IND vs ENG: ರೋಹಿತ್ ಅಬ್ಬರಕ್ಕೆ ಬೆದರಿದ ಆಂಗ್ಲರು! ಏಕದಿನ ಸರಣಿ ಸೋಲಿಗೆ ಕಾರಣ ಬಿಚ್ಚಿಟ್ಟ ಜಾಸ್​​ ಬಟ್ಲರ್​

ವಿಜಯವಾಣಿ - 2025-02-10T102603.019
Published on

IND vs ENG: ನಿನ್ನೆ (ಫೆ.09) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಂಗ್ಲರನ್ನು 4 ವಿಕೆಟ್​ಗಳ ಅಂತರದಲ್ಲಿ ಬಗ್ಗುಬಡಿದ ಭಾರತ, ಟಿ20 ಸರಣಿ ಬಳಿಕ ಏಕದಿನ ಸರಣಿಯನ್ನೂ 2-0 ಅಂತರದಲ್ಲಿ ಗೆದ್ದು ಬೀಗಿತು. ನಾಯಕನ ಜವಾಬ್ದಾರಿ ಹಾಗೂ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನೇ ತೋರುತ್ತಿದ್ದ ರೋಹಿತ್ ಶರ್ಮ ಬಗ್ಗೆ ವ್ಯಾಪಕ ಬೇಸರ ವ್ಯಕ್ತಪಡಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿನ್ನೆ ಹಿಟ್​ಮ್ಯಾನ್​ ಶತಕದಾಟ ರೋಮಾಂಚನಗೊಳಿಸಿತು. ರೋಹಿತ್ ಶರ್ಮ ಪ್ರದರ್ಶನ ಟೀಕಿಸಿ, ವ್ಯಂಗ್ಯವಾಡಿದ್ದ ಮಾಜಿ ಕ್ರಿಕೆಟಿಗರು ಇದೀಗ ಅವರ ಸ್ಪೋಟಕ ಬ್ಯಾಟಿಂಗ್​ ಕಂಡು ಗಪ್​ಚುಪ್​ ಆಗಿದ್ದಾರೆ.

30ರಿಂದ 50 ರನ್

ಇನ್ನು ತಮ್ಮ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಒಂದು ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡಿರುವುದು ಸದ್ಯ ಇಂಗ್ಲೆಂಡ್​ ತಂಡಕ್ಕೆ ಭಾರೀ ಬೇಸರ ಮೂಡಿಸಿದೆ. ಭಾನುವಾರ (ಫೆ.09) ಕಟಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಭಾರತ 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಜಾಸ್​ ಬಟ್ಲರ್, "ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಗೆಲುವು ನಿಜಕ್ಕೂ ರೋಚಕವಾಗಿತ್ತು. ರೋಹಿತ್ ಶರ್ಮ ತಮ್ಮ ಬಿರುಗಾಳಿಯ ಇನ್ನಿಂಗ್ಸ್‌ನಿಂದ ಇಡೀ ಪಂದ್ಯವನ್ನು ನಮ್ಮಿಂದ ದೂರ ತೆಗೆದುಕೊಂಡು ಹೋದರು. ನಾವಿನ್ನೂ 30ರಿಂದ 50 ರನ್ ಗಳಿಸಿದಿದ್ದರೆ, ಪಂದ್ಯದ ಫಲಿತಾಂಶ ಮತ್ತೊಂದು ಹಂತಕ್ಕೆ ಹೋಗುತ್ತಿತ್ತು" ಎಂದರು.

350 ತಲುಪಿದ್ದರೆ

"ಗೆಲುವಿನ ಎಲ್ಲಾ ಕ್ರೆಡಿಟ್​ ರೋಹಿತ್ ಅವರಿಗೆ ಸಲ್ಲುತ್ತದೆ. ಮೈದಾನದಲ್ಲಿ ಅವರ ಬ್ಯಾಟಿಂಗ್ ಅಬ್ಬರ ಬಹಳ ಚೆನ್ನಾಗಿತ್ತು. ಕಳೆದ ಕೆಲವು ವರ್ಷಗಳಿಂದ ರೋಹಿತ್ ಶರ್ಮ ಏಕದಿನ ಕ್ರಿಕೆಟ್‌ನಲ್ಲಿ ಹೀಗೆ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಸ್ಕೋರ್‌ಬೋರ್ಡ್‌ನಲ್ಲಿ ನಾವು ದೊಡ್ಡ ಗುರಿಯನ್ನು ನಿಗದಿಪಡಿಸಬೇಕೆಂದು ಅಂದುಕೊಂಡಿದ್ದೆವು. ನಮ್ಮ ಬ್ಯಾಟರ್​ಗಳು ಇನ್ನೂ ಉತ್ತಮವಾಗಿ ಆಡಬೇಕಿತ್ತು. ತಂಡದ ಸ್ಕೋರ್ 350 ತಲುಪಿದ್ದರೆ, ಆಟದ ದಿಕ್ಕು ಬದಲಾಗುತ್ತಿತ್ತು. ಪವರ್ ಪ್ಲೇನಲ್ಲಿ ನಾವು ನಿರೀಕ್ಷೆ ತಕ್ಕಂತೆ ಆಡಿದ್ದೇವೆ ಮತ್ತು ಎದುರಾಳಿ ತಂಡ ಕೂಡ ಚೆನ್ನಾಗಿ ಆಡಿದೆ. ಅಂತಿಮ ಹಣಾಹಣಿಯಲ್ಲಿ ರಿಸಲ್ಟ್​ ನಮ್ಮ ಪರವಾಗಿಲ್ಲದಿದ್ದರೂ ಪರವಾಗಿಲ್ಲ. ನಾವು ಸಕಾರಾತ್ಮಕ ಮನೋಭಾವದಿಂದಲೇ ಮುಂದುವರಿಯಬೇಕು" ಎಂದು ಬಟ್ಲರ್ ಹೇಳಿದ್ದಾರೆ.

