

IND vs PAK Final: ಇಂದು ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಯಾರು ಮುಡಿಗೆ 2025ರ ಟ್ರೋಫಿ ಹೋಗಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರಿಯರಲ್ಲಿ ಮೂಡಿದೆ. ಮತ್ತೊಂದೆಡೆ, ಮೂರನೇ ಬಾರಿಗೆ ಪಾಕ್ ತಂಡವನ್ನು ಬಗ್ಗುಬಡಿಯಲು ಟೀಮ್ ಇಂಡಿಯಾ ತುದಿಗಾಲಿನಲ್ಲಿ ನಿಂತಿದೆ. ಫೈನಲ್ ಪೈಪೋಟಿಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ, ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದಿದ್ದಾರೆ.
"ಭಾರತ ಮತ್ತು ಪಾಕ್ ತಂಡಗಳು ಪಂದ್ಯವನ್ನಾಡುತ್ತಿದೆ ಎಂದರೆ ಖಂಡಿತವಾಗಿಯೂ ಆಟಗಾರರ ಮೇಲೆ ಒತ್ತಡವಿರುತ್ತದೆ. ಈ ವಿಚಾರದಲ್ಲಿ ಇಲ್ಲ ಎಂದು ಹೇಳುವುದು ತಪ್ಪಾಗುತ್ತೆ. ಏಷ್ಯಾಕಪ್ ಟೂರ್ನಿಯಲ್ಲಿ ನಾವು ಈಗಾಗಲೇ ಎರಡು ಬಾರಿ ಟೀಮ್ ಇಂಡಿಯಾ ವಿರುದ್ಧ ಆಡಿದ್ದೇವೆ. ಆದಾಗ್ಯೂ, ಈ ಪಂದ್ಯಗಳಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಅದಕ್ಕಾಗಿಯೇ ಸೋಲನ್ನು ಕಂಡಿದ್ದೇವೆ. ಆದರೆ, ಈ ಬಾರಿ ಆ ತಪ್ಪು ಆಗಲು ಬಿಡುವುದಿಲ್ಲ. ಅದನ್ನೆಲ್ಲ ಸರಿಪಡಿಸಿಕೊಂಡು ಗೆಲ್ಲುವತ್ತ ಸಾಗುತ್ತೇವೆ. ಕ್ರಿಕೆಟ್‌ನಲ್ಲಿ, ಕಡಿಮೆ ಮಿಸ್ಟೇಕ್ ಮಾಡುವ ತಂಡಗಳು ಮಾತ್ರ ಗೆಲುವು ನೋಡಲು ಸಾಧ್ಯ" ಎಂದು ಸಲ್ಮಾನ್ ಹೇಳಿದ್ದಾರೆ.
"ಈ ಟೂರ್ನಿಯಲ್ಲಿ ನಾವು ಅಂತಹ ಮೆಚ್ಚಿಕೊಳ್ಳುವ ಬ್ಯಾಟಿಂಗ್ ಮಾಡಿಲ್ಲ ಎಂಬ ಅರಿವು ನಮಗಿದೆ. ಆದ್ದರಿಂದ, ನಾವು ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರುವತ್ತ ಎದುರುನೋಡುತ್ತಿದ್ದೇವೆ. ಪಂದ್ಯದಲ್ಲಿ ಟಾಸ್ ಮುಖ್ಯವಾಗಲ್ಲ. ಇಲ್ಲಿಯವರೆಗೆ ಯಾವುದೇ ಪಂದ್ಯದಲ್ಲೂ ಟಾಸ್ ಅಷ್ಟು ಮುಖ್ಯವಾಗಿಲ್ಲ. ಕಾರಣ, ಅದು ನಮ್ಮ, ನಿಮ್ಮ ಕೈಯಲ್ಲಿಲ್ಲ. ಒಂದು ಪಂದ್ಯವನ್ನು ಪ್ರಾರಂಭಿಸಲು ಟಾಸ್ ಒಂದು ಮಾರ್ಗ ಅಷ್ಟೇ ಎಂದು ನಾನು ಭಾವಿಸುವೆ" ಎಂದಿದ್ದಾರೆ,(ಏಜೆನ್ಸೀಸ್).