

IND vs ENG : ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಆಲ್ರೌಂಡರ್ ಅನ್ಶುಲ್ ಕಾಂಬೋಜ್ ಸ್ಥಾನ ಪಡೆದಿದ್ದಾರೆ. ಸ್ಟಾರ್ ಕ್ರಿಕೆಟಿಗರು ಗಾಯಗೊಂಡಿರುವ ಕಾರಣ ಹರಿಯಾಣದ ಆಟಗಾರನಿಗೆ ಈ ಸುವರ್ಣಾವಕಾಶ ಒದಗಿ ಬಂದಿದೆ. ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಗಿಡಲಾಗಿದ್ದು, ವೇಗಿ ಅರ್ಷದೀಪ್ ಸಿಂಗ್ ಅವರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ.
ಮತ್ತೊಂದೆಡೆ, ಎರಡನೇ ಟೆಸ್ಟ್ ಪಂದ್ಯದ ಹೀರೋ ವೇಗಿ ಆಕಾಶ್ ದೀಪ್ ಅವರ ಫಿಟ್ನೆಸ್ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ. ಈ ಸಂದರ್ಭದಲ್ಲಿ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಬಲಗೈ ವೇಗಿ ಅನ್ಶುಲ್ ಕಾಂಬೋಜ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಈ ವಿಚಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ (ಜುಲೈ 21) ಅಧಿಕೃತವಾಗಿ ಘೋಷಿಸಿತು.
ಆಯ್ಕೆದಾರರು ತೆಗೆದುಕೊಂಡ ನಿರ್ಧಾರವನ್ನು ಭಾರತದ ಮಾಜಿ ಕ್ರಿಕೆಟಿಗ ಮತ್ತು ನಿರೂಪಕ ಆಕಾಶ್ ಚೋಪ್ರಾ ತಪ್ಪೆಂದು ಎಂದು ಟೀಕಿಸಿದ್ದಾರೆ. ಹರ್ಷಿತ್ ರಾಣಾ ಬದಲಿಗೆ ಅನ್ಶುಲ್ ಕಾಂಬೋಜ್ ಅವರನ್ನು ಹೇಗೆ ಆಯ್ಕೆ ಮಾಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಟೀಮ್ ಇಂಡಿಯಾದಲ್ಲಿ ಏನು ನಡೆಯುತ್ತಿದೆ? ನಿಜಕ್ಕೂ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಅನ್ಶುಲ್ ಆಯ್ಕೆಯಿಂದ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲದಿದ್ದರು ಕೂಡ ಇಂಗ್ಲೆಂಡ್ 'ಎ' ವಿರುದ್ಧದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಹರ್ಷಿತ್ ರಾಣಾ ಮತ್ತು ಅನ್ಶುಲ್ ಕಾಂಬೋಜ್ ಉತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ತೆಂಡೂಲ್ಕರ್-ಆಂಡರ್ಸನ್ ಟ್ರೋಫಿ ತಂಡದಲ್ಲಿ ಹರ್ಷಿತ್ ರಾಣಾ ಅವರನ್ನು ಹೆಚ್ಚುವರಿ ಆಟಗಾರನಾಗಿ ಆಡಳಿತ ಮಂಡಳಿ ಇರಿಸಿಕೊಂಡಿತ್ತು ಮತ್ತು ಅನ್ಶುಲ್ರನ್ನು ಹೊರಗಿಡಲಾಗಿತ್ತು. ಆದರೆ, ಎರಡನೇ ಟೆಸ್ಟ್ ಪಂದ್ಯದ ವೇಳೆ ಹರ್ಷಿತ್ ಅವರನ್ನು ಸಹ ತಂಡದಿಂದ ಕೈಬಿಡಲಾಗಿತ್ತು. ಇದರಿಂದಾಗಿ ಹರ್ಷಿತ್, ದೇಶಕ್ಕೆ ಹಿಂದಿರುಗಬೇಕಾಯಿತು. ಈಗ, ಗಾಯದ ಭೀತಿಯ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿ ಅನ್ಶುಲ್ಗೆ ಮಣೆ ಹಾಕಿದೆ.
