ಬೇಡ ಅಂದರು ಒತ್ತಾಯ: ರಿಷಭ್​ ಪಂತ್​ ನಡೆಗೆ ಮೈದಾನದಲ್ಲೇ ಕೋಪಗೊಂಡ ನಾಯಕ ಶುಭಮಾನ್​ ಗಿಲ್! Shubman Gill ​

Shubman Gill
Published on

Shubman Gill : ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಂತಿಮ ಹಂತಕ್ಕೆ ತಲುಪಿದೆ. ಈ ಪಂದ್ಯದಲ್ಲಿ ಪ್ರವಾಸಿ ತಂಡ ಭಾರತ, ಗೆಲುವಿನಿಂದ 7 ವಿಕೆಟ್‌ಗಳ ದೂರದಲ್ಲಿದ್ದರೆ, ಆತಿಥೇಯ ಇಂಗ್ಲೆಂಡ್ ಸೋಲಿನಿಂದ ತಪ್ಪಿಸಿಕೊಳ್ಳಲು 536 ರನ್‌ಗಳ ದೂರದಲ್ಲಿದೆ. 608 ರನ್‌ಗಳ ಬೃಹತ್ ಗುರಿಯೊಂದಿಗೆ ಮೈದಾನಕ್ಕೆ ಇಳಿದ ಬೆನ್​ ಸ್ಟೋಕ್ಸ್ ಪಡೆ ನಾಲ್ಕನೇ ದಿನದ ಅಂತ್ಯಕ್ಕೆ ಮೂರು ವಿಕೆಟ್‌ಗಳ ನಷ್ಟಕ್ಕೆ 72 ರನ್ ಗಳಿಸಿದೆ.

ಓಲಿ ಪೋಪ್ (24) ಮತ್ತು ಹ್ಯಾರಿ ಬ್ರೂಕ್ (15) ಸದ್ಯ ಕ್ರೀಸ್‌ನಲ್ಲಿದ್ದಾರೆ. ಭಾರತವು ಪಂದ್ಯದ ಕೊನೆಯ ದಿನದಂದು ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ ಎಡ್ಜ್‌ಬಾಸ್ಟನ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ನಾಯಕ ಶುಭಮಾನ್ ಗಿಲ್, ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್​ ಪಂತ್ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಡಿಆರ್‌ಎಸ್ ಕುರಿತು ನಾಯಕ ಮತ್ತು ಉಪನಾಯಕನ ನಡುವೆ ಸಣ್ಣ ವಾಗ್ವಾದ ನಡೆದಿದೆ.

ಅಷ್ಟಕ್ಕೂ ನಡೆದಿದ್ದೇನು?

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ವೇಗಿಗಳಾದ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಇಂಗ್ಲೆಂಡ್‌ನ ಆರಂಭಿಕ ಆಟಗಾರರಾದ ಜ್ಯಾಕ್ ಕ್ರಾಲಿ ಮತ್ತು ಬೆನೆಡಿಕ್ಟ್ ಅವರನ್ನು ತಮ್ಮ ಅದ್ಭುತ ಬೌಲಿಂಗ್ ಮೂಲಕ ಔಟ್​ ಮಾಡಿದರು. ಈ ಅನುಕ್ರಮದಲ್ಲಿ, ಗಿಲ್ ಮೂರನೇ ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ ಬೌಲಿಂಗ್​ ನೀಡಿದರು. ಹತ್ತನೇ ಓವರ್ ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ, ಜೋ ರೂಟ್‌ಗೆ ಮೂರನೇ ಎಸೆತವನ್ನು ಫುಲ್ಲರ್ ಎಸೆತವಾಗಿ ಎಸೆದರು. ರೂಟ್ ಚೆಂಡನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಚೆಂಡು ತಪ್ಪಿ ಅವರ ಪ್ಯಾಡ್‌ಗೆ ಬಡಿಯಿತು. ಈ ವೇಳೆ ಪ್ರಸಿದ್ಧ ಕೃಷ್ಣ ಎಲ್‌ಬಿಗೆ ಮನವಿ ಮಾಡಿದರು. ಆದರೆ, ಅಂಪೈರ್ ತಲೆ ಅಲ್ಲಾಡಿಸಿ ನಾಟ್ ಔಟ್ ಎಂದು ಹೇಳಿದರು.

ಆದಾಗ್ಯೂ, ಚೆಂಡು ಲೆಗ್ ಸೈಡ್‌ಗೆ ಹೋಗುತ್ತಿರುವಂತೆ ತೋರುತ್ತಿದ್ದರಿಂದ ಗಿಲ್ ರಿವ್ಯೂ ತೆಗೆದುಕೊಳ್ಳಲು ಆಸಕ್ತಿ ಹೊಂದಿರಲಿಲ್ಲ. ಆದರೆ, ರಿಷಭ್ ಪಂತ್ ಅವರನ್ನು ಒತ್ತಾಯಿಸಿ ರಿವ್ಯೂಗೆ ಹೋಗುವಂತೆ ಹೇಳಿದರು. ಕೊನೆಯ ಸೆಕೆಂಡುಗಳಲ್ಲಿ ಗಿಲ್ ರಿವ್ಯೂಗೆ ಸೂಚಿಸಿದರು. ಆದರೆ, ಚೆಂಡು ಸ್ಟಂಪ್‌ಗಳನ್ನು ತಪ್ಪಿಸಿ ಲೆಗ್ ಕೆಳಗೆ ಹೋಗಿರುವುದನ್ನು ರಿವ್ಯೂ ತೋರಿಸಿದೆ. ಈ ವೇಳೆ ಶುಭಮಾನ್ ಕೋಪದಿಂದ ಪಂತ್ ಬಳಿಗೆ ಹೋದರು. ಪಂತ್​ಗೆ ತಕ್ಷಣ ನಾಯಕನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಆದರೆ, ಗಿಲ್ ಕೋಪದಿಂದ ಪಂತ್ ಕಡೆಗೆ ನೋಡಿ ತಮ್ಮ ಫೀಲ್ಡಿಂಗ್ ಸ್ಥಾನವನ್ನು ತಲುಪಿದರು. ಆದಾಗ್ಯೂ, ಆಕಾಶ್ ದೀಪ್ ನಂತರದ ಓವರ್‌ನಲ್ಲಿ ರೂಟ್ ಅವರನ್ನು ಕ್ಲೀನ್ ಬೋಲ್ಡ್​ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net