

IND vs PAK: ನಿನ್ನೆ (ಸೆ.28) ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಮೂರನೇ ಬಾರಿಗೆ ಟೀಮ್ ಇಂಡಿಯಾ ಎದುರು ಮಂಡಿಯೂರಿದ ಪಾಕಿಸ್ತಾನ, ಭಾರೀ ಮುಖಭಂಗವನ್ನು ಅನುಭವಿಸಿತು. ಫೈನಲ್‌ನಲ್ಲಿ ಸೋತ ಹಿನ್ನೆಲೆ ಅತೀವ ಬೇಸರಕ್ಕೆ ಒಳಗಾದ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ, ತಮ್ಮ ಹೀನಾಯ ಸೋಲಿಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಪಂದ್ಯದ ಬಳಿಕ ನೀಡಲಾದ ರನ್ನರ್ ಅಪ್ ಚೆಕ್ ಅನ್ನು ವೇದಿಕೆಯಲ್ಲಿ ಸ್ವೀಕರಿಸಿದ ಸಲ್ಮಾನ್, ಅಲ್ಲಿಂದ ಕೆಳಗಿಳಿಯುವ ಮುನ್ನವೇ ಅದನ್ನು ಮೈದಾನಕ್ಕೆ ಬೀಸಾಡಿದರು. ಇದು ಅವರಿಂದ ಟೀಕೆ, ಮುಖಭಂಗವನ್ನು ಸಹಿಸಲು ಆಗುತ್ತಿಲ್ಲ ಎಂಬುದನ್ನು ಎತ್ತಿ ತೋರಿಸಿತು. ಇದೇ ಸಮಯದಲ್ಲಿ ಪಂದ್ಯದಲ್ಲಿ ಸೋತ ಬಗ್ಗೆ ತುಟಿಬಿಚ್ಚಿದ ಪಾಕ್ ನಾಯಕ, "ಈ ಸೋಲನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟಕರ. ನಾವು ನಮ್ಮ ಬ್ಯಾಟಿಂಗ್ ಅನ್ನು ಇನ್ನಷ್ಟು ಬಲ ಪಡಿಸಬೇಕಿತ್ತು. ಫೈನಲ್‌ನಲ್ಲಿ ಸೋತರೂ, ನಮ್ಮ ತಂಡದ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ" ಎಂದರು.
"ತಂಡದ ಬ್ಯಾಟಿಂಗ್ ವೈಫಲ್ಯವು ನಮ್ಮ ಗೆಲುವಿನ ಸಾಧ್ಯತೆಗಳಿಗೆ ಅಡ್ಡಿಯಾಯಿತು. ಬ್ಯಾಟಿಂಗ್‌ನಲ್ಲಿ ಒಬ್ಬರ ಬೆನ್ನಲ್ಲೇ ಮತ್ತೊಬ್ಬರಂತೆ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡೆವು. ನಮ್ಮ ಅತ್ಯುತ್ತಮ ಬೌಲಿಂಗ್ ಹೊರತಾಗಿಯೂ, ಬೋರ್ಡ್‌ನಲ್ಲಿ ಸಾಕಷ್ಟು ರನ್‌ಗಳು ಇರಲಿಲ್ಲ. ಸ್ಟ್ರೈಕ್ ತಿರುಗಿಸದೆ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ನಾವು ಬೆಲೆ ತೆರಬೇಕಾಯಿತು. ಟೀಮ್ ಇಂಡಿಯಾ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು" ಎಂದರು.
"ಕೊನೆಯ ಆರು ಓವರ್‌ಗಳಲ್ಲಿ ಭಾರತಕ್ಕೆ 63 ರನ್‌ಗಳು ಅಗತ್ಯವಿದ್ದಾಗಲೂ, ನಾವು ಗೆಲ್ಲುತ್ತೇವೆ ಎಂದೇ ಭಾವಿಸಿದ್ದೆವು. ಆದರೆ, ಅದು ಈಡೇರಲಿಲ್ಲ. ಬ್ಯಾಟಿಂಗ್ ವೈಫಲ್ಯ ದೊಡ್ಡ ನಷ್ಟವನ್ನುಂಟು ಮಾಡಿತು. ಈ ಪಂದ್ಯವನ್ನು ಸೋತರೂ, ತಂಡ ಹೋರಾಡಿದ ರೀತಿಗೆ ನಾನು ಹೆಮ್ಮೆಪಡುತ್ತೇನೆ. ನಾವು ಹೆಚ್ಚು ಶ್ರಮಿಸುತ್ತೇವೆ ಮತ್ತು ಭವಿಷ್ಯದಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತೇವೆ" ಎಂದು ಸಲ್ಮಾನ್ ಅಲಿ ಹೇಳಿದ್ದಾರೆ.
ಬೌಲಿಂಗ್ನಲ್ಲಿ ಚಮತ್ಕಾರ ಮಾಡಿದ ಸ್ಪಿನ್ನರ್ ಕುಲದೀಪ್ ಯಾದವ್, 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಇನ್ನು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಪತ್ಬಾಂಧವನಾಗಿ ನಿಂತ ತಿಲಕ್ ವರ್ಮಾ, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 53 ಎಸೆತಗಳಲ್ಲಿ 69 ರನ್ ಬಾರಿಸಿದ ತಿಲಕ್, ಕೊನೆಯವರೆಗೂ ಅಜೇಯರಾಗಿ ಉಳಿದರು.