

Google Birthday: ಬಹುತೇಕರ ನೆಚ್ಚಿನ ಸರ್ಚ್ ಇಂಚಿನ್ ಆಗಿರುವ ಗೂಗಲ್, ಇಂದು (ಸೆ.27) ತನ್ನ 27ನೇ ಜನ್ಮದಿನವನ್ನು ಆಚರಿಸಿಕೊಂಡಿದೆ. ಈ ಕುರಿತಾಗಿ ತನ್ನ ಮುಖಪುಟದಲ್ಲಿ ಮೊದಲ ಬಾರಿಗೆ ಡಿಸೈನ್ ಆಗಿದ್ದ ಗೂಗಲ್ ಲೋಗೋವನ್ನೇ ಇಂದಿನ ಡೂಡಲ್ನಲ್ಲಿ ಗೂಗಲ್ ಬಳಸಿಕೊಂಡಿದೆ. ಇದು ಈ ದಿನದ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು.
ಇಂದಿನ ಗೂಗಲ್ ಡೂಡಲ್ ಡಿಸೈನ್ ಹಲವು ವರ್ಷಗಳ ಹಿಂದೆ ಕಾಣಿಸಿಕೊಂಡ ಪ್ರಥಮ ಗೂಗಲ್ ಲೋಗೋ. ತನ್ನ 27ನೇ ಜನ್ಮದಿನದ ಸಮಯವನ್ನು ಸಂಭ್ರಮಿಸಲು ಸಂಸ್ಥೆ, ಇದೇ ಲೋಗೋವನ್ನು ಇಂದಿನ ಗೂಗಲ್ ಡೂಡಲ್ ಆಗಿ ಬಳಕೆದಾರರಿಗೆ ತೋರಿಸಿದೆ. ಕೋಟ್ಯಂತರ ಬಳಕೆದಾರರಿಗೆ ತನ್ನ ದೀರ್ಘ ಪ್ರಯಾಣವನ್ನು ಈ ಮೂಲಕ ನೆನಪಿಸಿರುವ ಗೂಗಲ್, ಕ್ಯಾಲಿಫೋರ್ನಿಯಾದ ಸಣ್ಣ ಗ್ಯಾರೇಜ್‌ನಿಂದ ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ಸರ್ಚ್ ಇಂಜಿನ್ ಆಗಿ ಬೆಳೆದ ಪರಿ ಅಮೋಘವೇ ಸರಿ. ಅಷ್ಟಕ್ಕೂ ಗೂಗಲ್ ಎಂದರೇನು? ಇದಕ್ಕೆ ಗೂಗಲ್ ಅಂತ ಹೆಸರು ಬಂದಿದ್ದು ಹೇಗೆ, ಇಟ್ಟಿದ್ಯಾರು, ಇದರ ಇತಿಹಾಸವೇನು? ಸಾಗಿಬಂದ ಹಾದಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಅನೇಕ ಬಳಕೆದಾರರು ಸಾಮಾನ್ಯವಾಗಿ ಗೂಗಲ್‌ನ ಹುಟ್ಟುಹಬ್ಬ ಯಾವಾಗ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ವರದಿಯ ಪ್ರಕಾರ, ಗೂಗಲ್ ಸೆಪ್ಟೆಂಬರ್ 4, 1998ರಂದು ಸ್ಥಾಪನೆಯಾಯಿತು. ಆದರೆ, ಕಂಪನಿಯು ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್ ಕೊನೆ ವಾರದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತದೆ. ಇದು ತನ್ನ ವಾರ್ಷಿಕ ಹುಟ್ಟುಹಬ್ಬವನ್ನು ವಿಶೇಷ ಡೂಡಲ್‌ನೊಂದಿಗೆ ಆಚರಿಸುವುದು ವಿಶೇಷ.
ಜಾಗತಿಕವಾಗಿ ಶತಕೋಟಿ ಜನರು ಗೂಗಲ್ ಅನ್ನು ಬಳಕೆ ಮಾಡುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್. ಆದಾಗ್ಯೂ, ಅನೇಕ ಜನರಿಗೆ ಗೂಗಲ್ ಏನೆಂದು ತಿಳಿಯದೆ ಇರಬಹುದು. ವರದಿಗಳ ಪ್ರಕಾರ, ಗೂಗಲ್ ಎಂಬ ಹೆಸರು ಮೊದಲು 'ಗೂಗೋಲ್' ಎಂಬ ಗಣಿತದ ಪದದ ತಪ್ಪು ಕಾಗುಣಿತದಿಂದ ಬಂದಿದೆ ಎನ್ನಲಾಗಿದೆ. ಇದನ್ನು ಪ್ರಾರಂಭಿಸಿದ್ದು ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್. ತಮ್ಮ ಸರ್ಚ್ ಇಂಜಿನ್ ಬಳಕೆದಾರರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವ ಕೆಲಸ ಗೂಗಲ್ ಮಾಡುತ್ತದೆ.
