ದೆಹಲಿ ಟೆಸ್ಟ್​ಗೆ ಬ್ಯಾಟಿಂಗ್​ ಸ್ನೇಹಿ ಪಿಚ್​; ಮೂರನೇ ದಿನದವರೆಗೆ ತಿರುವಿನ ಸಾಧ್ಯತೆ ಇಲ್ಲ!

web pitch
Published on

ನವದೆಹಲಿ: ಅಹಮದಾಬಾದ್​ನ ಬೌಲಿಂಗ್​ ಸ್ನೇಹಿ ಪಿಚ್​ನಲ್ಲಿ ನಡೆದ ಭಾರತ-ವೆಸ್ಟ್​ ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಎರಡೂವರೆ ದಿನಗಳಲ್ಲೇ ಮುಗಿದಿದ್ದರೆ, ನವದೆಹಲಿಯಲ್ಲಿ ಶುಕ್ರವಾರದಿಂದ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಕೊನೇ ದಿನದವರೆಗೂ ಸಾಗುವ ನಿರೀಕ್ಷೆ ಹರಡಿದೆ. ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್​ ಸ್ನೇಹಿ ಪಿಚ್​ ನಿರ್ಮಾಣಗೊಂಡಿರುವುದು ಇದಕ್ಕೆ ಕಾರಣ.

ಪಂದ್ಯದ ಮೊದಲ ದಿನ ಎರಡು ದಿನ ಬ್ಯಾಟಿಂಗ್​ ಸುಲಭವಾಗಿರಲಿದ್ದು, ಮೂರನೇ ದಿನದ ನಂತರವೇ ಚೆಂಡು ತಿರುವು ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕಪ್ಪು ಮಣ್ಣಿನ ಪಿಚ್​ಗಳು ಸಾಮಾನ್ಯವಾಗಿ ಬ್ಯಾಟಿಂಗ್​ ಸ್ನೇಹಿಯಾಗಿರುತ್ತವೆ. ಹೀಗಾಗಿ ಬ್ಯಾಟರ್​ಗಳು ಮೊದಲ 2 ದಿನ ಮೇಲುಗೈ ಸಾಧಿಸಬಹುದು. ನಂತರದಲ್ಲಿ ಸ್ಪಿನ್ನರ್​ಗಳಿಗೂ ಮೇಲುಗೈ ಸಾಧಿಸುವ ಅವಕಾಶ ಲಭಿಸಲಿದೆ. ಇದು ಪಂದ್ಯದಲ್ಲಿ ಟಾಸ್​ಗೂ ನಿರ್ಣಾಯಕ ಪಾತ್ರವನ್ನು ಕಲ್ಪಿಸಲಿದೆ.

ದೆಹಲಿ ಟೆಸ್ಟ್​ನಲ್ಲಿ ವೆಸ್ಟ್​ ಇಂಡೀಸ್​ ತಂಡ ಸುಧಾರಿತ ಬ್ಯಾಟಿಂಗ್​ ನಿರ್ವಹಣೆ ತೋರಿದರೆ ಪಂದ್ಯ ಮೂರು ದಿನಗಳಿಗೆ ಮುನ್ನ ಮುಗಿಯುವ ಸಾಧ್ಯತೆ ಇಲ್ಲ. ಮೂರನೇ ದಿನ ಮಧ್ಯಾಹ್ನದ ನಂತರ ಪಿಚ್​ ಸ್ಪಿನ್ನರ್​ಗಳಿಗೂ ನೆರವಾಗಬಹುದು ಎನ್ನಲಾಗಿದೆ.

ಅಹಮಾಬಾದ್​ನಲ್ಲಿ ವಿಂಡೀಸ್​ ಬ್ಯಾಟರ್​ಗಳ ವೈಫಲ್ಯದಿಂದಾಗಿ 162 ಮತ್ತು 146 ರನ್​ಗಳಿಗೆ ಆಲೌಟ್​ ಆಗಿತ್ತು. ಎರಡೂ ಇನಿಂಗ್ಸ್​ ಸೇರಿ ವಿಂಡೀಸ್​ ತಂಡ 90 ಓವರ್​ಗಳಗೂ ಕಡಿಮೆ ಆಟವಾಡಿತ್ತು. ಸ್ಥಳಿಯ ಕ್ಯುರೇಟರ್​ ಅಂಕಿತ್​ ದತ್ತ ಜತೆಗೆ ಬಿಸಿಸಿಐ ಸೀನಿಯರ್​ ಕ್ಯುರೇಟರ್​ಗಳಾದ ತಪೋಷ್​ ಚಟರ್ಜಿ ಮತ್ತು ಆಶಿಶ್​ ಬೌಮಿಕ್​ ಪಿಚ್​ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.

