

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ತಂಡದಿಂದ 3ನೇ ಪಂದ್ಯದಲ್ಲಿ ತಿರುಗೇಟು ಎದುರಿಸಿರುವ ಭಾರತ ತಂಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಬೇಕಾದ ಒತ್ತಡದಲ್ಲಿ ಸಿಲುಕಿದೆ. ಸದ್ಯ ಸರಣಿಯಲ್ಲಿ 1-2 ಹಿನ್ನಡೆಯಲ್ಲಿರುವ ಭಾರತ ತಂಡ ಸಮಬಲ ಸಾಧಿಸಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸಬೇಕಾದ ಸವಾಲು ಎದುರಿಸುತ್ತಿದೆ. ಸರಣಿ ಜೀವಂತವಿಡುವ ಜತೆಗೆ ಕೊನೇ ಎರಡೂ ಪಂದ್ಯಗಳಲ್ಲಿ ಗೆದ್ದರಷ್ಟೇ ಸರಣಿ ವಶಪಡಿಸಿಕೊಳ್ಳುವ ಅವಕಾಶ ವಿರಾಟ್ ಕೊಹ್ಲಿ ಬಳಗದ ಮುಂದಿದೆ.
ತವರಿನಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಭಾರತಕ್ಕೆ ಈ ಸರಣಿ ದೊಡ್ಡ ವೇದಿಕೆಯಾಗಿದೆ. ಭಾರತ ತಂಡ ತವರಿನಲ್ಲಿ ಆಡಿದ ಕಳೆದ ಕೆಲ ಪಂದ್ಯಗಳಿಂದ ಮೊತ್ತ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಹಾಲಿ ಸರಣಿಯಲ್ಲೂ ಇಂಥ 2 ದೃಷ್ಟಾಂತ ದಾಖಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದಾಗ ಸಮರ್ಥ ಬ್ಯಾಟಿಂಗ್ ನಿರ್ವಹಣೆ ತೋರಿದರಷ್ಟೇ ಭಾರತ ತಂಡ ಬಳಿಕ ಬೌಲರ್‌ಗಳಿಂದಲೂ ಅಂಥದ್ದೇ ನಿರ್ವಹಣೆ ನಿರೀಕ್ಷಿಸಬಹುದಾಗಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಇಂಗ್ಲೆಂಡ್ ತಂಡ ಸರಣಿ ವಶಪಡಿಸಿಕೊಳ್ಳುವುದನ್ನು ತಡೆಯಲು ಭಾರತದಿಂದ ಸರ್ವಾಂಗೀಣ ನಿರ್ವಹಣೆ ಅಗತ್ಯವಾಗಿದೆ. ಕೊಹ್ಲಿ ಟಾಸ್ ಗೆದ್ದರೆ ಈ ಕೆಲಸ ಸ್ವಲ್ಪ ಸುಲಭವಾಗಬಹುದು.
ರಾಹುಲ್‌ಗೆ ಕೊಹ್ಲಿ ಬೆಂಬಲ
ಸರಣಿಯ ಮೊದಲ 3 ಪಂದ್ಯಗಳಲ್ಲಿ 2 ಶೂನ್ಯ ಸಹಿತ 1 ರನ್ ಮಾತ್ರ ಗಳಿಸಿರುವ ಕನ್ನಡಿಗ ಕೆಎಲ್ ರಾಹುಲ್ ವೈಫಲ್ಯ ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಇದರ ನಡುವೆಯೂ ರಾಹುಲ್, ನಾಯಕ ವಿರಾಟ್ ಕೊಹ್ಲಿ ಅವರಿಂದ ಬೆಂಬಲ ಪಡೆದುಕೊಂಡಿದ್ದು, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. 3ನೇ ಪಂದ್ಯದ ಸೋಲಿನ ಬಳಿಕ ಕೊಹ್ಲಿ ಹೇಳಿರುವ ಪ್ರಕಾರ, ರಾಹುಲ್ ಕಳೆದ 2-3 ವರ್ಷಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಗಿಂತ ಹೆಚ್ಚು ಯಶಸ್ಸು ಕಂಡಿದ್ದಾರೆ. ಹೀಗಾಗಿ ರೋಹಿತ್ ಜತೆಗೆ ಇನಿಂಗ್ಸ್ ಆರಂಭಿಸುವುದನ್ನು ಮುಂದುವರಿಸಲಿದ್ದಾರೆ. ಅವರ ಬಗ್ಗೆ ಯಾವುದೇ ಕಳವಳ ಹೊಂದಿಲ್ಲ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೂಡ ರಾಹುಲ್ ಪರವಾಗಿ ನಿಂತಿದ್ದು, ‘3 ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡಿರುವುದಕ್ಕೆ ರಾಹುಲ್ ಟಿ20 ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಅಲ್ಲ ಎನ್ನಲಾಗದು. ಅವರು ಲಯಕ್ಕೆ ಮರಳುವ ವಿಶ್ವಾಸವಿದೆ’ ಎಂದಿದ್ದಾರೆ.
