ಅಭಿಷೇಕ್​ ಏಕಾಂಗಿ ಹೋರಾಟ ವ್ಯರ್ಥ! ಭಾರತ ವಿರುದ್ಧ 2ನೇ ಟಿ20 ಪಂದ್ಯ ಗೆದ್ದ ಆಸೀಸ್​​ | IND vs AUS T20

ಅಭಿಷೇಕ್​ ಏಕಾಂಗಿ ಹೋರಾಟ ವ್ಯರ್ಥ! ಭಾರತ ವಿರುದ್ಧ 2ನೇ ಟಿ20 ಪಂದ್ಯ ಗೆದ್ದ ಆಸೀಸ್​​ | IND vs AUS T20
Published on

ಆಸ್ಟ್ರೇಲಿಯಾ: ಇಂದು (ಅ.31) ಮೆಲ್ಬೋರ್ನ್‌ನಲ್ಲಿ ನಡೆದ ದ್ವಿತೀಯ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳಿಂದ ಪಂದ್ಯ ಗೆದ್ದು ಬೀಗಿತು (IND vs AUS T20). ಮೊದಲ ಪಂದ್ಯವು ಮಳೆಯಿಂದ ರದ್ದಾದ ಬಳಿಕ ಎರಡನೇ ಮ್ಯಾಚ್​ನಲ್ಲಿ ಗೆಲುವು ದಾಖಲಿಸಲು ಭಾರತಕ್ಕೆ ಉತ್ತಮ ಅವಕಾಶವಿತ್ತು. ಆದರೆ, ಬ್ಯಾಟರ್​ಗಳ ವೈಫಲ್ಯತೆಯಿಂದ ಸೂರ್ಯಕುಮಾರ್ ಪಡೆ ಹೀನಾಯ ಸೋಲುಂಡಿತು.

ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಆಸೀಸ್​ ಪಡೆ, ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿತು. ಟೀಮ್ ಇಂಡಿಯಾ ನೀಡಿದ 126 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಮಿಚೆಲ್ ಮಾರ್ಷ್ ಪಡೆ, 13.2 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಈ ಗುರಿಯನ್ನು ಸುಲಭವಾಗಿ ತಲುಪಿತು. ತಂಡದ ಪರ ನಾಯಕ ಮಿಚೆಲ್ ಮಾರ್ಷ್ (46 ರನ್​, 26 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್) ಮತ್ತು ಟ್ರಾವಿಸ್ ಹೆಡ್ (28 ರನ್​, 26 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್) ಉತ್ತಮ ಇನ್ನಿಂಗ್ಸ್ ಆಡಿದರು. ಇನ್ನು ಬೌಲಿಂಗ್​ನಲ್ಲಿ ಟೀಮ್ ಇಂಡಿಯಾ ಪರ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಕಬಳಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 18.4 ಓವರ್‌ಗಳಲ್ಲಿ 125 ರನ್‌ಗೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ (68 ರನ್​, 37 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್) ಅರ್ಧಶತಕದೊಂದಿಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಮಿಂಚಿದರು. ಅವರ ನಂತರದಲ್ಲಿ ಬಂದ ಬ್ಯಾಟರ್​ಗಳು ಅಭಿಷೇಕ್​ಗೆ ಸಾಥ್​ ನೀಡುವಲ್ಲಿ ಮುಗ್ಗರಿಸಿದರು. ಈ ಸಮಯದಲ್ಲಿ ಹರ್ಷಿತ್ ರಾಣಾ (35 ರನ್​, 3 ಬೌಂಡರಿ, 33 ಎಸೆತಗಳಲ್ಲಿ 1 ಸಿಕ್ಸರ್) ಬಾರಿಸುವ ಮೂಲಕ ತಂಡದ ಒಟ್ಟು ಮೊತ್ತವನ್ನು 100ರ ಗಡಿದಾಟಿಸಲು ಸಹಾಯ ಮಾಡಿದರು.

ಟೀಮ್ ಇಂಡಿಯಾ ಬ್ಯಾಟಿಂಗ್ ವಿವರ

ಶುಭಮನ್ ಗಿಲ್ (5 ರನ್), ಸಂಜು ಸ್ಯಾಮ್ಸನ್ (2), ಸೂರ್ಯಕುಮಾರ್ ಯಾದವ್ (1), ತಿಲಕ್ ವರ್ಮಾ (0), ಅಕ್ಷರ್ ಪಟೇಲ್ (7), ಶಿವಂ ದುಬೆ (4) ಉತ್ತಮ ಇನ್ನಿಂಗ್ಸ್ ನೀಡುವಲ್ಲಿ ವಿಫಲರಾದರು. ಆಸೀಸ್ ಬೌಲರ್‌ಗಳಲ್ಲಿ ಜೋಶ್ ಹ್ಯಾಜಲ್‌ವುಡ್ 3 ವಿಕೆಟ್, ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ನಾಥನ್ ಎಲ್ಲಿಸ್ ತಲಾ 2 ವಿಕೆಟ್ ಮತ್ತು ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net