ನಿತೀಶ್ ರೆಡ್ಡಿ ಬದಲಿಗೆ ಈತನನ್ನು ಆಡಿಸಿ! 4ನೇ ಟೆಸ್ಟ್​ಗೆ ಈ ಬದಲಾವಣೆ ಅಗತ್ಯ: ಹರ್ಭಜನ್ ಸಿಂಗ್​ | IND vs ENG

ವಿಜಯವಾಣಿ (31)
Published on

IND vs ENG: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಬೆನ್​ ಸ್ಟೋಕ್ಸ್​ ಪಡೆ ಮುನ್ನಡೆ ಸಾಧಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲುಂಡಿರುವ ಟೀಮ್ ಇಂಡಿಯಾಗೆ ನಾಲ್ಕನೇ ಟೆಸ್ಟ್​ನಲ್ಲಿ ಗೆಲುವಿನ ಅನಿವಾರ್ಯತೆ ಎದುರಾಗಿದೆ. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗರಿಂದ ತಂಡದಲ್ಲಿ ಒಂದಷ್ಟು ಬದಲಾವಣೆಗಳ ಅಗತ್ಯವಿದೆ ಎಂಬ ಕೂಗಗಳು ಕೇಳಿಬಂದಿವೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಇದೇ ಜುಲೈ 23ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಲಾರ್ಡ್ಸ್ ಟೆಸ್ಟ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಸನ್ನದ್ಧವಾಗಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಗಿಲ್ ತಂಡ ನೆಟ್ಸ್‌ನಲ್ಲಿ ಶ್ರಮಿಸುತ್ತಿದ್ದೇ ಆದರೂ ಮಾಜಿ ಕ್ರಿಕೆಟಿಗರ ಬದಲಾವಣೆಯ ಕೂಗು ಸದ್ಯ ಕ್ರಿಕೆಟ್​ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಾಲಿಗೆ ಇದೀಗ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಸೇರ್ಪಡೆಯಾಗಿದ್ದಾರೆ.

"ಪ್ಲೇಯಿಂಗ್ ಇಲೆವನ್​ನಲ್ಲಿ ಒಂದಷ್ಟು ಬದಲಾವಣೆಯ ಅಗತ್ಯವಿದೆ. ನಾಲ್ಕನೇ ಟೆಸ್ಟ್​ ಈಗ ಮ್ಯಾಂಚೆಸ್ಟರ್​ನಲ್ಲಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಎರಡನೇ ಟೆಸ್ಟ್‌ನಲ್ಲಿ ಕುಲದೀಪ್ ಯಾದವ್​ರನ್ನು ಆಡಿಸಬೇಕೆಂದು ನಾನು ಸೂಚಿಸಿದ್ದೆ. ಆದರೆ, ಅವರಿಗೆ ಅಂತಿಮ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಅದಾದ ಬಳಿಕ ಲಾರ್ಡ್ಸ್​ನಲ್ಲಿ ನಡೆದ ಟೆಸ್ಟ್‌ನಲ್ಲಿಯೂ ಅವರಿಗೆ ಅವಕಾಶ ಕೊಡಿ ಎಂದಿದ್ದೆ. ಇದಕ್ಕೂ ಗಂಭೀರ್​ ತಲೆಕಡಿಸಿಕೊಳ್ಳಲಿಲ್ಲ. ಈಗಲಾದರೂ ಕುಲದೀಪ್​ಗೆ ಅವಕಾಶ ಕೊಡುವುದು ಸೂಕ್ತ" ಎಂದು ಬಜ್ಜಿ ಹೇಳಿದ್ದಾರೆ.

"ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಖಂಡಿತವಾಗಿಯೂ ಕುಲದೀಪ್ ಯಾದವ್​ರನ್ನು ಆಡಿಸಬೇಕು. ಕಾರಣ, ಇಂಗ್ಲಿಷ್ ಬ್ಯಾಟರ್​ಗಳಿಗೆ ಅವರ ಬೌಲಿಂಗ್ ಅರ್ಥವಾಗುವುದು ತೀರ ಕಷ್ಟಕರ. ಕುಲದೀಪ್ ಬೌಲಿಂಗ್​ ದಾಳಿಗೆ ಆಂಗ್ಲರು ಅಬ್ಬರಿಸುವುದು ಅಷ್ಟು ಸುಲಭವಿಲ್ಲ. ಅವರು ಚೆಂಡನ್ನು ಎರಡೂ ಕಡೆ ತಿರುಗಿಸುವ ಸಾಮರ್ಥ್ಯವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಕುಲದೀಪ್ ನಿರ್ಣಾಯಕ ಸಮಯದಲ್ಲಿ ವಿಕೆಟ್ ಪಡೆಯುವ ನಿಗೂಢ ಬೌಲರ್. ಟೆಸ್ಟ್ ಕ್ರಿಕೆಟ್‌ನಲ್ಲಿ, ಹೊಸ ಬಾಲ್​ನಲ್ಲಿ ವಿಕೆಟ್ ಪಡೆಯುವುದಲ್ಲ, ಹಳೆಯ ಬಾಲ್​ನಲ್ಲೇ ವಿಕೆಟ್​ ಪಡೆಯುವ ಬೌಲರ್ ನಮಗೆ ಅಗತ್ಯವಿದೆ. ಈಗ ತಂಡದಲ್ಲಿರುವ ಆಲ್​ರೌಂಡರ್​ ನಿತೀಶ್​ ರೆಡ್ಡಿಯನ್ನು​ ಪೆವಿಲಿಯನ್​ನಲ್ಲಿ ಕೂರಿಸಿ. ನಿತೀಶ್ ಬದಲಿಗೆ ಕುಲದೀಪ್​ರನ್ನು ಈ ಪಿಚ್​ನಲ್ಲಿ ಆಡಿಸುವುದು ಉತ್ತಮ ನಿರ್ಧಾರ" ಎಂದು ಹರ್ಭಜನ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net