯ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಜಯ ಸಾಧಿಸಿದ ಭಾರತ, ಇದೀಗ ಫೈನಲ್ನಲ್ಲಿ ಪಾಕಿಸ್ತಾನವನ್ನು ಮೂರನೇ ಬಾರಿಗೆ ಮಣಿಸಲು ತುದಿಗಾಲಿನಲ್ಲಿ ನಿಂತಿದೆ. ಸೂಪರ್ ಓವರ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆಗೆ ಶುಭಕೋರಿದ ಶ್ರೀಲಂಕಾ ತಂಡದ ಹೆಡ್ ಕೋಚ್ ಸನತ್ ಜಯಸೂರ್ಯ, ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮರನ್ನು ಹಾಡಿ ಹೊಗಳಿದ್ದಾರೆ.
"ಆತ ತನ್ನ ಆಟವನ್ನು ಅಚ್ಚುಕಟ್ಟಾಗಿ ಆಡುತ್ತಿದ್ದಾನೆ. ಇದೇ ಸಮಯದಲ್ಲಿ ತಮ್ಮ ತಂಡದಿಂದ ಉತ್ತಮ ಸಾಥ್ ಕೂಡ ಪಡೆಯುತ್ತಿದ್ದಾರೆ. ಅಭಿಷೇಕ್ ಶರ್ಮ ಓರ್ವ ಅತ್ಯುತ್ತಮ ಬ್ಯಾಟರ್. ಯಾರು ನ್ಯಾಚುರಲ್ ಆಗಿ ಆಟವನ್ನು ಆಡುತ್ತಾರೋ ಅಂತಹ ಆಟಗಾರರಿಗೆ ಇದೇ ರೀತಿ ಪ್ರದರ್ಶನ ತೋರುವಂತೆ ಪ್ರೋತ್ಸಾಹಿಸಬೇಕು. ಯಾವಾಗ ಮಂದಗತಿಯಲ್ಲಿ ಸಾಗಬೇಕು, ಬೇಡ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಮೊದಲ 6 ಓವರ್ಗಳ ನಂತರ ತಾನು ಅಬ್ಬರದ ಬ್ಯಾಟಿಂಗ್ ನಡೆಸಬೇಕು ಎಂದು ನಿರ್ಧರಿಸಿದರೆ, ಖಂಡಿತ ಅಭಿಷೇಕ್ ಆಡುತ್ತಾರೆ" ಎಂದರು.
"ದಿನ ಕಳೆದಂತೆ ಅಭಿಷೇಕ್ ಬ್ಯಾಟಿಂಗ್ನಲ್ಲಿ ಒಳ್ಳೆಯ ಬೆಳವಣಿಗೆ ಕಾಣಿಸುತ್ತಿದೆ. ಇದು ಹೀಗೆ ಮುಂದುವರಿಯಬೇಕು. ಇದರೊಟ್ಟಿಗೆ ಅವರ ಕೋಚ್ ಕೂಡ ಯುವ ಓಪನರ್ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಈ ಸಮಯದಲ್ಲಿ ಅದು ಅಗತ್ಯ" ಎಂದು ಹಾಡಿ ಹೊಗಳಿದ್ದಾರೆ,(ಏಜೆನ್ಸೀಸ್).