ಇಂದಿನಿಂದ ಮಹಿಳೆಯರ ಮಿನಿ ಐಪಿಎಲ್; ಟ್ರೈಲ್‌ಬ್ಲೇಜರ್ಸ್‌-ಸೂಪರ್‌ನೋವಾಸ್ ನಡುವೆ ಮೊದಲ ಪಂದ್ಯ

womens ipl web
Published on

ಪುಣೆ: ಮಹಿಳೆಯರ ಮಿನಿ ಐಪಿಎಲ್ ಖ್ಯಾತಿಯ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿ ಸೋಮವಾರದಿಂದ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ಮತಿ ಮಂದನಾ ಸಾರಥ್ಯದ ಟ್ರೈಲ್‌ಬ್ಲೇಜರ್ಸ್‌ ಮತ್ತು ಹರ್ಮಾನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ದೀಪ್ತಿ ಶರ್ಮ ನಾಯಕತ್ವದ ವೆಲೋಸಿಟಿ ಟೂರ್ನಿಯಲ್ಲಿ ಆಡಲಿರುವ 3ನೇ ತಂಡವಾಗಿದೆ.

ಮುಂದಿನ ವರ್ಷದಿಂದ ಮಹಿಳೆಯರ ಪೂರ್ಣಪ್ರಮಾಣದ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಈಗಾಗಲೆ ಸಿದ್ಧತೆ ಆರಂಭಿಸಿದೆ. ಹೀಗಾಗಿ ಅದಕ್ಕೆ ಪೂರ್ವಸಿದ್ಧತೆಯಂತಿರುವ ವುಮೆನ್ಸ್ ಟಿ20 ಚಾಲೆಂಜ್ ಈ ವರ್ಷವೇ ಕೊನೆಯದಾಗಿರಲಿದೆ.

ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ಈ ಸಲದ ಟೂರ್ನಿಯಲ್ಲಿ ಆಡುತ್ತಿಲ್ಲ. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಅಲನಾ ಕಿಂಗ್, ವೆಸ್ಟ್ ಇಂಡೀಸ್‌ನ ಡಿಯೇಂಡ್ರ ಡಾಟಿನ್, ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಸಹಿತ 12 ವಿದೇಶಿ ಆಟಗಾರ್ತಿಯರೂ ಕಣದಲ್ಲಿದ್ದಾರೆ. ಹಾಲಿ ಚಾಂಪಿಯನ್ ಟ್ರೈಲ್‌ಬ್ಲೇಜರ್ಸ್‌ ತಂಡ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರನ್ನೊಳಗೊಂಡಿದೆ.

ವೇಳಾಪಟ್ಟಿ:

ಮೇ 23: ಟ್ರೈಲ್‌ಬ್ಲೇಜರ್ಸ್‌-ಸೂಪರ್‌ನೋವಾಸ್ (ಆರಂಭ: ರಾತ್ರಿ 7.30)

ಮೇ 24: ಸೂಪರ್‌ನೋವಾಸ್-ವೆಲೋಸಿಟಿ (ಆರಂಭ: ಮಧ್ಯಾಹ್ನ 3.30)

ಮೇ 26: ವೆಲೋಸಿಟಿ-ಟ್ರೈಲ್‌ಬ್ಲೇಜರ್ಸ್‌ (ಆರಂಭ: ರಾತ್ರಿ 7.30)

ಮೇ 28: ಫೈನಲ್ (ಆರಂಭ: ರಾತ್ರಿ 7.30).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net