

IND vs AUS 2nd Test : ಬಾರ್ಡರ್ ಗವಾಸ್ಕರ್ ಟ್ರೋಫಿ ಅಂಗವಾಗಿ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಐದು ದಿನಗಳ ಪಿಂಕ್ ಬಾಲ್ ಅಹರ್ನಿಶಿ ಟೆಸ್ಟ್ ಪಂದ್ಯದವನ್ನು ಆಸ್ಟ್ರೇಲಿಯಾ ಕೇವಲ ಮೂರು ದಿನಗಳಲ್ಲೇ ಕೊನೆಗೊಳಿಸುವ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು. ಆಸ್ಟ್ರೇಲಿಯಾ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಸೋತಿದೆ.
ಎರಡನೇ ದಿನ (ಶನಿವಾರ) ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 128 ರನ್ ಗಳಿಸಿತು. ರಿಷಭ್ ಪಂತ್ ಮತ್ತು ನಿತೀಶ್ ಕುಮಾರ್ ಕ್ರೀಸ್ ಕಾಯ್ದುಕೊಂಡಿದ್ದರು. ಮೂರನೇ ದಿನ (ಭಾನುವಾರ) ಆರಂಭವಾದ ಕೆಲವೇ ಕ್ಷಣಗಳಲ್ಲಿ ರಿಷಭ್ ಪಂತ್ (28) ಔಟಾದರು. ನಿತೀಶ್ ಕುಮಾರ್ (42) ಹೋರಾಟದಿಂದ ಭಾರತ ಇನಿಂಗ್ಸ್ ಸೋಲನ್ನು ತಪ್ಪಿಸಿತು.
ಒಟ್ಟಾರೆಯಾಗಿ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 175 ರನ್ ಗಳಿಸಿತು. ಈ ಮೂಲಕ ಆಸಿಸ್ ಪಡೆಗೆ ಕೇವಲ 19 ರನ್ಗಳ ಅಲ್ಪ ಮೊತ್ತದ ಗುರಿ ನೀಡಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಪಡೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.