ಇಂದು ಆರ್​ಸಿಬಿ-ಡೆಲ್ಲಿ ಡು ಆರ್​ ಡೈ ಕಾದಾಟ; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ಲೇಆಫ್​​ ಆಸೆ ಜೀವಂತವಿರಿಸಲು ಹೋರಾಟ

web rcb vs dc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸತತ 4 ಗೆಲುವಿನೊಂದಿಗೆ ಪ್ಲೇಆಫ್​ ಆಸೆಗೆ ಮರುಜೀವ ತುಂಬಿಸಿಕೊಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಅಸ್ಥಿರ ನಿರ್ವಹಣೆಯ ನಡುವೆಯೂ ಪ್ಲೇಆಫ್​ ಆಸೆ ಜೀವಂತ ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಐಪಿಎಲ್​-17ರಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮಾಡು ಇಲ್ಲವೆ ಮಡಿ ಎನಿಸಿದ್ದು, ಸೋತ ತಂಡ ಪ್ಲೇಆಫ್​ ರೇಸ್​ನಿಂದ ಹೊರಬೀಳಲಿದೆ. ಆರ್​ಸಿಬಿ ತವರಿನ ಲಾಭ ಹೊಂದಿದ್ದರೆ, ಡೆಲ್ಲಿ ತಂಡ ನಾಯಕ ರಿಷಭ್​ ಪಂತ್​ ಗೈರಿನ ಬಲುದೊಡ್ಡ ಹಿನ್ನಡೆ ಎದುರಿಸಿದೆ.

ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಬಹುತೇಕ ನಿರ್ಗಮನ ಬಾಗಿಲಿನತ್ತ ಸಾಗಿದ್ದ ಫಾಫ್​ ಡು ಪ್ಲೆಸಿಸ್​ ಪಡೆ, ನಂತರದಲ್ಲಿ ಆಡಿದ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್​ಸಿಬಿ ಮತ್ತೆ ಪ್ಲೇಆಫ್​​ ಕನಸು ಕಾಣಲಾರಂಭಿಸಿದೆ. ಕಳೆದ 4 ಪಂದ್ಯಗಳಲ್ಲಿ ಗುಜರಾತ್​ ವಿರುದ್ಧ 2 ಬಾರಿ ಗೆದ್ದಿರುವ ಆರ್​ಸಿಬಿ, ಪಂಜಾಬ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್​ ತಂಡಗಳನ್ನೂ ಮಣಿಸಿದೆ. ಈ 4 ಗೆಲುವು ಸಾಧಿಸಿದ ರೀತಿ ಮತ್ತು ಡೆಲ್ಲಿ ತಂಡ ಪಂತ್​ ಗೈರಿನ ಹಿನ್ನಡೆ ಹೊಂದಿರುವುದನ್ನು ಗಮನಿಸಿದಾಗ ಆರ್​ಸಿಬಿ ಈ ಪಂದ್ಯದಲ್ಲಿ ಫೇವರಿಟ್​ ತಂಡವೆನಿಸಿದೆ.

ಡೆಲ್ಲಿ ತಂಡವೂ ಆರಂಭಿಕ 5 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿತ್ತು. ನಂತರದಲ್ಲಿ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಡೆಲ್ಲಿ ಈ ಪಂದ್ಯ ಗೆದ್ದರೆ 4ನೇ ಸ್ಥಾನಕ್ಕೇರಲಿದೆ. ಆದರೆ ರನ್​ರೇಟ್​ ಮೈನಸ್​ನಲ್ಲಿರುವುದರಿಂದ ಡೆಲ್ಲಿಗೆ ದೊಡ್ಡ ಅಂತರದ ಗೆಲುವು ಅಗತ್ಯವಾಗಿದೆ.

