ರಣಜಿಯಲ್ಲಿ ಮಯಾಂಕ್​, ಕಿಶನ್​ ಅರ್ಧಶತಕದಾಸರೆ ನಡುವೆಯೂ ಕರ್ನಾಟಕಕ್ಕೆ ತ್ರಿಪುರ ಕಡಿವಾಣ

ranji web
Published on

ಅಗರ್ತಲ: ಆತಿಥೇಯ ತ್ರಿಪುರ ತಂಡದ ಬಿಗಿ ಬೌಲಿಂಗ್​ ದಾಳಿಯ ನಿರ್ವಹಣೆಯ ನಡುವೆ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 4ನೇ ಲೀಗ್​ ಪಂದ್ಯದಲ್ಲಿ ಸಾಧಾರಣ ಮೊತ್ತದತ್ತ ಸಾಗಿದೆ.

ಮಹಾರಾಜ ವೀರ್​ ವಿಕ್ರಮ್​ ಕಾಲೇಜು ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ರಾಜ್ಯ ತಂಡ ದಿನದಂತ್ಯಕ್ಕೆ 78 ಓವರ್​ಗಳಲ್ಲಿ 8 ವಿಕೆಟ್​ಗೆ 241 ರನ್​ ಪೇರಿಸಿದೆ. ಅರ್ಧಶತಕ ಬಾರಿಸಿ ರಾಜ್ಯದ ಮಾನ ಕಾಪಾಡಿದ ವೈಶಾಕ್​ ವಿಜಯ್​ಕುಮಾರ್​ (50*) ಜತೆಗೆ ವಿದ್ವತ್​ ಕಾವೇರಪ್ಪ (4) ಕ್ರೀಸ್​ನಲ್ಲಿದ್ದಾರೆ. ಮಂಜಿನ ವಾತಾವರಣದಿಂದಾಗಿ ಬೆಳಗ್ಗೆ ಆಟ ತಡವಾಗಿ ಆರಂಭಗೊಂಡಿತು.

ಮಯಾಂಕ್​, ಕಿಶನ್​ ಅರ್ಧಶತಕ

ಆರಂಭಿಕ ಆಘಾತ ಎದುರಿಸಿದ ಕರ್ನಾಟಕ 16 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಪರದಾಡಿತು. ಆಗ ಜತೆಗೂಡಿದ ಮಯಾಂಕ್​ ಅಗರ್ವಾಲ್​&ಕಿಶನ್​ ಬಿದರೆ ಜೋಡಿ 4ನೇ ವಿಕೆಟ್​ಗೆ 87 ರನ್​ ಸೇರಿಸಿ ಚೇತರಿಕೆ ಒದಗಿಸಿತು. ಇವರಿಬ್ಬರ ನಿರ್ಗಮನದ ಬಳಿಕ ಬಾಲಂಗೋಚಿ ವೈಶಾಕ್​ ವಿಜಯ್​ಕುಮಾರ್​ ಬಿರುಸಿನ ಆಟದೊಂದಿಗೆ ಮೊತ್ತ ಏರಿಸಲು ನೆರವಾದರು.

ರಾಜ್ಯದ ಪರ ನಾಲ್ವರು ಪದಾರ್ಪಣೆ

ಪಂದ್ಯದಲ್ಲಿ ಕರ್ನಾಟಕ ಪರ ನಾಲ್ವರು ಆಟಗಾರರಾದ ಕೆವಿ ಅನೀಶ್​, ಕಿಶನ್​ ಬಿದರೆ, ಹಾರ್ದಿಕ್​ ರಾಜ್​ ಮತ್ತು ಕೆ. ಶಶಿಕುಮಾರ್​ ರಣಜಿಗೆ ಪದಾರ್ಪಣೆ ಮಾಡಿದರು. ಮನೀಷ್​ ಪಾಂಡೆ, ಡಿ. ನಿಶ್ಚಲ್​, ಶುಭಾಂಗ್​ ಹೆಗ್ಡೆ ಮತ್ತು ರೋಹಿತ್​ ಕುಮಾರ್​ ಎಸಿ ಬದಲಿಗೆ ಅವರು ಅವಕಾಶ ಪಡೆದರು. ಪಡಿಕಲ್​ ಸ್ಥಾನವನ್ನು ಆರ್​. ಸಮರ್ಥ್​ ತುಂಬಿದರೆ, ವೆಂಕಟೇಶ್​ ಸ್ಥಾನದಲ್ಲಿ ವಿದ್ವತ್​ ಕಾವೇರಪ್ಪ ತಂಡಕ್ಕೆ ಮರಳಿದರು.

ಕರ್ನಾಟಕ: 78 ಓವರ್​ಗಳಲ್ಲಿ 8 ವಿಕೆಟ್​ಗೆ 241 (ಸಮರ್ಥ್​ 1, ಮಯಾಂಕ್​ 51, ಅನೀಶ್​ 1, ನಿಕಿನ್​ 4, ಕಿಶನ್​ 62, ಶರತ್​ 25, ಹಾರ್ದಿಕ್​ 9, ವೈಶಾಕ್​ 50*, ಶಶಿಕುಮಾರ್​ 19, ರಾಣಾ ದತ್ತ 32ಕ್ಕೆ 3, ಮಣಿಶಂಕರ್​ 35ಕ್ಕೆ 2, ಅಭಿಜಿತ್​ ಸರ್ಕಾರ್​ 55ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net