IND vs PAK: ಇದು ಟೀಮ್ ಇಂಡಿಯಾ ಗತ್ತು! ಇಲ್ಲಾಗಲಿ, ಎಲ್ಲಾಗಲಿ ಭಾರತದ ಮುಂದೆ ಪಾಕ್ ತಲೆ ಬಾಗಲೇಬೇಕು

ವಿಜಯವಾಣಿ - 2025-02-23T130823.047
Published on

IND vs PAK: ಇಂದು ಪಾಕಿಸ್ತಾನ ಮತ್ತು ಭಾರತ ನಡುವಿನ ಹೈವೋಲ್ಟೇಜ್ ಕದನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 2:30ರಿಂದ ಆರಂಭವಾಗಲಿರುವ ಕದನಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಕಾತರ, ಕುತೂಹಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದುಬೈ ಸ್ಟೇಡಿಯಂನಲ್ಲಿ ಹಾಜರಾಗಿರುವ ಎರಡು ದೇಶಗಳ ಫ್ಯಾನ್ಸ್, ಪಾಕ್​ ಮತ್ತು ಭಾರತದ ಪಂದ್ಯ ಎಷ್ಟು ರೋಚಕವಾಗಿರಲಿದೆ ಎಂಬುದನ್ನು ಯೋಚಿಸುತ್ತಿದ್ದಾರೆ. ಒಂದೆಡೆ ಭಾರತ ಗೆದ್ದೇ ಗೆಲ್ಲಲಿದೆ ಎಂಬ ಭರವಸೆ, ನಿರೀಕ್ಷೆಗಳು ಹೆಚ್ಚಾಗಿದೆ. ಮತ್ತೊಂದೆಡೆ, ಟೀಮ್ ಇಂಡಿಯಾ ಯಾವುದಕ್ಕೂ ಮಣಿಯುವುದಿಲ್ಲ. ಪಾಕ್​ ಮುಂದೆ ತಲೆಬಾಗುವುದಿಲ್ಲ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಅದ್ಭುತ ನಿದರ್ಶನ ಸಿಗಲಿಕ್ಕೆ ಸಾಧ್ಯವೇ ಇಲ್ಲ.

ಇಂದಿನ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ದಾಖಲೆಯನ್ನು ಮಾಡಲಿದ್ದಾರೆ ಎಂಬುದು ಪಂದ್ಯದ ಮೊದಲು ಮತ್ತು ಎರಡನೇ ಇನ್ನಿಂಗ್ಸ್ ಅಂತ್ಯದೊಳಗೆ ಸ್ಪಷ್ಟವಾಗಿ ತಿಳಿಯಲಿದೆ. ಅಸಲಿಗೆ ಯಾವ ವಿಷಯದಲ್ಲಿ ಪಾಕಿಸ್ತಾನ ಭಾರತದ ಮುಂದೆ ತಲೆಬಾಗಿದೆ? ಎಂಬ ನಿಮ್ಮ ಗೊಂದಲಕ್ಕೆ ಉತ್ತರ ಹೀಗಿದೆ. ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥೇಯರಾಗಿ ಪಾಕಿಸ್ತಾನ ಹೊರಹೊಮ್ಮಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ತಮ್ಮ ತವರಿನಲ್ಲಿ ಐಸಿಸಿ ಟೂರ್ನಿಯನ್ನು ಆಡಿಸುವ ಮಹತ್ತರದ ಆಸೆಯನ್ನು ಹೊತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಇದನ್ನು ಈಡೇರಿಸಿಕೊಳ್ಳುವ ಜತೆಗೆ ಭಾರತವನ್ನು ತನ್ನ ನೆಲಕ್ಕೆ ಕರೆಸಿಕೊಳ್ಳಬೇಕು ಎಂದು ನಡೆಸಿದ ಹಠ ಕಡೆಗೂ ವಿಫಲವಾಯಿತು. ಈ ವಿಷಯದಲ್ಲಿ ಮತ್ತೊಮ್ಮೆ ಪಿಸಿಬಿಗೆ ಭಾರೀ ಮುಖಭಂಗವೇ ಉಂಟಾಯಿತು.