*2 ದಿನಗಳ ಹಿಂದೆ ನಾನು ಕೂಡ ರನ್‌ಬರ ಎದುರಿಸುತ್ತಿದ್ದೆ. ಕೆಎಲ್ ರಾಹುಲ್ ಅವರೂ ಚಾಂಪಿಯನ್ ಆಟಗಾರ. ಅವರು ತಂಡದ ಪ್ರಮುಖ ಆಟಗಾರರಾಗಿ ಮುಂದುವರಿಯಲಿದ್ದಾರೆ.
|ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ
*ಪಂದ್ಯ ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1.
ಟಾಸ್ ಲೆಕ್ಕಾಚಾರ ಬದಲಿಸಬೇಕಿದೆ
ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡವೇ ಪಂದ್ಯವನ್ನೂ ಜಯಿಸಿದೆ. ಮೂರೂ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ ಸುಲಭವಾಗಿ ಗೆಲುವು ದಾಖಲಿಸಿದೆ. ಹೀಗಾಗಿ ಇದೀಗ ಟಾಸ್ ಲೆಕ್ಕಾಚಾರವನ್ನು ನೆಚ್ಚಿಕೊಳ್ಳದೆ ಗೆಲುವು ಒಲಿಸಿಕೊಳ್ಳುವತ್ತ ಭಾರತ ತಂಡ ಗಮನಹರಿಸಬೇಕಿದೆ. ಇದಕ್ಕೆ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಅಂದರೆ ಕನಿಷ್ಠ 180 ಪ್ಲಸ್ ರನ್ ಪೇರಿಸುವುದು ಅಗತ್ಯವಾಗಿದೆ.
ಟೀಮ್ ನ್ಯೂಸ್:
ಭಾರತ: ನಾಯಕ ಕೊಹ್ಲಿ ಬೆಂಬಲದಿಂದಾಗಿ ರಾಹುಲ್ 4ನೇ ಪಂದ್ಯದಲ್ಲೂ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಇನ್ನು, ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಜತೆಗೆ ಆಡುವ ಬಳಗಕ್ಕೆ 3ನೇ ಆಲ್ರೌಂಡರ್ ಕೂಡ ಸೇರ್ಪಡೆಯಾಗುವ ಸೂಚನೆಯನ್ನು ಕೊಹ್ಲಿ 3ನೇ ಪಂದ್ಯದ ಬಳಿಕ ನೀಡಿದ್ದಾರೆ. ಹೀಗಾಗಿ ರಾಹುಲ್ ತೆವಾಟಿಯಾ ಅಥವಾ ಅಕ್ಷರ್ ಪಟೇಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಇಂಗ್ಲೆಂಡ್: ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟದಲ್ಲಿರುವ ಡೇವಿಡ್ ಮಲಾನ್ ಹೊರತಾಗಿ ಇಂಗ್ಲೆಂಡ್‌ನ ಎಲ್ಲ ಬ್ಯಾಟ್ಸ್‌ಮನ್‌ಗಳು ಈಗ ಲಯ ಕಂಡುಕೊಂಡಿದ್ದಾರೆ. ಬೌಲಿಂಗ್‌ನಲ್ಲೂ ಇಂಗ್ಲೆಂಡ್ ಹೆಚ್ಚಿನ ಸಮಸ್ಯೆ ಹೊಂದಿಲ್ಲ. ಹೀಗಾಗಿ ತಂಡದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ.
4ನೇ ಸ್ಥಾನಕ್ಕಿಳಿದ ರಾಹುಲ್
ಇಂಗ್ಲೆಂಡ್ ವಿರುದ್ಧದ ಸರಣಿಯ ಸತತ ವೈಫಲ್ಯದಿಂದಾಗಿ ಕೆಎಲ್ ರಾಹುಲ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ 3ರಿಂದ 4ನೇ ಸ್ಥಾನಕ್ಕಿಳಿದಿದ್ದಾರೆ. ಇದರ ಹೊರತಾಗಿಯೂ ಅವರು ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ಸತತ 2 ಇನಿಂಗ್ಸ್‌ಗಳಲ್ಲಿ 70 ಪ್ಲಸ್ ರನ್ ಗಳಿಸಿದ ನಾಯಕ ವಿರಾಟ್ ಕೊಹ್ಲಿ 6ರಿಂದ 5ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಭಾರತದ ಬೌಲರ್‌ಗಳು ಅಗ್ರ 10ರೊಳಗಿಲ್ಲ. 11ನೇ ಸ್ಥಾನಕ್ಕೇರಿರುವ ವಾಷಿಂಗ್ಟನ್ ಸುಂದರ್ ಅವರೇ ಭಾರತದ ಅಗ್ರ ಶ್ರೇಯಾಂಕಿತ ಬೌಲರ್ ಆಗಿದ್ದಾರೆ. 3ನೇ ಪಂದ್ಯದಲ್ಲಿ ಸೋಲು ಕಂಡ ಭಾರತ, ತಂಡ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕಳೆದುಕೊಂಡಿದೆ. ಭಾರತ 4-1ರಿಂದ ಸರಣಿ ಜಯಿಸಿದ್ದರೆ, ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುತ್ತಿತ್ತು.