ಏಕದಿನ ಸರಣಿ ವಶಪಡಿಸಿಕೊಂಡ ಆಸೀಸ್​! ದ್ವಿತೀಯ ಪಂದ್ಯದಲ್ಲಿಯೂ ಎಡವಿದ ಟೀಮ್ ಇಂಡಿಯಾ | IND vs AUS ODI

ವಿಜಯವಾಣಿ (98)
Published on

IND vs AUS ODI: ಆತಿಥೇಯ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಸೋತಿದ್ದ ಟೀಮ್ ಇಂಡಿಯಾ, ಇಂದು ಎರಡನೇ ಪಂದ್ಯವನ್ನೂ ಕೈಚೆಲ್ಲಿತು. ಅಡಿಲೇಡ್​ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್​ಗಳನ್ನು ಕಟ್ಟಿಹಾಕಲು ಎಡವಿದ ಗಿಲ್ ಪಡೆ, ಸರಣಿಯನ್ನು ವಶಪಡಿಸಿಕೊಳ್ಳಲು ವಿಫಲವಾಗಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬೌಲಿಂಗ್ ಆಯ್ದುಕೊಂಡಿತು. ಅಂತೆಯೇ ಬ್ಯಾಟಿಂಗ್​​ಗಿಳಿದ ಭಾರತ 50 ಓವರ್​ ಅಂತ್ಯಕ್ಕೆ 264 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸೀಸ್​ಗೆ ಮ್ಯಾಟ್​ ಶಾರ್ಟ್ (74 ರನ್​)​ ಮತ್ತು ಕೂಪರ್​ ಕೊನ್ನೊಲ್ಲಿ (61 ರನ್​) ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಸರಣಿ ವಶಪಡಿಸಿಕೊಳ್ಳಲು ಸಹಾಯ ಮಾಡಿತು.

ಟೀಮ್ ಇಂಡಿಯಾ ಪರ ಅರ್ಷ್​​ದೀಪ್​ ಸಿಂಗ್​, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್​ ಪಡೆದುಕೊಂಡರೆ, ಮೊಹಮ್ಮದ್ ಸಿರಾಜ್ ಹಾಗೂ ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್​ ಕಬಳಿಸಿದರು. ಇಷ್ಟಾದರೂ ಆಸೀಸ್​ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಮುಗ್ಗರಿಸಿದ ಭಾರತ, ಇದೀಗ ಏಕದಿನ ಸರಣಿಯಲ್ಲಿ ಗೆಲುವಿನ ಅವಕಾಶವನ್ನು ಕಳೆದುಕೊಂಡಿದೆ.

ಕೊಹ್ಲಿ 2ನೇ ಬಾರಿ ಡಕ್​ಔಟ್​!

ಓಪನಿಂಗ್ ಬಂದ ರೋಹಿತ್ ಶರ್ಮ, ಉತ್ತಮ ಇನ್ನಿಂಗ್ಸ್ ನೀಡಿದರೆ, ದಿಗ್ಗಜ ಬ್ಯಾಟರ್​ ವಿರಾಟ್ ಕೊಹ್ಲಿ, ಸತತ ಎರಡನೇ ಪಂದ್ಯದಲ್ಲಿಯೂ ವಿಫಲರಾದರು. ಮೊದಲ ಪಂದ್ಯದಲ್ಲಿ ಡಕ್​ಔಟ್​ ಆಗಿ ಪೆವಿಲಿಯನ್​ ಹಾದಿ ಹಿಡಿದಂತೆಯೇ ಇಂದಿನ ಮ್ಯಾಚ್​ನಲ್ಲಿಯೂ ಕೊಹ್ಲಿ ಶೂನ್ಯಕ್ಕೆ ಔಟ್ ಆದರು. ನಾಲ್ಕು ಎಸೆತಗಳನ್ನು ಆಡಿದ ಕೊಹ್ಲಿ, ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್‌ನಲ್ಲಿ ಎಲ್ಬಿಡಬ್ಲ್ಯೂ ಆಗಿ ಪೆವಿಲಿಯನ್​ಗೆ ಮರಳಿದರು. ಇದು ಕ್ರಿಕೆಟ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು.

ಗಂಗೂಲಿ ದಾಖಲೆ ಹಿಂದಿಕ್ಕಿದ ಹಿಟ್​ಮ್ಯಾನ್​!

ಆಸೀಸ್ ವಿರುದ್ಧ 1000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇದೀಗ ರೋಹಿತ್​ ಪಾತ್ರರಾಗಿದ್ದಾರೆ. ಇದರೊಂದಿಗೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಲ್ಲಿ ಅವರು ಮೂರನೇ ಸ್ಥಾನ ತಲುಪಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ (73 ರನ್​, 97 ಎಸೆತ, 7 ಬೌಂಡರಿ, 2 ಸಿಕ್ಸರ್‌) ಅರ್ಧಶತಕ ಸಿಡಿಸುವ ಮೂಲಕ ರೋಹಿತ್ ಈ ಅಪರೂಪದ ಸಾಧನೆಗೈದಿದ್ದಾರೆ. ಈ ಸಾಲಿನಲ್ಲಿ ಅವರು ಟೀಮ್ ಇಂಡಿಯಾ ‘ದಾದಾ’, ಮಾಜಿ ಕ್ಯಾಪ್ಟನ್​ ಸೌರವ್ ಗಂಗೂಲಿಯನ್ನು ಮೀರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net