ಅಜಿತ್ ಅಗರ್ಕರ್​ ಬಳಗದ ದಿಟ್ಟ ಹೆಜ್ಜೆ! ಭಾರತೀಯ ಕ್ರಿಕೆಟ್​ನಲ್ಲಿ ಆಯ್ಕೆ ಸಮಿತಿಯ ಕಠಿಣ, ನಿಷ್ಠುರ, ಅಚ್ಚರಿಯ ನಡೆಗಳು...

web ajit
Published on

ಬೆಂಗಳೂರು: ಯಾವ ಆಟಗಾರರು ಶಾಶ್ವತವಲ್ಲ. ಆದರೆ ತಂಡದಿಂದ ಯಾರನ್ನು ಯಾವಾಗ ಹೊರಗಿಡಬೇಕು ಮತ್ತು ಸೇರ್ಪಡೆಗೊಳಿಸಬೇಕು ಎಂಬುದು ನಿರ್ಣಾಯಕವಾಗಿರುತ್ತದೆ. ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ಮೆಚ್ಚುಗೆ ಮತ್ತು ಟೀಕೆ ಎರಡನ್ನೂ ಎದುರಿಸಲು ಸಜ್ಜಾಗಿರಬೇಕಾಗುತ್ತದೆ ಮತ್ತು ಅದರ ಲಾಭ&ನಷ್ಟಗಳು ತಿಳಿಯಲು ಫಲಿತಾಂಶ ಬರುವವರೆಗೆ ಕಾಯಬೇಕಾಗುತ್ತದೆ. ಭಾರತೀಯ ಕ್ರಿಕೆಟ್​ ತಂಡ ಅನೇಕ ಬದಲಾವಣೆಗಳನ್ನು ಕಂಡಿರುವ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಜಿತ್​ ಅಗರ್ಕರ್​ ತೆಗೆದುಕೊಂಡ ಕೆಲ ನಿರ್ಧಾರಗಳೂ ಇದೇ ರೀತಿ ಮಿಶ್ರ ಪ್ರತಿಕ್ರಿಯೆ ಮತ್ತು ಮಿಶ್ರ ಲಿತಾಂಶಗಳನ್ನೂ ಕಂಡಿವೆ. ಭಾರತೀಯ ಕ್ರಿಕೆಟ್​ನಲ್ಲಿ ಹಿಂದೆ "ಆಯ್ಕೆಗಾರರನ್ನು ಜೋಕರ್​'ಗಳೆಂದು ಟೀಕಿಸಿದ ನಿದರ್ಶನಗಳೂ ಇವೆ. ಆದರೆ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಭಾರತೀಯ ಕ್ರಿಕೆಟ್​ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗರ್ಕರ್​ ಕೆಲ ದಿಟ್ಟ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. 2026ರ ಟಿ20 ವಿಶ್ವಕಪ್​, 2027ರ ಏಕದಿನ ವಿಶ್ವಕಪ್​, ಡಬ್ಲ್ಯುಟಿಸಿ ಫೈನಲ್​ (ಅರ್ಹತೆ ಪಡೆದರೆ) ಈ ನಿರ್ಧಾರಗಳ ಫಲಿತಾಂಶವನ್ನು ತಿಳಿಸಲಿವೆ. 2023ರ ಜುಲೈನಲ್ಲಿ ಆಯ್ಕೆ ಸಮಿತಿ ಚುಕ್ಕಾಣಿ ಹಿಡಿದ ಅಗರ್ಕರ್​, ಕೋಚ್​ಗಳಾದ ರಾಹುಲ್​ ದ್ರಾವಿಡ್​ ಮತ್ತು ಗೌತಮ್​ ಗಂಭೀರ್​ ಸಹಮತದೊಂದಿಗೆ ತೆಗೆದುಕೊಂಡ ಕೆಲ ನಿರ್ಧಾರಗಳ ಸಂಪ್ತ ಮೆಲುಕು ಇಲ್ಲಿದೆ...

