

ನವದೆಹಲಿ: ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ದೀರ್ಘಕಾಲದ ಬಳಿಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಆಗಸ್ಟ್ 18ರಂದು ಆರಂಭವಾಗಲಿರುವ ಐರ್ಲೆಂಡ್ ಪ್ರವಾಸದ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿರುವ ಭಾರತ ತಂಡವನ್ನು ಬಿಸಿಸಿಐ ಸೋಮವಾರ ಆಯ್ಕೆ ಮಾಡಿದ್ದು, ಜಸ್‌ಪ್ರೀತ್ ಬುಮ್ರಾ ನಾಯಕನ ಜವಾಬ್ದಾರಿಯೊಂದಿಗೆ ತಂಡಕ್ಕೆ ಮರಳಿದ್ದಾರೆ. ವೇಗಿ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ. ಬಹುತೇಕ ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ತಂಡವನ್ನೇ ಐರ್ಲೆಂಡ್ ಸರಣಿಗೂ ಆರಿಸಲಾಗಿದ್ದು, ಏಷ್ಯಾಡ್ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್‌ಗೆ ಉಪನಾಯಕ ಪಟ್ಟ ವಹಿಸಲಾಗಿದೆ. ಸಂಜು ಸ್ಯಾಮ್ಸನ್‌ಗೆ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ ಏಷ್ಯಾಡ್ ತಂಡಕ್ಕೆ ಆಯ್ಕೆಯಾಗಿರುವ ರಾಹುಲ್ ತ್ರಿಪಾಠಿ, ಶಿವಂ ಮಾವಿ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಐರ್ಲೆಂಡ್ ಪ್ರವಾಸದಿಂದ ಕೈಬಿಡಲಾಗಿದೆ. ಐರ್ಲೆಂಡ್ ವಿರುದ್ಧದ 2 ಮತ್ತು 3ನೇ ಟಿ20 ಪಂದ್ಯಗಳು ಆಗಸ್ಟ್ 20 ಮತ್ತು 23ರಂದು ನಡೆಯಲಿವೆ.
ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿ.ಕೀ), ಜಿತೇಶ್ ಶರ್ಮ (ವಿ.ಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.