250: ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ 250 ಪಂದ್ಯ ಆಡಿದ 4ನೇ ಆಟಗಾರ ಎನಿಸಲಿದ್ದಾರೆ. ಧೋನಿ (262), ರೋಹಿತ್​ ಶರ್ಮ (256), ದಿನೇಶ್​ ಕಾರ್ತಿಕ್​ (254) ಮೊದಲ ಮೂವರು. ಕೊಹ್ಲಿ ಐಪಿಎಲ್​ನಲ್ಲಿ ಒಂದೇ ತಂಡದ (ಆರ್​ಸಿಬಿ) ಪರ 250 ಪಂದ್ಯ ಆಡಿದ ಮೊದಲಿಗ ಎನಿಸಲಿದ್ದಾರೆ.

ಕೊಹ್ಲಿ ರನ್​ಮಳೆ ಬಲ

ಆರ್​ಸಿಬಿ ತಂಡದ ಪ್ರತಿ ಗೆಲುವಿನಲ್ಲೂ ವಿರಾಟ್​ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 6 ಬಾರಿ 50 ಪ್ಲಸ್​ ಇನಿಂಗ್ಸ್​ ಆಡಿ 634 ರನ್​ ಕಲೆಹಾಕಿರುವ ಕೊಹ್ಲಿಗೆ ಪ್ಲೆಸಿಸ್​, ಪಾಟೀದಾರ್​, ಗ್ರೀನ್​, ಕಾರ್ತಿಕ್​ ಸೂಕ್ತ ಬೆಂಬಲ ಒದಗಿಸುತ್ತ ಬಂದಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಅತ್ಯಂತ ದುರ್ಬಲವಾಗಿ ಕಾಣಿಸಿದ್ದ ಆರ್​ಸಿಬಿ ಬೌಲಿಂಗ್​ ವಿಭಾಗ ಕಳೆದ 4 ಪಂದ್ಯಗಳಿಂದ ಬಲಿಷ್ಠವಾಗಿ ಪುನರಾಗಮನ ಕಂಡಿದೆ. ಪ್ರಮುಖವಾಗಿ ವೇಗಿ ಮೊಹಮದ್​ ಸಿರಾಜ್​ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದ ಬಳಿಕ ಬಿಗಿ ದಾಳಿ ಸಂಟಿಸುತ್ತಿದ್ದರೆ, ಸ್ಪಿನ್ನರ್​ಗಳಾದ ಕರ್ಣ್​ ಶರ್ಮ ಮತ್ತು ಸ್ವಪ್ನಿಲ್​ ಸಿಂಗ್​ ಕೂಡ ಉಪಯುಕ್ತ ವಿಕೆಟ್​ ಕಬಳಿಸಿದ್ದಾರೆ. ಗ್ರೀನ್​ ಆಲ್ರೌಂಡ್​ ನಿರ್ವಹಣೆ ತೋರಿಸುತ್ತಿದ್ದಾರೆ.