ಪೂಜಾರ, ರಹಾನೆಗೆ ಕೊಕ್​

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ (ಡಬ್ಲ್ಯುಟಿಸಿ) ಮೊದಲೆರಡೂ ಆವೃತ್ತಿಗಳಲ್ಲಿ ಭಾರತ ೈನಲ್​ಗೇರಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಮೂರನೇ ಆವೃತ್ತಿಯ ಆರಂಭದಲ್ಲಿ ಅನುಭವಿ ಬ್ಯಾಟರ್​ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಕೈಬಿಡುವ ದಿಟ್ಟ ನಿರ್ಧಾರವನ್ನು ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡಿತು. ಆದರೆ ಯುವಕರಿಗೆ ಆದ್ಯತೆ ನೀಡುವ ಈ ನಿರ್ಧಾರ ಪೂರ್ಣಪ್ರಮಾಣದಲ್ಲಿ ಯಶ ಕಾಣಲಿಲ್ಲ. ಡಬ್ಲ್ಯುಟಿಸಿ 3ನೇ ಆವೃತ್ತಿಯಲ್ಲಿ ಭಾರತ ೈನಲ್​ಗೇರಲು ವಿಲವಾಗಿದ್ದು ಇದಕ್ಕೆ ಪುಷ್ಟಿ. ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲೇ ಅನುಭವಿಸಿದ ವೈಟ್​ವಾಷ್​ ಕೂಡ ಇದರ ಸೈಡ್​ ಎೆಕ್ಟ್​ ಎನ್ನಬಹುದು.

ಸ್ಥಿತ್ಯಂತರದ ನಿರ್ವಹಣೆ

ಭಾರತೀಯ ಕ್ರಿಕೆಟ್​ನಲ್ಲಿ "ಹೊಸ ನೀರು ಬಂದು, ಹಳೆಯ ನೀರು ಕೊಚ್ಚಿಕೊಂಡು ಹೋಗುವ' ಸಮಯದಲ್ಲೇ ಅಗರ್ಕರ್​ ಆಯ್ಕೆ ಸಮಿತಿಯ ಚುಕ್ಕಾಣಿ ಹಿಡಿದಿದ್ದರು. ಅದನ್ನು ಇದುವರೆಗೆ ತಕ್ಕಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದ ಶ್ರೇಯ ಅಗರ್ಕರ್​ ಅವರದು. ಟಿ20 ವಿಶ್ವಕಪ್​ ಗೆಲುವಿನ ಬಳಿಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ರವೀಂದ್ರ ಜಡೇಜಾ ವಿದಾಯ ಹೇಳಿದಾಗ, ಟೆಸ್ಟ್​ ಕ್ರಿಕೆಟ್​ನಿಂದ ಆರ್​. ಅಶ್ವಿನ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಅಲ್ಪ ಅಂತರದಲ್ಲಿ ನಿರ್ಗಮಿಸಿದಾಗ ಭಾರತ ತಂಡಕ್ಕೆ ಹೆಚ್ಚಿನ ಹೊಡೆತ ಬೀಳದಂತೆ, ಪಕ್ವ ಯುವ ಆಟಗಾರರನ್ನೇ ಆರಿಸುವಲ್ಲಿ ಅಗರ್ಕರ್​ ಯಶ ಕಂಡಿದ್ದಾರೆ.

