

ಚೆನ್ನೈ: ತವರಿನಲ್ಲಿ ಆಡಿದ ಆರಂಭಿಕ 3 ಪಂದ್ಯಗಳಲ್ಲಿ ಗೆದ್ದಿದ್ದ ಚೆನ್ನೈ ಸೂಪರ್ಕಿಂಗ್ಸ್ ಕಳೆದ ಪಂದ್ಯದಲ್ಲಿ ಲಖನೌ ಎದುರು ಸೋತಿದ್ದರೆ, ಸನ್ರೈಸರ್ಸ್ ಹೈದರಾಬಾದ್ ತಂಡವೂ ತವರಿನ ಆರಂಭಿಕ 2 ಪಂದ್ಯಗಳಲ್ಲಿ ಗೆದ್ದ ಬಳಿಕ ಕಳೆದ ಪಂದ್ಯದಲ್ಲಿ ಆರ್ಸಿಬಿ ಎದುರು ಸೋಲುಂಡಿದೆ. ತವರಿನ ಪ್ರಾಬಲ್ಯ ಬಿಟ್ಟುಕೊಟ್ಟು ಮುಗ್ಗರಿಸಿರುವ ಉಭಯ ತಂಡಗಳು ಐಪಿಎಲ್-17ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಹಾಲಿ ಚಾಂಪಿಯನ್ ಚೆನ್ನೆ$ ಸೂಪರ್ಕಿಂಗ್ಸ್ ತವರಿನ ಪ್ರಾಬಲ್ಯವನ್ನು ಮರುಸ್ಥಾಪಿಸುವತ್ತ ಗಮನಹರಿಸಿದೆ.
ಸಿಎಸ್ಕೆ ತಂಡ ಲಖನೌ ಎದುರು ಸತತ 2 ಪಂದ್ಯದಲ್ಲಿ ಸೋಲು ಅನುಭವಿಸಿದ ಹಿನ್ನಡೆ ಹೊಂದಿದ್ದು, ಅಂಕಪಟ್ಟಿಯಲ್ಲಿ ಪ್ರಗತಿ ಕಾಣಲು ಗೆಲುವಿನ ಅನಿವಾರ್ಯತೆ ಹೊಂದಿದೆ. ಸಿಎಸ್ಕೆ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಜಯ, 4 ಸೋಲಿನ ಮಿಶ್ರ ಫಲ ಎದುರಿಸಿದ್ದರೆ, ಸನ್ರೈಸರ್ಸ್ ತಂಡ ಇಷ್ಟೇ ಪಂದ್ಯಗಳಲ್ಲಿ 5 ಜಯ ಮತ್ತು 3 ಸೋಲು ಅನುಭವಿಸಿದೆ. ಸತತ 4 ಗೆಲುವಿನ ಬಳಿಕ ಸನ್ರೈಸರ್ಸ್ ಕಳೆದ ಪಂದ್ಯದಲ್ಲಿ ಆರ್ಸಿಬಿ ಎದುರು ಚೇಸಿಂಗ್ ವೇಳೆ ಲಯ ತಪ್ಪಿ ಪವರ್ಪ್ಲೇನಲ್ಲೇ ಸೋಲಿನ ಸುಳಿಯಲ್ಲಿ ಸಿಲುಕಿತ್ತು.
