ಬ್ರೋ ದಯವಿಟ್ಟು ರೋಹಿತ್​ಗೆ ಪಾಪ್​ಕಾರ್ನ್​ ಕೊಡಬೇಡಿ... ಮಾಜಿ ಕೋಚ್ ಕಾಮೆಂಟ್​ ವೈರಲ್​! IND vs AUS

IND vs AUS
Published on

ಪರ್ತ್​: ಭಾರತ ಮತ್ತು ಆಸ್ಟ್ರೇಲಿಯಾ ( IND vs AUS ) ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ನಡೆದ ಘಟನೆಯೊಂದು ಇದೀಗ ಚರ್ಚೆಯ ವಿಷಯವಾಗಿದೆ. ಶುಭಮಾನ್ ಗಿಲ್ ನೇತೃತ್ವದ ಭಾರತ ತಂಡ ಭಾನುವಾರ (ಅ.19) ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಸೋತಿತು. ಈ ಪಂದ್ಯಕ್ಕೆ ಹಲವಾರು ಬಾರಿ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ಪಂದ್ಯವನ್ನು 26 ಓವರ್‌ಗಳಿಗೆ ಇಳಿಸಬೇಕಾಯಿತು.

ಪಂದ್ಯಕ್ಕೆ ಪದೇಪದೆ ಮಳೆ ಅಡ್ಡಿಪಡಿಸಿದಾಗ, ಆಟಗಾರರು ಡ್ರೆಸ್ಸಿಂಗ್ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ಸಮಯದಲ್ಲಿ ವೀಕ್ಷಕ ವಿವರಣೆಗಾರರಾಗಿದ್ದ ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್, ತಮ್ಮ ಸ್ನೇಹಿತ ರೋಹಿತ್ ಶರ್ಮ ಬಗ್ಗೆ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ. ನಾಯಕ ಶುಭಮಾನ್​ ಗಿಲ್ ಜತೆ ರೋಹಿತ್, ಪಾಪ್ ಕಾರ್ನ್ ತಿನ್ನುವುದನ್ನು ನೋಡಿ, ಅರೆ ಭಾಯ್ ಪಾಪ್ ಕಾರ್ನ್ ಮತ್​ ದೇ (ಸಹೋದರ, ಅವನಿಗೆ ಪಾಪ್ ಕಾರ್ನ್ ಕೊಡಬೇಡಿ) ಎಂದು ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ, ಟೆಸ್ಟ್ ಮತ್ತು ಟಿ20 ಮಾದರಿಗಳಿಗೆ ವಿದಾಯ ಹೇಳಿರುವ ರೋಹಿತ್ ಶರ್ಮ, ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್​ವರೆಗೆ ತಂಡದಲ್ಲಿ ಮುಂದುವರಿಯುವ ನಿರೀಕ್ಷೆ ಇಟ್ಟುಕೊಂಡಿರುವ ಹಿಟ್‌ಮ್ಯಾನ್, ಇತ್ತೀಚೆಗೆ ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರದ ವಿರಾಮದ ಸಮಯದಲ್ಲಿ, ಸುಮಾರು 11 ಕೆಜಿ ತೂಕವನ್ನು ರೋಹಿತ್​ ಇಳಿಸಿಕೊಂಡಿದ್ದಾರೆ.

ಪಂದ್ಯಕ್ಕೂ ಮುನ್ನ ರೋಹಿತ್​ ಫಿಟ್​ನೆಸ್​ ಬಗ್ಗೆ ಮಾತನಾಡಿದ ಅಭಿಷೇಕ್, ರೋಹಿತ್ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರು ಹೆಚ್ಚು ಫಿಟ್ ಆಗಿದ್ದಾರೆ ಮತ್ತು ಹೆಚ್ಚು ಬಲಿಷ್ಠರಾಗಿದ್ದಾರೆ. ಅವರ ಫಿಟ್​ನೆಸ್​ ಸುಧಾರಿಸಿದರೆ, ಅವರ ಕೌಶಲ್ಯಗಳು ತಾನಾಗಿಯೇ ಸುಧಾರಿಸುತ್ತವೆ. ಈ ನಿಟ್ಟಿನಲ್ಲಿ ರೋಹಿತ್ ತುಂಬಾ ಶ್ರಮಿಸಿದ್ದಾರೆ. ಇದೆಲ್ಲವೂ 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಗಿರಬಹುದು. ಅಲ್ಲಿಯವರೆಗೆ ಆಟವಾಡುವುದನ್ನು ಮುಂದುವರಿಸಲು ಮೊದಲು ತೂಕ ಇಳಿಸಿಕೊಳ್ಳಬೇಕು ಎಂದು ರೋಹಿತ್ ಬಲವಾಗಿ ನಂಬಿದ್ದರು. ಅದಕ್ಕಾಗಿಯೇ ಇದೆಲ್ಲವೂ ಸಾಧ್ಯವಾಯಿತು. ಈಗ ಅವರು ನವ ಯುವಕನಂತೆ ಕಾಣುತ್ತಿದ್ದಾರೆ ಎಂದು ಅಭಿಷೇಕ್​ ಹೇಳಿದರು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದರೆ, ಮಳೆರಾಯ ಬಿಟ್ಟು ಬಿಟ್ಟು ಆಗಮಿಸಿದ್ದರಿಂದ ಹಲವು ಬಾರಿ ಇನ್ನಿಂಗ್ಸ್‌ಗೆ ಅಡ್ಡಿಯಾಯಿತು. ಹೀಗಾಗಿ, ಪಂದ್ಯವನ್ನು 26 ಓವರ್‌ಗಳಿಗೆ ಇಳಿಸಲಾಯಿತು. ಟೀಮ್ ಇಂಡಿಯಾ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿತು. ಕೆಎಲ್ ರಾಹುಲ್ (38) ಮತ್ತು ಅಕ್ಷರ್ ಪಟೇಲ್ (31) ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಿರಾಟ್ ಕೊಹ್ಲಿ (0), ರೋಹಿತ್ ಶರ್ಮಾ (8), ಶ್ರೇಯಸ್ ಅಯ್ಯರ್ (11) ಮತ್ತು ಶುಭಮಾನ್ ಗಿಲ್ (10) ವಿಫಲರಾದರು. ಆಸೀಸ್ ಬೌಲರ್‌ಗಳಲ್ಲಿ ಜೋಶ್​ ಹ್ಯಾಜಲ್‌ವುಡ್, ವೋನೆ ಮತ್ತು ಕುನೆಮನ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಮಿಚೆಲ್​ ಸ್ಟಾರ್ಕ್ ಮತ್ತು ಎಲ್ಲಿಸ್ ತಲಾ ಒಂದು ವಿಕೆಟ್ ಪಡೆದರು.

ನಂತರ ಡಕ್​ವರ್ತ್​ ಲೂಯಿಸ್ ವಿಧಾನದ ಮೂಲಕ ಆಸೀಸ್ ತಂಡಕ್ಕೆ 131 ರನ್ ಗುರಿ ನಿಗದಿಪಡಿಸಲಾಯಿತು. ಆಸೀಸ್ ತಂಡವು 21.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಆಸೀಸ್ ಪರ ಮಿಚೆಲ್ ಮಾರ್ಷ್ (ಔಟಾಗದೆ 46) ಮತ್ತು ಜೋಶ್ ಫಿಲಿಪ್ (37) ಅತ್ಯಧಿಕ ರನ್​ ಗಳಿಸಿದರು. ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net