ಕಾರ್ಯದೊತ್ತಡ ಸಮನ್ವಯ

ಪ್ರಮುಖ ಆಟಗಾರರ ಕಾರ್ಯದೊತ್ತಡದ ಸಮನ್ವಯ ಸಾಧಿಸುವಲ್ಲಿ ಅಗರ್ಕರ್​ ಯೋಜನೆಗಳು ಲಿಸಿವೆ. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ, ವೇಗಿ ಜಸ್​ಪ್ರೀತ್​ ಬುಮ್ರಾರನ್ನು ಮಹತ್ವದ ಟೂರ್ನಿಗಳಿಗೆ ಫಿಟ್​ ಆಗಿಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಟಿ20 ವಿಶ್ವಕಪ್​, ಚಾಂಪಿಯನ್​ ಟ್ರೋಫಿ ವೇಳೆ ಹಾರ್ದಿಕ್​ ಪೂರ್ಣ ಫಿಟ್​ ಆಗಿದ್ದು ಗೆಲುವಿಗೆ ನೆರವಾಯಿತು. 2023ರ ತವರಿನ ಏಕದಿನ ವಿಶ್ವಕಪ್​ ವೇಳೆ ಹಾರ್ದಿಕ್​ ಗಾಯದ ಸಮಸ್ಯೆಯಿಂದಾಗಿ ಅರ್ಧದಲ್ಲೇ ಹೊರಬಿದ್ದಿದ್ದರು. ಇದು ತಂಡಕ್ಕೂ ಫೈನಲ್​ ವೇಳೆ ಹಿನ್ನಡೆ ತಂದಿತ್ತು. ನಂತರ ಹಾರ್ದಿಕ್​ಗೆ ಟಿ20 ನಾಯಕತ್ವ ನೀಡದೆ ಫಿಟ್ನೆಸ್​ನತ್ತ ಗಮನ ನೀಡಲು ಸೂಚಿಸಲಾಗಿತ್ತು. ಇನ್ನು ಬುಮ್ರಾಗೂ ಟೆಸ್ಟ್​ ತಂಡದ ಪೂರ್ಣಕಾಲಿಕ ನಾಯಕತ್ವ ವಹಿಸದೆ ಫಿಟ್ನೆಸ್​ಗೆ ಆದ್ಯತೆ ನೀಡಲಾಯಿತು. ಇಂಗ್ಲೆಂಡ್​ನಲ್ಲಿ ಬುಮ್ರಾ 3 ಟೆಸ್ಟ್​ ಮಾತ್ರ ಆಡುತ್ತಾರೆ ಎಂದು ಅಗರ್ಕರ್​ ಸರಣಿಗೆ ಮೊದಲೇ ಘೋಷಿಸಿದ್ದರು. ಆಸೀಸ್​ ಪ್ರವಾಸದಲ್ಲಿ ಎಲ್ಲ 5 ಟೆಸ್ಟ್​ ಆಡಿ ಬುಮ್ರಾ, ಚಾಂಪಿಯನ್ಸ್​ ಟ್ರೋಫಿ ತಪ್ಪಿಸಿಕೊಂಡಿದ್ದರಿಂದ ಪಾಠ ಕಲಿಯಲಾಯಿತು.