ಮೆಕ್​ಗುರ್ಕ್​ ಸವಾಲು

ಪಂತ್​ ಮೇಲಿನ ನಿಷೇಧ ಮತ್ತು ಡೇವಿಡ್​ ವಾರ್ನರ್​ ಗಾಯದ ಸಮಸ್ಯೆ ನಡುವೆ ಆರ್​ಸಿಬಿ ತಂಡಕ್ಕೆ ಡೆಲ್ಲಿ ಬ್ಯಾಟಿಂಗ್​ ವಿಭಾಗದಲ್ಲಿ ಯುವ ಆರಂಭಿಕ ಜೇಕ್​ ಫ್ರೇಸರ್​ ಮೆಕ್​ಗುರ್ಕ್​ರಿಂದ ಸವಾಲು ಎದುರಾಗಲಿದೆ. ಮೆಕ್​ಗುರ್ಕ್​ 7 ಪಂದ್ಯಗಳಲ್ಲಿ 235.87ರ ಸ್ಟ್ರೆ$ಕ್​ರೇಟ್​ನಲ್ಲಿ 309 ರನ್​ ಸಿಡಿಸಿದ್ದು, ಪವರ್​ಪ್ಲೇನಲ್ಲಿ ಡೆಲ್ಲಿಗೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಜತೆಗೆ ಯುವ ಬ್ಯಾಟರ್​ ಅಭಿಷೇಕ್​ ಪೊರೆಲ್​ ಬೆಂಬಲ ನೀಡುತ್ತಿದ್ದಾರೆ. ಆದರೆ ಪಂತ್​ ಗೈರಿನಲ್ಲಿ ಡೆಲ್ಲಿ ಮಧ್ಯಮ ಕ್ರಮಾಂಕ ಮತ್ತಷ್ಟು ದುರ್ಬಲಗೊಂಡಿದ್ದು, ಟ್ರಿಸ್ಟಾನ್​ ಸ್ಟಬ್ಸ್​ ಹೆಚ್ಚಿನ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಬೌಲಿಂಗ್​ ವಿಭಾಗದಲ್ಲಿ ಸ್ಪಿನ್ನರ್​ಗಳಾದ ಕುಲದೀಪ್​ ಯಾದವ್​, ಅಕ್ಷರ್​ ಪಟೇಲ್​ ಬಿಗಿ ದಾಳಿ ಪ್ರದರ್ಶಿಸುತ್ತಿದ್ದರೆ, ವೇಗದ ಬೌಲಿಂಗ್​ ವಿಭಾಗದಲ್ಲಿ ಖಲೀಲ್​ ಅಹ್ಮದ್​ (14) ಮತ್ತು ಮುಕೇಶ್​ ಕುಮಾರ್​ (15) ಹೆಚ್ಚಿನ ವಿಕೆಟ್​ ಬೇಟೆಯಾಡಿದ್ದಾರೆ.

ಮಳೆ ಭೀತಿ...

ಉದ್ಯಾನನಗರಿಯಲ್ಲಿ ಕಳೆದ ಕೆಲದಿನಗಳಿಂದ ರಾತ್ರಿಯ ವೇಳೆ ಮಳೆ ಸುರಿಯುತ್ತಿರುವುದರಿಂದ ಆರ್​ಸಿಬಿ&ಡೆಲ್ಲಿ ಪಂದ್ಯವೂ ಮಳೆ ಭೀತಿಯ ನಡುವೆಯೇ ನಡೆಯಲಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಶೇ. 25ರಷ್ಟಿದೆ. ಅಂದರೆ ಮಳೆ ಕಾಡಿದರೂ ಸ್ಪಷ್ಟ ಲಿತಾಂಶ ಸಿಗಬಹುದು. ಒಂದು ವೇಳೆ ಪಂದ್ಯ ರದ್ದಾದರೆ ಆರ್​ಸಿಬಿ ಅಧಿಕೃತವಾಗಿ ಪ್ಲೇಆ್​ ರೇಸ್​ನಿಂದ ಹೊರಬೀಳಲಿದೆ ಮತ್ತು ಡೆಲ್ಲಿ ತಂಡ ಗಣಿತಶಾಸ್ತ್ರದ ಪ್ರಕಾರವಷ್ಟೇ ಪ್ಲೇಆ್​ ರೇಸ್​ನಲ್ಲಿ ಉಳಿಯಲಿದೆ.

*ಮುಖಾಮುಖಿ: 30

ಆರ್​ಸಿಬಿ: 18

ಡೆಲ್ಲಿ: 11

ರದ್ದು: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

ಡೆಲ್ಲಿಗೆ ಅಕ್ಷರ್​ ಸಾರಥ್ಯ

ರಿಷಭ್​ ಪಂತ್​ ಗೈರಿನಲ್ಲಿ ಆಲ್ರೌಂಡರ್​ ಅಕ್ಷರ್​ ಪಟೇಲ್​ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಡೆಲ್ಲಿ ತಂಡವನ್ನು ಡೇವಿಡ್​ ವಾರ್ನರ್​ ಮುನ್ನಡೆಸಿದ್ದರು. ಆದರೆ ವಾರ್ನರ್​ ಸದ್ಯ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಹೀಗಾಗಿ ಉಪನಾಯಕ ಅಕ್ಷರ್​ಗೆ ಹಂಗಾಮಿ ಸಾರಥ್ಯ ನೀಡಲಾಗುತ್ತಿದೆ. ಅಕ್ಷರ್​ ಡೆಲ್ಲಿ ತಂಡದ 13ನೇ ನಾಯಕ ಎನಿಸಲಿದ್ದಾರೆ.