ಸ್ಫೋಟಕ ಇನ್ನಿಂಗ್ಸ್​ ಅಗತ್ಯ

ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಕ್ಯಾಪ್ಟನ್ ಜಾಸ್ ಬಟ್ಲರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡದ ಪರ ಜೋ ರೂಟ್ (69 ರನ್, 72 ಎಸೆತಗಳಲ್ಲಿ 6 ಬೌಂಡರಿಗಳು), ಡಕೆಟ್ (65 ರನ್​, 56 ಎಸೆತಗಳಲ್ಲಿ 10 ಬೌಂಡರಿಗಳು), ಮತ್ತು ಲಿವಿಂಗ್​ ಸ್ಟೋನ್​ (41 ರನ್​, 32 ಎಸೆತಗಳಲ್ಲಿ 2 ಬೌಂಡರಿಗಳು, 2 ಸಿಕ್ಸರ್‌ಗಳು) ಅಮೋಘ ಪ್ರದರ್ಶನದಿಂದ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 304 ರನ್ ಗಳಿಸಿ, ಆಲ್​ಔಟ್ ಆಯಿತು.

ಇನ್ನು ಜಾಸ್ ಬಟ್ಲರ್ (34), ಹ್ಯಾರಿ ಬ್ರೂಕ್ (31), ಮತ್ತು ಫಿಲ್ ಸಾಲ್ಟ್ (26) ಅವರ ಬ್ಯಾಟ್​ನಿಂದ ಹೆಚ್ಚುವರಿ ರನ್ ಬರದೆ ಹೋಗಿದ್ದು, ತಂಡದ ಸೋಲಿಗೆ ಕಾರಣವಾಯಿತು. ಟೀಮ್ ಇಂಡಿಯಾ ಬೌಲರ್‌ಗಳ ಪರ ಮೈದಾನದಲ್ಲಿ ತಮ್ಮ ಕೈಚಳ ತೋರಿದ ರವೀಂದ್ರ ಜಡೇಜಾ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಶಮಿ, ರಾಣಾ, ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

ಟೀಮ್ ಇಂಡಿಯಾ ಬ್ಯಾಟರ್​ಗಳ ಕೊಡುಗೆ

ಇಂಗ್ಲೆಂಡ್​ ನೀಡಿದ ಬೃಹತ್​ ಗುರಿಯನ್ನು ಬೆನ್ನಟ್ಟಿದ ಭಾರತ ಪರ ರೋಹಿತ್ ಶರ್ಮ(119 ರನ್​, 90 ಎಸೆತಗಳಲ್ಲಿ 12 ಬೌಂಡರಿಗಳು, 7 ಸಿಕ್ಸರ್‌ಗಳು) ಸ್ಫೋಟಕ ಶತಕ ಸಿಡಿಸಿದರೆ, ಶುಭಮನ್ ಗಿಲ್ (60 ರನ್​, 9 ಬೌಂಡರಿ, 52 ಎಸೆತಗಳಲ್ಲಿ 1 ಸಿಕ್ಸರ್) ಅರ್ಧಶತಕ ಗಳಿಸಿದರು. ಇನ್ನು ಶ್ರೇಯಸ್ ಅಯ್ಯರ್ (44 ರನ್​, 3 ಬೌಂಡರಿ, 47 ಎಸೆತಗಳಲ್ಲಿ 1 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ (41 ನಾಟ್ ಔಟ್, 43 ಎಸೆತಗಳಲ್ಲಿ 4 ಬೌಂಡರಿ) ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಮೊದಲ ಪಂದ್ಯದಲ್ಲಿ ಆಡದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಎರಡನೇ ಪಂದ್ಯದಲ್ಲಿ ಮೈದಾನಕ್ಕೆ ಮರಳಿದರು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡದ ಕೊಹ್ಲಿ, ಕೇವಲ 5 ರನ್ ಗಳಿಸುವ ಮೂಲಕ ಇಲ್ಲಿಯೂ ತಮ್ಮ ಕಳಪೆ ಫಾರ್ಮ್​ನ ಮುಂದುವರಿಸಿದರು. ಇದು ಫ್ಯಾನ್ಸ್​ಗಳ ಬೇಸರಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಬೌಲರ್​ಗಳ ಪೈಕಿ ಜೇಮೀ ಓವರ್ಟನ್ 2 ವಿಕೆಟ್ ಪಡೆದರೆ, ಆದಿಲ್ ರಶೀದ್, ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಗಸ್ ಅಟ್ಕಿನ್ಸನ್ ತಲಾ ಒಂದು ವಿಕೆಟ್ ಪಡೆದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net