

ಆಸ್ಟ್ರೇಲಿಯಾ: ಪ್ರಸಕ್ತ ಆತಿಥೇಯರ ನಾಡಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ (IND vs AUS T20 ) ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭಾರತ ಸೋಲುಂಡಿತ್ತು. ಆದರೆ, ಇಂದು ನಡೆದ ಮೂರನೇ ಮ್ಯಾಚ್ನಲ್ಲಿ ವಾಷ್ಟಿಂಗನ್ ಸುಂದರ್ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿತು.
ಹೋಬಾರ್ಟ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 5 ವಿಕೆಟ್‌ಗಳಿಂದ ಜಯ ಸಾಧಿಸಿತು. ಸರಣಿಯ ಮೊದಲ ಪಂದ್ಯವನ್ನು ಆಡಿದ ಸುಂದರ್, ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಏಕಾಂಗಿಯಾಗಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಈ ಗೆಲುವಿನೊಂದಿಗೆ ಭಾರತ ಸರಣಿಯನ್ನು (1-1) ಸಮಬಲಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 186 ರನ್ ಗಳಿಸಿತು. ತಂಡದ ಪರ ಟಿಮ್ ಡೇವಿಡ್ (74) ಮತ್ತು ಸ್ಟೊಯಿನಿಸ್ (64) ಅಬ್ಬರದ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ, ಮ್ಯಾಥ್ಯೂ ಶಾರ್ಟ್ (ಅಜೇಯ 26 ರನ್) ಅದ್ಭುತ ಇನ್ನಿಂಗ್ಸ್ ಆಡಿದರು. ಇನ್ನು ಟೀಮ್ ಇಂಡಿಯಾ ಪರ ಅರ್ಷ್ದೀಪ್ ಸಿಂಗ್ 3 ವಿಕೆಟ್, ವರುಣ್ ಚಕ್ರವರ್ತಿ 2 ವಿಕೆಟ್ ಮತ್ತು ಶಿವಂ ದುಬೆ ಒಂದು ವಿಕೆಟ್ ಕಬಳಿಸಿದರು.
ಆಸೀಸ್ ನೀಡಿದ 187 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತವು 18.3 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಪಂದ್ಯವನ್ನು ಸುಲಭವಾಗಿ ಗೆದ್ದು ಬೀಗಿತು. ವಾಷಿಂಗ್ಟನ್ ಸುಂದರ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 49 ರನ್ ಗಳಿಸಿ ಅಜೇಯರಾಗುಳಿದರು. ಇನ್ನು ಸುಂದರ್ಗೆ ಸಾಥ್ ನೀಡಿದ ಜಿತೇಶ್ ಶರ್ಮಾ, 13 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸಿದರು. ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ನೋಡುವುದಾದರೆ ಅಭಿಷೇಕ್ ಶರ್ಮಾ (25), ಶುಭ್‌ಮನ್ ಗಿಲ್ (15), ಸೂರ್ಯಕುಮಾರ್ ಯಾದವ್ (24), ತಿಲಕ್ ವರ್ಮಾ (29) ಮತ್ತು ಅಕ್ಷರ್ ಪಟೇಲ್ (17) ರನ್ ಗಳಿಸಿದರು.