ಗೂಗಲ್‌ನ ಸುದೀರ್ಘ ಪ್ರಯಾಣವು 1995ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಯಿತು. ಅಲ್ಲಿ, ಲ್ಯಾರಿ ಪೇಜ್ ಪದವಿ ಶಾಲೆಯನ್ನು ಅನ್ವೇಷಿಸುವಾಗ ಕ್ಯಾಂಪಸ್‌ನಲ್ಲಿ ಸಹ ವಿದ್ಯಾರ್ಥಿ ಸೆರ್ಗೆ ಬ್ರಿನ್‌ರನ್ನು ಭೇಟಿಯಾದರು. ಇಬ್ಬರೂ ಮೊದಲಿಗೆ ಕಠಿಣ ಆರಂಭವನ್ನು ಕಂಡರು. ಆದರೆ, ಒಂದು ವರ್ಷದೊಳಗೆ, ಇಬ್ಬರೂ ಜತೆಗೂಡಿ 1998ರಲ್ಲಿ, ಗೂಗಲ್ ಸರ್ಚ್ ಇಂಜಿನ್ ಅನ್ನು ಸ್ಥಾಪಿಸಿದರು. ಇದು ಲಿಂಕ್‌ಗಳ ಆಧಾರದ ಮೇಲೆ ವೆಬ್ ಪುಟಗಳನ್ನು ಶ್ರೇಣೀಕರಿಸಿತು. ಅದಾದ ನಂತರ ಆಗಿದ್ದು ಇತಿಹಾಸ ಎಂದೇ ಹೇಳಬಹುದು.
ಗೂಗಲ್ ಅನ್ನು ಮೂಲತಃ ಗೂಗಲ್ ಎಂದೇ ಕರೆಯುತ್ತಿರಲಿಲ್ಲ. ಗೂಗಲ್‌ನ ಮೂಲ ಹೆಸರು “ಬ್ಯಾಕ್‌ರಬ್”. ಆದಾಗ್ಯೂ, 1997ರಲ್ಲಿ, ಹೊಸ ಹೆಸರಿನ ಹುಡುಕಾಟ ಪ್ರಾರಂಭವಾಯಿತು. ಆರಂಭದಲ್ಲಿ “ಗೂಗೊಲ್ಪ್ಲೆಕ್ಸ್” ಮತ್ತು “ಗೂಗೊಲ್” ಎಂಬ ಒಂದಷ್ಟು ಹೆಸರುಗಳನ್ನು ತಂಡವು ಆಯ್ಕೆ ಮಾಡಿತು. ಅಂತಿಮವಾಗಿ “ಗೂಗೊಲ್” ಅನ್ನು ಪರಿಗಣಿಸಿತು.
'ಗೂಗೊಲ್' ಹೆಸರನ್ನು ಇಟ್ಟುಕೊಳ್ಳಬೇಕೆಂದು ಒತ್ತಾಯಿಸಿದ ತಂಡದಲ್ಲಿ ಸೀನ್ ಆಂಡರ್ಸನ್ ಕೂಡ ಒಬ್ಬರು. ಇವರು ಸ್ಟ್ಯಾನ್‌ಫೋರ್ಡ್‌ನಲ್ಲಿ ಓದುತ್ತಿದ್ದರು. ಗೂಗೊಲ್ ಎಂಬ ಹೆಸರನ್ನು ಹೇಗೆ ಪಡೆಯುವುದು ಎಂದು ಕಂಡುಹಿಡಿಯಲು ಇಂಟರ್ನೆಟ್ ಜಾಲದಲ್ಲಿ ಹುಡುಕಾಡಿದ ಅವರು, 'ಗೂಗೋಲ್' ಬದಲಿಗೆ ಗೂಗಲ್ ಎಂದು ಟೈಪ್ ಮಾಡಿದರು. ಕಾಕತಾಳೀಯವಾಗಿ, ತಪ್ಪಾಗಿ ಟೈಪ್ ಮಾಡಿದ ಈ ಹೆಸರನ್ನೇ ಲ್ಯಾರಿ ಪೇಜ್ ಅವರು ಇಷ್ಟಪಟ್ಟರು. ಅಂತಿಮವಾಗಿ ಡೊಮೇನ್ ಅನ್ನು ಗೂಗಲ್ ಎಂದೇ ರಿಜಿಸ್ಟರ್ ಮಾಡಿಸಲಾಯಿತು,(ಏಜೆನ್ಸೀಸ್).