ಈ ಮೊದಲು 2023 ಏಕದಿನ ವಿಶ್ವಕಪ್​ ಟ್ರೋಫಿ ಟೂರ್ನಿಯನ್ನು ಆಯೋಜಿಸಿದ್ದ ಐಸಿಸಿ, ಭಾರತದಲ್ಲಿ ಪಂದ್ಯಗಳ ವೇಳಾಪಟ್ಟಿ ಮತ್ತು ಆಯಾ ತಂಡಗಳನ್ನು ಘೋಷಿಸಿತ್ತು. ಇಲ್ಲಿಯೂ ತನ್ನ ನರಿ ಬುದ್ದಿ ತೋರಿದ ಪಾಕಿಸ್ತಾನ, ನಮ್ಮ ತಂಡ ಭಾರತದಲ್ಲಿ ಆಡುವುದಿಲ್ಲ. ನಮಗೆ ಹೈಬ್ರಿಡ್​ ಮಾದರಿಯಲ್ಲಿ ಆಡಿಸಿ, ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಿದರೆ ಉತ್ತಮ ಎಂದು ಐಸಿಸಿಗೆ ಮನವಿ ಮಾಡಿತ್ತು. ಆದರೆ, ಇದನ್ನೂ ಐಸಿಸಿ ಪರಿಗಣಿಸಲಿಲ್ಲ. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಪಾಕ್​, ನಮಗೆ ಹೈಬ್ರಿಡ್​ ಮಾದರಿ ಬೇಕೇ ಬೇಕು ಎಂದು ಪಟ್ಟುಹಿಡಿಯಿತು. ಆದರೆ, ಇದ್ಯಾವುದಕ್ಕೂ ಐಸಿಸಿ ಕ್ಯಾರೇ ಎನ್ನಲಿಲ್ಲ. ಕಡೆಗೆ ಸುಮ್ಮನೆ ಭಾರತದಲ್ಲೇ ಪಂದ್ಯಗಳನ್ನಾಡಿದ ಪಾಕ್​, ತುಟಿಕ್​ ಪಿಟಿಕ್​ ಎನ್ನದೆ ಟೂರ್ನಿ ಮುಗಿಸಿಕೊಂಡಿತು.

ಇನ್ನು ಈ ಬಾರಿ ತಮ್ಮ ತವರಿನಲ್ಲಿ ಪಂದ್ಯಗಳನ್ನಾಡಿಸುವ ಅವಕಾಶ ಪಡೆದ ಪಾಕಿಸ್ತಾನ, ಹೇಗಾದರೂ ಮಾಡಿ ಭಾರತವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಬೇಕು. ಟೀಮ್ ಇಂಡಿಯಾವನ್ನು ನಮ್ಮ ನೆಲದಲ್ಲಿಯೇ ಬಗ್ಗುಬಡಿಯಬೇಕು ಎಂಬ ಈಡೇರದ ಕನಸನ್ನು ಹೊತ್ತು, ಐಸಿಸಿಗೆ ಭಾರತವನ್ನು ಕಳಿಸಿಕೊಡುವಂತೆ ಮನವಿ ಮಾಡಿತು. ಆದರೆ, ಇದಕ್ಕೆ ಬಿಸಿಸಿಐ ಸುತಾರಾಮ್ ಒಪ್ಪಿಗೆ ಸೂಚಿಸಲಿಲ್ಲ. ನಾವು ಪಾಕಿಸ್ತಾನದಲ್ಲಿ ಆಡುವುದಿಲ್ಲ. ಬದಲಿಗೆ ನಮ್ಮ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ಆಡಿಸುವುದಾದರೆ ಮಾತ್ರ ಎಂಬ ಷರತ್ತನ್ನು ಟೀಮ್ ಇಂಡಿಯಾ ಮುಂದಿಟ್ಟಿತು.

ಇದೊಂದು ವಿಚಾರದಿಂದ ಭಾರತದ ವಿರುದ್ಧ ಕಿಡಿಕಾರಿದ ಪಿಸಿಬಿ ಮತ್ತು ಪಾಕ್​ನ ಹಿರಿಯ ಮತ್ತು ಮಾಜಿ ಕ್ರಿಕೆಟಿಗರು, ಟೀಮ್ ಇಂಡಿಯಾವನ್ನು ತಮ್ಮ ತವರಿಗೆ ಕರೆಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ನಡೆಸಿದರು. ಶತಾಯಗತಾಯ ಪ್ರಯತ್ನಗಳನ್ನೂ ನಡೆಸಿದರು. ಆದರೆ, ಅಂತಿಮವಾಗಿ ಇದ್ಯಾವುದಕ್ಕೂ ಭಾರತ ಒಪ್ಪಲಿಲ್ಲ. ಇದನ್ನೂ ಸ್ವತಃ ಐಸಿಸಿಯೂ ಒಪ್ಪಲಿಲ್ಲ. ಕಡೆಗೆ ಟೀಮ್ ಇಂಡಿಯಾ ಪಂದ್ಯಗಳನ್ನು ದುಬೈನಲ್ಲಿ ಆಡಿಸುವುದಾಗಿ ಪಾಕ್​ ತಿಳಿಸಿತು. ಇದಾದ ನಂತರವೇ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ಒಪ್ಪಿಕೊಂಡಿತು. ಆತಿಥೇಯರಾದರೂ ಅಷ್ಟೇ, ನಮ್ಮ ನೆಲಕ್ಕೆ ಬಂದಿಳಿದರೂ ಅಷ್ಟೇ ಪಾಕ್ ತಂತ್ರಗಳಿಗೆ ಭಾರತ ಅಂದಿಗೂ ಇಂದಿಗೂ ತಲೆಬಾಗಿಲ್ಲ. ಇದರ ಬದಲಿಗೆ ಪಾಕಿಸ್ತಾನವೇ ಶರಣಾಗಬೇಕು, ಶರಣಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net