

Team India : ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಗವಾಸ್ಕರ್-ಬಾರ್ಡರ್ ಟ್ರೋಫಿಯ ಐದು ಟೆಸ್ಟ್‌ಗಳ ಸರಣಿಯ ಭಾಗವಾಗಿ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಸೋಲಿನಿಂದ ಸ್ವಲ್ಪದರಲ್ಲೇ ಪಾರಾದ ರೋಹಿತ್ ಶರ್ಮ ಪಡೆ, ಪ್ರತಿಷ್ಠಿತ ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನವೇ ದೊಡ್ಡ ಸವಾಲನ್ನು ಎದುರಿಸುತ್ತಿದೆ. ರೋಹಿತ್ ಶರ್ಮ ಅವರ ಕಳಪೆ ಫಾರ್ಮ್ ತಂಡವನ್ನು ಮಾನಸಿಕವಾಗಿ ಕಾಡುತ್ತಿದ್ದರೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸರಣಿಯ ಮಧ್ಯದಲ್ಲಿ ಅನಿರೀಕ್ಷಿತವಾಗಿ ನಿವೃತ್ತಿಯಾಗಿರುವುದು ತಂಡವನ್ನು ಇನ್ನಷ್ಟು ಕುಗ್ಗಿಸುವುದರಲ್ಲಿ ಸಂಶಯವಿಲ್ಲ.
ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತವು 295 ರನ್ಗಳ ಬೃಹತ್ ಅಂತರದೊಂದಿಗೆ ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿತು. ಮೊದಲ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದರು. ಮಗ ಹುಟ್ಟಿದ್ದರಿಂದ ರೋಹಿತ್ ಮೊದಲ ಟೆಸ್ಟ್‌ನಿಂದ ಹೊರಗುಳಿದರು. ನಂತರದ ಎರಡು ಟೆಸ್ಟ್‌ಗಳಲ್ಲಿ ರೋಹಿತ್ ಆಡಿದರು. ಆದರೆ, ಉತ್ತಮ ಪ್ರದರ್ಶನ ನೀಡಲಿಲ್ಲ. ಮೂರು ಇನ್ನಿಂಗ್ಸ್‌ಗಳಲ್ಲಿ 6.33 ಸರಾಸರಿಯಲ್ಲಿ ಕೇವಲ 19 ರನ್ (3, 6, 10) ಗಳಿಸಿದರು. ತಂಡಕ್ಕೆ ಆಧಾರ ಸ್ಥಂಭವಾಗಬೇಕಿರುವ ನಾಯಕ ರೋಹಿತ್ ಶರ್ಮ, ಕಳಪೆ ಫಾರ್ಮ್ನಲ್ಲಿರುವುದು ತಂಡದ ನೈತಿಕ ಸ್ಥೈರ್ಯಕ್ಕೆ ಧಕ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ರೋಹಿತ್ ಭಾನುವಾರದ ಅಭ್ಯಾಸಕ್ಕೆ ಗೈರು ಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಅಭ್ಯಾಸದ ವೇಳೆ ರೋಹಿತ್ ಶರ್ಮ ಅವರ ಎಡ ಮೊಣಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತಿರುವುದು ಕಂಡುಬಂದಿದೆ. ರೋಹಿತ್ ಗಾಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ, ರೋಹಿತ್ ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಡಿಲೇಡ್‌ನಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ 18 ಓವರ್‌ಗಳಲ್ಲಿ 53 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದ ಅಶ್ವಿನ್ ಅವರನ್ನು ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಅಶ್ವಿನ್ ಅವರ ಬದಲಿಯಾಗಿ ಬಂದ ರವೀಂದ್ರ ಜಡೇಜಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 77 ರನ್ ಗಳಿಸಿ ಭಾರತದ ಪಾಲಿಗೆ ವರವಾದರು. ತಮ್ಮ ವಿಶೇಷ ಬೌಲಿಂಗ್ ತಂತ್ರದ ಮೂಲಕವೇ ಭಾರತಕ್ಕೆ ಹಲವು ವಿಜಯಗಳನ್ನು ತಂದುಕೊಟ್ಟ ಕೀರ್ತಿಗೆ ಭಾಜನರಾಗಿರುವ 38ರ ಹರೆಯದ ಅಶ್ವಿನ್ 106 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 537 ವಿಕೆಟ್‌ಗಳನ್ನು ಪಡೆದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮತ್ತು ಭಾರತದ ಅನಿಲ್ ಕುಂಬ್ಳೆ (619) ನಂತರ ವಿಶ್ವದ ಅತಿ ಹೆಚ್ಚು ವಿಕೆಟ್ ಪಡೆದಿರುವ ಅಶ್ವಿನ್, ಸರಣಿಯ ಮಧ್ಯದಲ್ಲಿ ನಿವೃತ್ತಿ ಘೋಷಿಸಿದ್ದು, ಇದು ತಂಡದ ಮೇಲೆ ಪರಿಣಾಮ ಬೀರದೇ ಇರುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ತಂಡದಲ್ಲಿರುವ ಹಿರಿಯ ಆಟಗಾರರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿರುವ ಈ ಸಂದರ್ಭದಲ್ಲಿ ಅಶ್ವಿನ್ ನಿವೃತ್ತಿ ನಿರ್ಧಾರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವುದರಲ್ಲಿ ಸಂಶಯವಿಲ್ಲ.
ಭಾರತ-ಆಸ್ಟ್ರೇಲಿಯಾಗಳಂತಹ ನಿರ್ಣಾಯಕ ಸರಣಿಯಲ್ಲಿ ಭಾರತದ ಬೌಲಿಂಗ್‌ನ ಸಂಪೂರ್ಣ ಹೊರೆಯನ್ನು ಜಸ್ಪ್ರೀತ್ ಬುಮ್ರಾ ಮಾತ್ರ ಹೊರಬೇಕಾಗಿರುವುದು ದುರದೃಷ್ಟಕರ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಬುಮ್ರಾ ಏಕಾಂಗಿಯಾಗಿ ಎಂಟು ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, ಬುಮ್ರಾಗೆ ಸಹ ಬೌಲರ್‌ಗಳಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ. ಅದರಲ್ಲೂ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ನಿರೀಕ್ಷಿತ ಮಟ್ಟಕ್ಕೆ ಇಲ್ಲ. ಭಾರತ ತಂಡದಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿ ಅನುಪಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಆಸ್ಟ್ರೇಲಿಯಾ ತಂಡದಲ್ಲಿ ಎಲ್ಲ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಸಮತೋಲನವನ್ನು ನೀಡುವುದಲ್ಲದೆ, ಭಾರತದ ಮೇಲೆ ತಮ್ಮ ಶ್ರೇಷ್ಠತೆಯನ್ನು ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಭಾರತ ನೆಲದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡದಲ್ಲಿರುವ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್, ಪ್ರಸಕ್ತ ಸರಣಿಯಲ್ಲಿಯೂ ಭಾರತಕ್ಕೆ ಪ್ರಮುಖ ಅಡ್ಡಿಯಾಗಿದ್ದಾರೆ. ಅವರು ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ವಿಫಲರಾದರು. ಆದರೆ, ನಂತರದ ಎರಡನೇ ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಸತತ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಹೆಡ್ತಂಡದ ಬ್ಯಾಟಿಂಗ್‌ಗೆ ಬೆನ್ನೆಲುಬಾಗಿದ್ದು, ಭಾರತಕ್ಕೆ ತಲೆನೋವಾಗಿದ್ದಾರೆ. (ಏಜೆನ್ಸೀಸ್)