ಬುಮ್ರಾ/ಸಿರಾಜ್​ಗೆ ರೆಸ್ಟ್​

ಪ್ರಸಿದ್ಧ, ಪಡಿಕ್ಕಲ್​ಗೆ ಚಾನ್ಸ್​?

ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ನಿರಾಯಾಸವಾಗಿ ಗೆದ್ದ ಹಿನ್ನೆಲೆಯಲ್ಲಿ, ಕಾರ್ಯದೊತ್ತಡ ನಿರ್ವಹಣೆ ಕಾರಣಕ್ಕಾಗಿ ವೇಗಿಗಳಾದ ಜಸ್​ಪ್ರೀತ್​ ಬುಮ್ರಾ ಅಥವಾ ಮೊಹಮದ್​ ಸಿರಾಜ್​ಗೆ 2ನೇ ಟೆಸ್ಟ್​ ಪಂದ್ಯದಿಂದ ವಿಶ್ರಾಂತಿ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಜತೆಗೆ ಬೆಂಚ್​ ಸ್ಟ್ರೆಂತ್​ ಪರೀಸುವ ಸಲುವಾಗಿ ಕನ್ನಡಿಗರಾದ ವೇಗಿ ಪ್ರಸಿದ್ಧ ಕೃಷ್ಣ ಮತ್ತು ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ಗೆ ಅವಕಾಶ ನೀಡುವ ಸಾಧ್ಯತೆಯೂ ಕಾಣಿಸಿದೆ. ಬುಮ್ರಾ ಅಥವಾ ಸಿರಾಜ್​ಗೆ ರೆಸ್ಟ್​ ನೀಡಿದರೆ ಆಗ ಪ್ರಸಿದ್ಧಕೃಷ್ಣಗೆ ಅವಕಾಶ ಕಲ್ಪಿಸುವುದು ಸುಲಭವಾಗಲಿದೆ. ಇನ್ನು ಆಲ್ರೌಂಡರ್​ಗಳಾದ ರವೀಂದ್ರ ಜಡೇಜಾ ಅಥವಾ ವಾಷಿಂಗ್ಟನ್​ ಸುಂದರ್​ಗೆ ವಿಶ್ರಾಂತಿ ನೀಡಿ ಪಡಿಕ್ಕಲ್​ಗೆ ಸ್ಥಾನ ಕಲ್ಪಿಸುವ ಸಾಧ್ಯತೆಯೂ ಇದೆ.

ಗಂಭೀರ್​ ಮನೆಯಲ್ಲಿ ತಂಡಕ್ಕೆ ಔತಣ ಕೂಟ

ಮುಖ್ಯ ಕೋಚ್​ ಗೌತಮ್​ ಗಂಭೀರ್​ ದೆಹಲಿಯ ರಾಜಿಂದರ್​ ನಗರದ ತನ್ನ ನಿವಾಸದಲ್ಲಿ ಟೀಮ್​ ಇಂಡಿಯಾ ಆಟಗಾರರಿಗೆ ಬುಧವಾರ ರಾತ್ರಿ ಔತಣಕೂಟ ಏರ್ಪಡಿಸಿದ್ದರು. ಮನೆಯ ಗಾರ್ಡನ್​ನಲ್ಲಿ ಡಿನ್ನರ್​ ವ್ಯವಸ್ಥೆ ಮಾಡಲಾಗಿತ್ತು. ಗಂಭೀರ್​ ಕೋಚ್​ ಆದ ಬಳಿಕ ಅವರ ತವರೂರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯ ಇದಾಗಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲೇ ಭಾರತ ತಂಡ ದೆಹಲಿಯಲ್ಲಿ ಬಾಂಗ್ಲಾ ವಿರುದ್ಧ ಟಿ20 ಪಂದ್ಯವೊಂದನ್ನು ಆಡಿತ್ತು.