ಸೂರ್ಯ, ಗಿಲ್​ಗೆ ನಾಯಕತ್ವ

ಟಿ20 ವಿಶ್ವಕಪ್​ ಗೆಲುವಿನ ಬಳಿಕ ರೋಹಿತ್​ ವಿದಾಯ ಹೇಳಿದಾಗ ಹಾರ್ದಿಕ್​ ಪಾಂಡ್ಯ ಹೊಸ ನಾಯಕರಾಗುತ್ತಾರೆ ಎಂಬುದೇ ಎಲ್ಲರ ನಿರೀೆ ಆಗಿತ್ತು. ಆದರೆ ಆಯ್ಕೆ ಸಮಿತಿ ಸೂರ್ಯಕುಮಾರ್​ ಯಾದವ್​ರನ್ನು ಉತ್ತರಾಧಿಕಾರಿಯಾಗಿ ಆರಿಸಿ ಅಚ್ಚರಿ ನೀಡಿತು. ರೋಹಿತ್​ ಶರ್ಮ ಟೆಸ್ಟ್​ಗೆ ವಿದಾಯ ಹೇಳಿದಾಗಲೂ ಮುಂದಿನ ನಾಯಕನ ಬಗ್ಗೆ ಗೊಂದಲಗಳಿದ್ದವು. ಆದರೆ, ವಿದೇಶದಲ್ಲಿ ಉತ್ತಮ ಬ್ಯಾಟಿಂಗ್​ ದಾಖಲೆ ಹೊಂದಿರದ ನಡುವೆಯೂ ಶುಭಮಾನ್​ ಗಿಲ್​ಗೆ ಪಟ್ಟಾಭಿಷೇಕ ಮಾಡಿ ಅಗರ್ಕರ್​ ಬಳಗ ಮತ್ತೊಂದು ಅಚ್ಚರಿ ನೀಡಿತು. ಇಂಗ್ಲೆಂಡ್​ ಪ್ರವಾಸದಲ್ಲಿ ಯುವ ತಂಡ ಯಶ ಕಂಡ ಬಳಿಕ ಇನ್ನಷ್ಟು ಧೈರ್ಯ ಮಾಡಿರುವ ಅಗರ್ಕರ್​ ಬಳಗ, ಏಕದಿನ ತಂಡದ ನಾಯಕತ್ವವನ್ನೂ ಅವರಿಗೆ ವಹಿಸಿದೆ. ರೋಹಿತ್​ ಶರ್ಮಗೆ 2027ರ ಏಕದಿನ ವಿಶ್ವಕಪ್​ವರೆಗೆ ನಾಯಕರಾಗಿ ಮುಂದುವರಿಯುವ ಆಸೆ ಇದ್ದರೂ, ಆಗ ಅವರಿಗೆ 41 ವರ್ಷ ಆಗುವುದರಿಂದ ಅಗರ್ಕರ್​ ಬಳಗ ರಿಸ್ಕ್​ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಗಿಲ್​ಗೆ ಈಗಲೇ ಏಕದಿನ ತಂಡದ ನಾಯಕತ್ವ ವಹಿಸಿದ್ದು ಅವಸರದಂತೆ ಕಂಡರೂ, ಈ ನಿರ್ಧಾರದ ಲಾಭ&ನಷ್ಟ ತಿಳಿಯಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

ಮಹತ್ವದ ಟೂರ್ನಿಗೆ ವಿನ್ನಿಂಗ್​ ಟೀಮ್​

2023ರ ತವರಿನ ಏಕದಿನ ವಿಶ್ವಕಪ್​ಗೆ ಭಾರತ ತಂಡದ ಆಯ್ಕೆ ಅಗರ್ಕರ್​ ಬಳಗದ ಮೊದಲ ಪ್ರಮುಖ ನಿರ್ಧಾರ. ಸತತ 10 ಗೆಲುವಿನೊಂದಿಗೆ ಈ ತಂಡ ಬಹುತೇಕ ಯಶ ಸಾಧಿಸಿದರೂ, ಚಾಂಪಿಯನ್​ ಪಟ್ಟ ಮಾತ್ರ ಒಲಿದಿರಲಿಲ್ಲ. ನಂತರ ಅಮೆರಿಕ&ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆದ ಟಿ20 ವಿಶ್ವಕಪ್​ಗೆ ನಾಲ್ವರು ಸ್ಪಿನ್ನರ್​ಗಳನ್ನು ಆರಿಸಿದ್ದು ಅಚ್ಚರಿ ತಂದಿತ್ತು. ಆದರೆ ಕೆರಿಬಿಯನ್​ನ ಬದಲಾದ ಪಿಚ್​ ಸ್ವಭಾವವನ್ನು ಅರಿತು ತೆಗೆದುಕೊಂಡ ಈ ಲೆಕ್ಕಾಚಾರದ ನಿರ್ಧಾರ ಯಶ ತಂದುಕೊಟ್ಟಿತ್ತು. ಹಾಲಿ ವರ್ಷ ಚಾಂಪಿಯನ್ಸ್​ ಟ್ರೋಫಿಗೂ ಮೂವರು ಆಲ್ರೌಂಡರ್​ಗಳ ಸಹಿತ ಐವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿ ಯಶಸ್ಸು ಸಾಧಿಸಲಾಯಿತು. ಅದರಲ್ಲೂ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಅವರನ್ನು ಕೊನೇಕ್ಷಣದಲ್ಲಿ ಯಶಸ್ವಿ ಜೈಸ್ವಾಲ್​ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದ್ದು ನಿರ್ಣಾಯಕವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net