"ನಮಗೆ ಗೊತ್ತಿದೆ...." ಏಷ್ಯಾಕಪ್​ ಫೈನಲ್ ಪಂದ್ಯ​ಕ್ಕೂ ಮುನ್ನ ಟೀಮ್ ಇಂಡಿಯಾಗೆ ಪಾಕ್​ ಕ್ಯಾಪ್ಟನ್​ ಸಂದೇಶ | IND vs PAK Final

ವಿಜಯವಾಣಿ - 2025-09-26T133624.178
Published on

IND vs PAK Final: ನಿನ್ನೆ (ಸೆ.25) ನಡೆದ ಸೂಪರ್ 4 ಭಾಗದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 11 ರನ್​​ಗಳ ಜಯ ಸಾಧಿಸಿದ ಪಾಕಿಸ್ತಾನ, ಈ ಮೂಲಕ ಏಷ್ಯಾಕಪ್ ಟೂರ್ನಿಯ ಫೈನಲ್​ ಪ್ರವೇಶಿಸಿದೆ. ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾವನ್ನು ಮೂರನೇ ಬಾರಿಗೆ ಎದುರಿಸಲಿರುವ ಪಾಕ್​, ಎರಡು ಬಾರಿ ಸೋಲುಂಡಿದ್ದರೂ ತಾವು ಸೊಕ್ಕಿನ ಮಾತಿಗೇನು ಕಡಿಮೆಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಬಾಂಗ್ಲಾ ವಿರುದ್ಧ ಜಯ ಸಾಧಿಸಿದ ಬೆನ್ನಲ್ಲೇ ಮಾತನಾಡಿದ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ, "ಈ ರೀತಿಯ ಪಂದ್ಯಗಳನ್ನು ಗೆದ್ದಾಗ ನಾವೊಂದು ವಿಶೇಷ ತಂಡ ಎಂದು ಅನಿಸುತ್ತೆ. ತಂಡದಲ್ಲಿ ಪ್ರತಿಯೊಬ್ಬರು ಸಹ ಉತ್ತಮವಾಗಿ ಆಟವಾಡಿದರು. ಬ್ಯಾಟಿಂಗ್​ನಲ್ಲಿ ಈ ಬೆಳವಣಿಗೆ ಬೇಕಿತ್ತು. ಅದೀಗ ದೊರಕಿದೆ. ಇದರ ಮೇಲೆ ಹೆಚ್ಚು ಕೆಲಸ ಮಾಡುತ್ತೀವಿ" ಎಂದು ಹೇಳಿದರು.

ಇನ್ನು ಇದೇ ಸಮಯದಲ್ಲಿ ಭಾರತದೊಂದಿಗೆ ಫೈನಲ್​ ಆಡಲಿರುವ ಬಗ್ಗೆ ತುಟಿ ಬಿಚ್ಚಿದ ಸಲ್ಮಾನ್​, "ಬಹಳ ಕುತೂಹಲದಿಂದ ಎದುರುನೋಡುತ್ತಿದ್ದೇವೆ. ನಮಗೆ ಗೊತ್ತಿದೆ ನಾವೇನು ಮಾಡಬೇಕು ಅನ್ನೋದು. ಯಾವ ತಂಡವನ್ನು ಬೇಕಾದರೂ ಮಣಿಸುವ ಸಾಮರ್ಥ್ಯ ನಮಗಿದೆ. ಭಾನುವಾರ ಬರ್ತಿವಿ, ಅವರನ್ನು (ಟೀಮ್ ಇಂಡಿಯಾ) ಸೋಲಿಸುತ್ತೀವಿ" ಎಂದು ಹೇಳಿದರು. ಇಲ್ಲಿ ಸೂರ್ಯಕುಮಾರ್​ ಪಡೆಯನ್ನು ನೇರವಾಗಿ ಉಲ್ಲೇಖಿಸದ ಪಾಕ್ ಕ್ಯಾಪ್ಟನ್​, ಫೈನಲ್​ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಸಂದೇಶ ಕೊಟ್ಟಿರುವುದು ಪಂದ್ಯದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ.

ಇದೇ ಮೊದಲು

ಇದೇ ಭಾನುವಾರ (ಸೆ.28) ನಡೆಯಲಿರುವ ಅಂತಿಮ ಕಾಳಗದಲ್ಲಿ ಟೀಮ್ ಇಂಡಿಯಾ ಪಾಕ್ ಜತೆಗೆ ಸೆಣಸಲಿದ್ದು, ಮೂರನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಲು ಎದುರುನೋಡುತ್ತಿದೆ. ಏಷ್ಯಾಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು ಎಂಬುದು ಹುಬ್ಬೇರಿಸುವ ಸಂಗತಿ. ಇಷ್ಟಲ್ಲದೇ, ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಸಹ ಇದೇ ಮೊದಲು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net