ಈ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಮಾತನಾಡಿ, ಹರ್ಷಿತ್ ರಾಣಾ ಹೋಗಿದ್ದಾರೆ. ಈಗ ಇವನೇ? ಅವನೇ? ಟೀಮ್ ಇಂಡಿಯಾದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ನಾವೆಲ್ಲರೂ ಆಶ್ಚರ್ಯಪಡಬೇಕೇ? ತಂಡಕ್ಕೆ ಯಾರು ಬರುತ್ತಾರೆ? ಯಾರನ್ನು ಯಾವಾಗ ಕೈಬಿಡಲಾಗುತ್ತದೆ? ಈ ವಿಷಯಗಳನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ ಎಂದು ಪ್ರಶ್ನಿಸಿರುವ ಆಕಾಶ್ ಚೋಪ್ರಾ, ಭಾರತ ಎ ಪರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅನ್ಶುಲ್ ಕಾಂಬೋಜ್ ಉತ್ತಮವಾಗಿ ಆಡಿದರು. ಆದರೆ, ನೀವು ಹರ್ಷಿತ್ ರಾಣಾ ಅವರನ್ನು ಮೊದಲು ಟೀಮ್ ಇಂಡಿಯಾದಲ್ಲಿಯೇ ಇರಿಸಿಕೊಳ್ಳಲು ನಿರ್ಧರಿಸಿದ್ದೀರಿ. ಆ ಸಮಯದಲ್ಲಿ, ನಾವು ಅದೇ ನಿರ್ಧಾರಕ್ಕೆ ಬದ್ಧರಾಗಿರಬೇಕು. ಆದರೆ, ಈಗ ಅವರು ಮನೆಗೆ ಮರಳಿದ್ದಾರೆ. ಈಗ ನೋಡಿದರೆ ಅನ್ಶುಲ್ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಎಲ್ಲವೂ ಅವ್ಯವಸ್ಥೆಯಲ್ಲಿದೆ. ಈ ವಿಷಯದಲ್ಲಿ ಮ್ಯಾನೇಜ್ಮೆಂಟ್ಗೆ ಸ್ಪಷ್ಟತೆ ಇರಬಹುದು ಆದರೆ, ಯಾರೂ ನಮಗೆ ಏನನ್ನೂ ಹೇಳುತ್ತಿಲ್ಲ. ಆದಾಗ್ಯೂ, ಟೀಮ್ ಇಂಡಿಯಾದಲ್ಲಿ ಇದು ನಿರಂತರವಾಗಿ ನಡೆಯುತ್ತಿದೆ. ಆಶ್ಚರ್ಯಪಡಲು ಏನೂ ಇಲ್ಲ. ಆದಾಗ್ಯೂ, ಅನ್ಶುಲ್ ಕಾಂಬೋಜ್ ತಂಡದಲ್ಲಿರಲು ಅರ್ಹರು. ಅಂತಿಮವಾಗಿ, ಅವರು ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದರು.
23 ವರ್ಷದ ಹರ್ಷಿತ್ ರಾಣಾ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು. ಆ ಸರಣಿಯಲ್ಲಿ ಅವರು ಎರಡು ಪಂದ್ಯಗಳನ್ನು ಆಡಿದರು ಮತ್ತು ನಾಲ್ಕು ವಿಕೆಟ್ಗಳನ್ನು ಪಡೆದರು. ಆದಾಗ್ಯೂ, ಇಂಗ್ಲೆಂಡ್-ಎ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯಲ್ಲಿ, ಅವರು ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಯಿತು. ಮತ್ತೊಂದೆಡೆ, 24 ವರ್ಷದ ಅನ್ಶುಲ್ ಕಾಂಬೋಜ್ ನಾರ್ಥಾಂಪ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ನಾಲ್ಕು ವಿಕೆಟ್ಗಳೊಂದಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಇದಲ್ಲದೆ, ಅವರು ಎರಡನೇ ಇನ್ನಿಂಗ್ಸ್ನಲ್ಲಿ ಒಂಬತ್ತನೇ ಸ್ಥಾನದಲ್ಲಿ ಅಜೇಯ ಅರ್ಧಶತಕ (51) ಬ್ಯಾಟಿಂಗ್ನೊಂದಿಗೆ ಮಿಂಚಿದರು.
ಅಂದಹಾಗೆ, ಶುಭಮಾನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ಗಳ ಸರಣಿಯಲ್ಲಿ 1-2 ರಿಂದ ಹಿಂದುಳಿದಿದೆ. ಮ್ಯಾಂಚೆಸ್ಟರ್ನಲ್ಲಿ ಉಭಯ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ನಾಳೆ (ಜುಲೈ 23) ಯಿಂದ ಆರಂಭವಾಗಲಿದೆ. (ಏಜೆನ್ಸೀಸ್)