

WTC Final : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಟೀಮ್ ಇಂಡಿಯಾದ ಹಾದಿ ಹೆಚ್ಚು ಜಟಿಲವಾಗಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಸೋತಿದೆ. ಹೌದು, ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ 184 ರನ್ಗಳ ಹೀನಾಯ ಸೋಲು ಅನುಭವಿಸಿದೆ. 340 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ 79.1 ಓವರ್ಗಳಲ್ಲಿ 155 ರನ್ಗಳಿಗೆ ಕುಸಿದು ಬಿತ್ತು. ಯಶಸ್ವಿ ಜೈಸ್ವಾಲ್ (84 ರನ್ 208 ಎಸೆತ, 8 ಬೌಂಡರಿ) ಹೆಚ್ಚು ರನ್ ಗಳಿಸಿದ ಭಾರತದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡರು.
ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ (30) ಬಿಟ್ಟರೆ, ಉಳಿದೆಲ್ಲರು ಒಂದು ಅಂಕಿಗೆ ಸೀಮಿತಗೊಂಡರು. ರೋಹಿತ್ ಶರ್ಮ (9), ಕೆಎಲ್ ರಾಹುಲ್ (0), ವಿರಾಟ್ ಕೊಹ್ಲಿ (5), ರವೀಂದ್ರ ಜಡೇಜಾ (2), ನಿತೀಶ್ ರೆಡ್ಡಿ (1), ಆಕಾಶ್ ದೀಪ್ (1) ಸಂಪುರ್ಣ ವಿಫಲರಾದರು. ಆಸ್ಟ್ರೇಲಿಯಾದ ಬೌಲರ್ಗಳಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ ಮೂರು ವಿಕೆಟ್ ಪಡೆದರೆ, ನಾಥನ್ ಲಿಯಾನ್ ಎರಡು ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ತಲಾ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 474 ರನ್ ಗಳಿಸಿದರೆ, ಭಾರತ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ ಗಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 105 ರನ್ಗಳ ಮಹತ್ವದ ಮುನ್ನಡೆ ಸಾಧಿಸಿತು. ಬಳಿಕ ಆಸೀಸ್ ಎರಡನೇ ಇನ್ನಿಂಗ್ಸ್ನಲ್ಲಿ 234 ರನ್ ಗಳಿಸಿತು. ಇದರೊಂದಿಗೆ ಭಾರತಕ್ಕೆ 340 ರನ್ ಗಳ ಗುರಿ ನೀಡಿತ್ತು. ಆದರೆ, ಟೀಮ್ ಇಂಡಿಯಾ ಕೇವಲ 155 ರನ್ಗಳಿಗೆ ಕುಸಿಯಿತು.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ತಂಡ ಡಬ್ಲ್ಯುಟಿಸಿ ಫೈನಲ್ ತಲುಪುವ ಸಾಧ್ಯತೆ ಇನ್ನಷ್ಟು ಜಟಿಲವಾಗಿದೆ. ಸದ್ಯ ಡಬ್ಲ್ಯುಟಿಸಿ ಫೈನಲ್ ತಲುಪಲು ಭಾರತಕ್ಕೆ ಇರುವುದು ಒಂದೇ ದಾರಿ. ಜನವರಿ 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇಬೇಕು. ಆಗ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ 2-2ರಲ್ಲಿ ಸಮಬಲಗೊಳ್ಳಲಿದೆ. ಅದೇ ಸಮಯದಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ ಗೆಲ್ಲಬೇಕಾಗಿದೆ. ಆದರೆ, ಆಸ್ಟ್ರೇಲಿಯಾದ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ವೈಟ್ವಾಷ್ ಮಾಡುವುದು ಸ್ವಲ್ಪ ಕಷ್ಟವೇ. ಹೀಗಾಗಿ ಟೀಮ್ ಇಂಡಿಯಾ ಫೈನಲ್ ತಲುಪುವ ಸಾಧ್ಯತೆ ಬಹುತೇಕ ಕಷ್ಟವಾಗಿದೆ. (ಏಜೆನ್ಸೀಸ್)