

IND vs ENG ODI: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಭಾರತ ಜಯ ಸಾಧಿಸಿತು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಆಡಿದ ಟೀಮ್ ಇಂಡಿಯಾ, ಸ್ಪಿನ್ ದಾಳಿಯಿಂದ ಹಿಡಿದು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಟಿ20 ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೇ ಖುಷಿಯಲ್ಲಿ ಆಂಗ್ಲರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿರುವ ಭಾರತ, ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಎದುರುನೋಡುತ್ತಿದೆ. ಇದರ ಬೆನ್ನಲ್ಲೇ ತಂಡದಲ್ಲಿ ಮಹತ್ವದ ಬದಲಾವಣೆ ಕೂಡ ಆಗಿದೆ.
ಕಳೆದ ಮೂರು ಟೆಸ್ಟ್ ಸರಣಿಗಳಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದ ಕ್ಯಾಪ್ಟನ್ ರೋಹಿತ್ ಶರ್ಮ, ಮೂರು ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಇದೀಗ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಕುಲದೀಪ್ ಯಾದವ್ 50 ಓವರ್‌ಗಳ ಪಂದ್ಯಗಳಿಗೆ ಮರಳಿದ್ದಾರೆ. ಒಂದೆಡೆ, ವಿರಾಟ್, ರೋಹಿತ್ ಮರಳಿರುವುದು ಖುಷಿ ನೀಡಿದರೆ, ಮತ್ತೊಂದೆಡೆ, ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರೇ ಏಕದಿನ ಸರಣಿ ಪಂದ್ಯದಿಂದ ಹೊರಗುಳಿದಿರುವುದು ಸದ್ಯ ಹಲವರಲ್ಲಿ ಬೇಸರ ಮೂಡಿಸಿದೆ.
ಹೊರಗೆ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮ, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ, ಶಿವಂ ದುಬೆ, ರಮಣದೀಪ್ ಸಿಂಗ್, ರಿಂಕು ಸಿಂಗ್ ಮತ್ತು ಧ್ರುವ್ ಜುರೆಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡದ 10 ಆಟಗಾರರಾಗಿದ್ದಾರೆ. ಸ್ಯಾಮ್ಸನ್, ಅಭಿಷೇಕ್, ತಿಲಕ್, ಸೂರ್ಯ, ಬಿಷ್ಣೋಯಿ ಮತ್ತು ಚಕ್ರವರ್ತಿ ಟಿ20 ಸರಣಿಯ ಎಲ್ಲಾ ಐದು ಪಂದ್ಯಗಳನ್ನು ಆಡಿದ್ದರೆ, ರಮಣದೀಪ್‌ಗೆ ಯಾವುದೇ ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಈ ಮಧ್ಯೆ ಜುರೆಲ್ ಮತ್ತು ದುಬೆ ಎರಡು ಪಂದ್ಯಗಳಲ್ಲಿ ಆಡಿದ್ದರೆ, ರಿಂಕು ಮೂರು ಟಿ20 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.
ಒಳಗೆ: 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಕೆ.ಎಲ್. ರಾಹುಲ್ ಇದೀಗ ಏಕದಿನ ಸರಣಿಗೆ ಭಾರತೀಯ ತಂಡಕ್ಕೆ ಬಿಗ್ ಕಮ್ಬ್ಯಾಕ್ ಮಾಡಿದ್ದಾರೆ. 2024ರ ಅಕ್ಟೋಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಪರ ಕಡೆಯ ಬಾರಿಗೆ ಆಡಿದ್ದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಆಗಸ್ಟ್ 7, 2024ರಂದು ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಈಗ ಏಕದಿನ ತಂಡದ ಭಾಗವಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ತಂಡದ ಭಾಗವಾಗಿದ್ದಾರೆ,(ಏಜೆನ್ಸೀಸ್).