ಪಂತ್​ಗೆ ನಿಷೇಧ, ಪಂದ್ಯಕ್ಕೆ ಗೈರು

ರಾಜಸ್ಥಾನ ವಿರುದ್ಧ ಮೇ 7ರಂದು ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿನ ನಿಧಾನಗತಿ ಓವರ್​ಗಾಗಿ ಡೆಲ್ಲಿ ತಂಡದ ನಾಯಕ ರಿಷಭ್​ ಪಂತ್​ 30 ಲಕ್ಷ ರೂ. ದಂಡದೊಂದಿಗೆ ಒಂದು ಪಂದ್ಯ ನಿಷೇಧ ಶಿೆಗೂ ಗುರಿಯಾಗಿದ್ದಾರೆ. ಇದರಿಂದಾಗಿ ಅವರು ಆರ್​ಸಿಬಿ ವಿರುದ್ಧದ ಮಹತ್ವದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಡೆಲ್ಲಿ ತಂಡ ರಾಯಲ್ಸ್​ ವಿರುದ್ಧ 20 ರನ್​ಗಳಿಂದ ಗೆಲುವು ಕಂಡ ಪಂದ್ಯದಲ್ಲಿ ಕೊನೇ ಓವರ್​ ಆರಂಭಗೊಂಡಾಗ ನಿಗದಿತ ಸಮಯಕ್ಕಿಂತ 10 ನಿಮಿಷ ಹಿಂದುಳಿದಿತ್ತು. ಡೆಲ್ಲಿ ತಂಡದ ಇತರ ಆಟಗಾರರಿಗೆ ಗರಿಷ್ಠ 12 ಲಕ್ಷ ರೂ. ಅಥವಾ ಪಂದ್ಯ ಸಂಭಾವನೆಯ ಶೇ. 50 ದಂಡ ವಿಧಿಸಲಾಗಿದೆ. ಡೆಲ್ಲಿ ತಂಡ ಹಾಲಿ ಟೂರ್ನಿಯಲ್ಲಿ 3ನೇ ಬಾರಿ ಓವರ್​ರೇಟ್​ ಪ್ರಮಾದ ಎಸಗಿರುವುದರಿಂದ ಪಂತ್​ ಈ ಬಾರಿ ದಂಡದೊಂದಿಗೆ ನಿಷೇಧವನ್ನೂ ಎದುರಿಸಿದ್ದಾರೆ. ಈ ಮುನ್ನ ಮೊದಲ 2 ಬಾರಿ ಅವರಿಗೆ 12 ಮತ್ತು 24 ಲಕ್ಷ ರೂ. ದಂಡ ವಿಧಿಸಲಾಗಿತ್ತು. ನಿಧಾನಗತಿ ಓವರ್​ಗಾಗಿ ಪಂತ್​ಗೆ ದಂಡ&ನಿಷೇಧ ವಿಧಿಸಿದ ಮ್ಯಾಚ್​ ರೆಫ್ರಿ ನಿರ್ಧಾರದ ವಿರುದ್ಧ ಡೆಲ್ಲಿ ತಂಡ ಬಿಸಿಸಿಐ ಒಂಬುಡ್ಸ್​ಮನ್​ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ವರ್ಚುವಲ್​ ಮೂಲಕ ಈ ಪ್ರಕರಣದ ವಿಚಾರಣೆ ನಡೆಸಿದ ಒಂಬುಡ್ಸ್​ಮನ್​, ಮ್ಯಾಚ್​ ರೆಫ್ರಿ ನಿರ್ಧಾರವನ್ನು ಎತ್ತಿಹಿಡಿದಿದ್ದಾರೆ. ಹೀಗಾಗಿ ಬಿಸಿಸಿಐ, ಪಂತ್​ಗೆ ನಿಷೇಧ ಹೇರಿರುವ ನಿರ್ಧಾರವನ್ನು ತಡವಾಗಿ ಬಹಿರಂಗ ಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net