ಅ.15ಕ್ಕೆ 2 ಗುಂಪುಗಳಲ್ಲಿ ಆಸೀಸ್​ಗೆ ಪ್ರಯಾಣ

ಆಸ್ಟ್ರೆಲಿಯಾ ಪ್ರವಾಸದ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡದ ಆಟಗಾರರು ಅಕ್ಟೋಬರ್​ 15ರಂದು ನವದೆಹಲಿಯಿಂದ ಎರಡು ಗುಂಪುಗಳಲ್ಲಿ ಪ್ರಯಾಣಿಸಲಿದ್ದಾರೆ. ಟಿಕೆಟ್​ ಲಭ್ಯತೆ ಮತ್ತು ಲಾಜಿಸ್ಟಿಕ್ಸ್​ ಕಾರಣಗಳಿಂದಾಗಿ ಬಿಸಿಸಿಐ ಈ ರೀತಿಯ ಪ್ರಯಾಣ ವ್ಯವಸ್ಥೆಯನ್ನು ಮಾಡಿದೆ. ಮೊದಲ ಗುಂಪಿನ ಆಟಗಾರರು ಬೆಳಗ್ಗೆ ಪ್ರಯಾಣಿಸಿದರೆ, ಎರಡನೇ ಗುಂಪಿನ ಆಟಗಾರರು ಸಂಜೆ ಪ್ರಯಾಣಿಸಲಿದ್ದಾರೆ. ಸುದೀರ್ ವಿಮಾನ ಪ್ರಯಾಣದ ಕಾರಣ ಬಿಸಿಸಿಐ ಎಲ್ಲರಿಗೂ ಬಿಜಿನೆಸ್​ ಕ್ಲಾಸ್​ ಟಿಕೆಟ್​ ವ್ಯವಸ್ಥೆ ಮಾಡುತ್ತಿರುವುದರಿಂದ, ಟಿಕೆಟ್​ ಲಭ್ಯತೆಯ ಆಧಾರದಲ್ಲಿ ತಂಡವನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

ಮಾಜಿ ನಾಯಕರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಜತೆಗೆ ಏಕದಿನ ತಂಡದ ಹೊಸ ಉಪನಾಯಕ ಶ್ರೇಯಸ್​ ಅಯ್ಯರ್​ ಟೆಸ್ಟ್​ ತಂಡದಲ್ಲಿರುವ ಇತರ ಆಟಗಾರರನ್ನು ನವದೆಹಲಿಯಲ್ಲಿ, ಪ್ರಯಾಣಕ್ಕೆ ಮುನ್ನ ಕೂಡಿಕೊಳ್ಳಲಿದ್ದಾರೆ. ರೋಹಿತ್​, ಕೊಹ್ಲಿ ಅ.15ರಂದೇ ಅಥವಾ ಅದಕ್ಕೆ ಒಂದು ದಿನ ಮುನ್ನವೇ ನವದೆಹಲಿಗೆ ತಲುಪಬಹುದು ಎನ್ನಲಾಗಿದೆ. ಭಾರತ ತಂಡ ಪ್ರವಾಸದ ಮೊದಲ ಪಂದ್ಯವನ್ನು ಅ.19ರಂದು ಪರ್ತ್​ನಲ್ಲಿ ಆಡಲಿದೆ. ಒಂದು ವೇಳೆ ವಿಂಡೀಸ್​ ವಿರುದ್ಧದ 2ನೇ ಟೆಸ್ಟ್​ ಕೂಡ ಬೇಗನೆ ಮುಗಿದರೆ, ಏಕದಿನ ತಂಡದಲ್ಲಿರುವ ಆಟಗಾರರಿಗೆ ಮನೆಗೆ ಮರಳಿ ಮತ್ತೆ ದೆಹಲಿಗೆ ಹಿಂದಿರುಗುವ ಕಿರು ವಿರಾಮವೂ ಲಭಿಸಬಹುದು ಎನ್ನಲಾಗಿದೆ. ಟೆಸ್ಟ್​ ಎಲ್ಲ ಐದು ದಿನಗಳ ಕಾಲ ನಡೆದರೆ ಆಗ ಅ.14ರಂದು ಮುಗಿಯಲಿದ್ದು, ಮರುದಿನವೇ ಆಸೀಸ್​ಗೆ ಪ್ರಯಾಣಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net