ಭಾರತಕ್ಕೆ ಬೇಕಿರುವುದು 3 ಅಥವಾ 4 ವಿಕೆಟ್​? ಕ್ರಿಸ್​ ವೋಕ್ಸ್​ ಬ್ಯಾಟ್​ ಮಾಡಿದ್ರೆ ಬದಲಾಗಲಿದೆ ಗೆಲುವಿನ ಲೆಕ್ಕಾಚಾರ! IND vs ENG

ವಿಜಯವಾಣಿ - 2025-08-04T115521.439
Published on

IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಶುಭಮನ್ ಗಿಲ್ ಪಡೆ ಗೆಲುವಿಗೆ ಇನ್ನಷ್ಟು ಹತ್ತಿರವಾಗಿದೆ. ಇದೇ ವೇಳೆ ಇಂಗ್ಲೆಂಡ್​ ಕೂಡ ಬಲಿಷ್ಠ ಪ್ರದರ್ಶನದ ಮೂಲಕ ಭಾರೀ ಪೈಪೋಟಿ ನೀಡಿದ್ದು, ಎರಡೂ ತಂಡವು ರೋಚಕ ಗೆಲುವಿಗೆ ಸನ್ನಿಹಿತವಾಗಿದೆ.

ಲಂಡನ್​​ನ ಕೆನ್ನಿಂಗ್ಟನ್ ಓವಲ್​ನಲ್ಲಿ ನಡೆಯುತ್ತಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್​ ಇದೀಗ ಕ್ಲೈಮ್ಯಾಕ್ಸ್​ ಹಂತವನ್ನು ತಲುಪಿದೆ. ಪಂದ್ಯದ ಕೊನೆಯ ದಿನ ಇಂದು ನಡೆಯಲಿದೆ. ಒಂದೆಡೆ ಗೆಲುವಿಗಾಗಿ ಇಂಗ್ಲೆಂಡ್​ಗೆ 35 ರನ್​ಗಳ ಅಗತ್ಯವಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್​ಗಳು ಬೇಕಿದೆ. ಆದರೆ, ಇಲ್ಲೊಂದು ಸಣ್ಣ ಗೊಂದಲ ಕ್ರಿಕೆಟ್​ ಪ್ರಿಯರಲ್ಲಿ ಕಾಡುತ್ತಿದೆ. ಆ ಗೊಂದಲವೇ ಸ್ಟಾರ್ ಬ್ಯಾಟರ್​ ಕ್ರಿಸ್​ ವೋಕ್ಸ್​.

ನಾಲ್ಕನೇ ದಿನದಂದು, ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಶತಕ ಬಾರಿಸಿ, ತಂಡದ ಪರ ಮಿಂಚಿದರು. ಒಂದು ಹಂತದಲ್ಲಿ ಸೋಲಿನತ್ತ ಸಾಗುತ್ತಿದ್ದ ಟೀಮ್ ಇಂಡಿಯಾಗೆ ನಾಯಕ ಶುಭಮನ್ ಗಿಲ್ ತಮ್ಮ ತಂಡದ ಆಟಗಾರರಿಗೆ ಸ್ಫೂರ್ತಿ ನೀಡಿದರು. "ಇನ್ನೊಂದು ಗಂಟೆ ನಾವೆಲ್ಲರೂ ಮತ್ತಷ್ಟು ಪೈಪೋಟಿಗಿಳಿದು ಆಡೋಣ. ಆ ನಂತರ ವಿಶ್ರಾಂತಿ ತೆಗೆದುಕೊಳ್ಳಬಹುದು" ಎಂದು ಗಿಲ್ ಹೇಳಿರುವುದು ಸ್ಟಂಪ್​ನ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ.

ಹೀಗೆ ಹೇಳಿದ ಕೆಲವೇ ನಿಮಿಷಗಳಲ್ಲಿ, ಟೀಮ್ ಇಂಡಿಯಾ ಭರ್ಜರಿ ಕಮ್​ಬ್ಯಾಕ್ ಮಾಡಿತು. ಶತಕದಾಟ ಪ್ರದರ್ಶಿಸಿದ ಬ್ಯಾಟರ್​ಗಳ ವಿಕೆಟ್‌ ಪಡೆಯುವುದರ ಜೊತೆಗೆ, ಅದ್ಭುತ ಆಟವನ್ನು ತೋರಿತು. ಇದು ಇಂಗ್ಲೆಂಡ್ ತಂಡದಲ್ಲಿ ಆತಂಕ ತಂದೊಡ್ಡಿತು. ನಾಲ್ಕನೇ ದಿನದ ಅಂತ್ಯದ ವೇಳೆಗೆ, ಇಂಗ್ಲೆಂಡ್ 6 ವಿಕೆಟ್‌ಗಳ ನಷ್ಟಕ್ಕೆ 339 ರನ್ ಗಳಿಸಿತು. ಜೇಮೀ ಸ್ಮಿತ್ (2) ಮತ್ತು ಜೇಮೀ ಓವರ್ಟನ್ (0) ಕ್ರೀಸ್‌ನಲ್ಲಿದ್ದಾರೆ. ಗಾಯದ ಕಾರಣದಿಂದಾಗಿ ಕ್ರಿಸ್​ ವೋಕ್ಸ್ ಅಖಾಡಕ್ಕೆ ಇಳಿಯಲಿಲ್ಲ.

ವರದಿಗಳ ಪ್ರಕಾರ, ಇಂಜುರಿ ಕಾರಣ ಕ್ರಿಸ್​ ವೋಕ್ಸ್​ ಬ್ಯಾಟಿಂಗ್ ಮಾಡುವುದು ಬಹುತೇಕ ಅನುಮಾನ. ಆದರೆ, ತಂಡದ ಗೆಲುವಿಗಾಗಿ ಅವರು ಕಮ್​ಬ್ಯಾಕ್​ ಮಾಡಿದರೆ ಯಾವುದೇ ಆಶ್ಚರ್ಯವಿಲ್ಲ. ಇದೇನಾದರೂ ಸಂಭವಿಸಿದರೆ, ಟೀಮ್ ಇಂಡಿಯಾಗೆ ಸವಾಲಿನ ಪರಿಸ್ಥಿತಿ ಎದುರಾಗಲಿದೆ. ಅಕಸ್ಮಾತ್​, ಕ್ರಿಸ್​ ಕ್ರೀಸ್​ಗೆ ಬಂದರೆ ಭಾರತಕ್ಕೆ 4 ವಿಕೆಟ್​ಗಳ ಅಗತ್ಯವಿದೆ. ಇಲ್ಲದೆ ಹೋದ್ರೆ, ಕೇವಲ ಮೂರು ವಿಕೆಟ್‌ಗಳು ಪಡೆದು, ಸರಣಿಯನ್ನು ಸಮಬಲಗೊಳಿಸಬಹುದಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net