ಚೆಪಾಕ್ ಮೈದಾನದಲ್ಲಿ ಕಳೆದ ಕೆಲ ಪಂದ್ಯಗಳಿಂದ 2ನೇ ಸರದಿಯಲ್ಲಿ ಇಬ್ಬನಿ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಚೇಸಿಂಗ್ ಸುಲಭವೆನಿಸುತ್ತಿದೆ. ಆದರೆ ಸನ್ರೈಸರ್ಸ್ಗೆ ಮೊದಲ ಬ್ಯಾಟಿಂಗ್ ಮಾಡಿ ಮೊತ್ತ ರಸಿಕೊಳ್ಳುವುದರಲ್ಲೇ ಹೆಚ್ಚಿನ ಗೆಲುವು ಲಭಿಸಿದೆ. ಹೀಗಾಗಿ ಟಾಸ್ ಯಾವ ಪಾತ್ರ ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿಎಸ್ಕೆಗೆ ಬ್ಯಾಟಿಂಗ್ ಕಳವಳ
ಬ್ಯಾಟಿಂಗ್ ವಿಭಾಗದ ಅಸ್ಥಿರ ನಿರ್ವಹಣೆ ಸಿಎಸ್ಕೆ ತಂಡಕ್ಕೆ ಕಳವಳ ತಂದಿದೆ. ಕಳೆದ ಪಂದ್ಯದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಶತಕ ಸಿಡಿಸಿದರೂ ಗೆಲ್ಲಲಾಗಿರಲಿಲ್ಲ. ಋತುರಾಜ್ ಜತೆಗೆ ಶಿವಂ ದುಬೆ ಹೊರತಾಗಿ ಇತರ ಬ್ಯಾಟರ್ಗಳು ಕೈಕೊಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕಿವೀಸ್ ಬ್ಯಾಟರ್ಗಳಾದ ರಚಿನ್ ರವೀಂದ್ರ ಮತ್ತು ಡೆರಿಲ್ ಮಿಚೆಲ್ ವೈಫಲ್ಯದಿಂದಾಗಿ ಸಿಎಸ್ಕೆ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲೂ ಪದೇಪದೆ ಬದಲಾವಣೆ ಮಾಡುವಂತಾಗಿದೆ. ಇನ್ನು ಲಖನೌ ಎದುರು ಚೆಪಾಕ್ನಲ್ಲಿ 212 ರನ್ ರಸಿಕೊಳ್ಳಲಾಗದೆ ಸೋತಿದ್ದು ಬೌಲಿಂಗ್ ವಿಭಾಗದಲ್ಲೂ ಸಮಸ್ಯೆ ಸೃಷ್ಟಿಸಿದೆ. ತಂಡದ ಪ್ರಮುಖ ಅಸ್ತ್ರಗಳಾದ ಮಥೀಶ ಪಥಿರಣ&ಮುಸ್ತಾಫಿಜುರ್ ಕೂಡ ಸ್ಲಾಗ್ ಓವರ್ಗಳಲ್ಲಿ ದಂಡನೆಗೆ ಒಳಗಾಗಿದ್ದು, ದೊಡ್ಡ ಹಿನ್ನಡೆ ಎನಿಸಿದೆ. ರವೀಂದ್ರ ಜಡೇಜಾ ಬೌಲಿಂಗ್ ಟೂರ್ನಿಯುದ್ದಕ್ಕೂ ಪರಿಣಾಮಕಾರಿ ಎನಿಸಿಲ್ಲ.
ಸನ್ರೈಸರ್ಸ್ಗೆ ಬ್ಯಾಟಿಂಗ್ ಬಲ
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 207 ರನ್ ಸವಾಲು ಬೆನ್ನಟ್ಟಲಾಗದೆ ಸೋತಿದ್ದರೂ, ಸನ್ರೈಸರ್ಸ್ಗೆ ಈಗಲೂ ಬ್ಯಾಟಿಂಗ್ ವಿಭಾಗವೇ ಪ್ರಮುಖ ಬಲ ಎನಿಸಿದೆ. ಪವರ್ಪ್ಲೇನಲ್ಲಿ ಟ್ರಾವಿಸ್ ಹೆಡ್-ಅಭಿಷೇಕ್ ಶರ್ಮ ಗರ್ಜಿಸಿದರೆ ಸನ್ರೈಸರ್ಸ್ ಅರ್ಧ ಪಂದ್ಯವನ್ನೇ ಗೆದ್ದಂತೆ ಆಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್, ನಿತೀಶ್ ರೆಡ್ಡಿ, ಅಬ್ದುಲ್ ಸಮದ್ ಬಿರುಸಿನಾಟ ಆಡುತ್ತಿದ್ದರೆ, ಏಡನ್ ಮಾರ್ಕ್ರಮ್ ಮಾತ್ರ ಕಳೆದೆರಡು ಪಂದ್ಯಗಳಿಂದ ವೈಫಲ್ಯ ಕಾಣುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ದುಬಾರಿಯಾಗುತ್ತಿದ್ದು, ಕಳೆದ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಕಬಳಿಸಿದ್ದಾರೆ. ವೇಗಿಗಳಾದ ಉಮ್ರಾನ್ ಮಲಿಕ್, ಜಲ್ಲಾಕ್ ಫಾರೂಖಿ, ಆಕಾಶ್ ಸಿಂಗ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಮುಖಾಮುಖಿ: 20
ಸಿಎಸ್ಕೆ: 14
ಎಸ್ಆರ್ಎಚ್: 6
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.