

ಮುಂಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 15ನೇ ಆವೃತ್ತಿಗೆ ಗೆಲುವಿನ ವಿದಾಯ ಹೇಳಿದೆ. ಲಿಯಾಮ್ ಲಿವಿಂಗ್‌ಸ್ಟೋನ್ (49*ರನ್, 22 ಎಸೆತ, 2 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು. ಈ ಜಯದೊಂದಿಗೆ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, ಸನ್‌ರೈಸರ್ಸ್ 8ನೇ ಸ್ಥಾನದಲ್ಲಿ ನಿರ್ಗಮಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಔಪಚಾರಿಕವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ತಂಡ ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ (26ಕ್ಕೆ 3) ಮತ್ತು ವೇಗಿ ನಾಥನ್ ಎಲ್ಲಿಸ್ (40ಕ್ಕೆ 3) ಬಿಗಿ ಬೌಲಿಂಗ್ ದಾಳಿಗೆ ನಲುಗಿ 8 ವಿಕೆಟ್‌ಗೆ 157 ರನ್‌ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಪಂಜಾಬ್ ತಂಡ 15.1 ಓವರ್‌ಗಳಲ್ಲೇ 5 ವಿಕೆಟ್‌ಗೆ 160 ರನ್ ಪೇರಿಸಿ ಜಯಿಸಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಆವೃತ್ತಿಯಲ್ಲಿ ಸಾವಿರ ಸಿಕ್ಸರ್ ಸಿಡಿಯಿತು. ಲಿವಿಂಗ್‌ಸ್ಟೋನ್ ಟೂರ್ನಿಯ 1000ನೇ ಸಿಕ್ಸರ್ ಬಾರಿಸಿದರು.
ಧವನ್, ಲಿವಿಂಗ್‌ಸ್ಟೋನ್ ಚೇಸಿಂಗ್
ಜಾನಿ ಬೇರ್‌ಸ್ಟೋ (23) ಮತ್ತು ಶಿಖರ್ ಧವನ್ (39) ಪಂಜಾಬ್‌ಗೆ ಬಿರುಸಿನ ಆರಂಭ ಒದಗಿಸಿದರು. ಬಳಿಕ ಶಾರುಖ್ ಖಾನ್ (19) ಮತ್ತು ನಾಯಕ ಮಯಾಂಕ್ ಅಗರ್ವಾಲ್ (1) ವಿಕೆಟ್ ಕಬಳಿಸುವ ಮೂಲಕ ಸನ್‌ರೈಸರ್ಸ್ ತಿರುಗೇಟು ನೀಡಲು ಪ್ರಯತ್ನಿಸಿತು. ಆಗ ಕಣಕ್ಕಿಳಿದ ಲಿವಿಂಗ್‌ಸ್ಟೋನ್ ಬಿರುಸಿನ ಬ್ಯಾಟಿಂಗ್ ನಿರ್ವಹಣೆಯ ಮೂಲಕ ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ ಪಂಜಾಬ್‌ಗೆ ಗೆಲುವು ತಂದುಕೊಟ್ಟರು. ರೊಮಾರಿಯೊ ಶೆರ್ಡ್ ಎಸೆದ ಇನಿಂಗ್ಸ್‌ನ 15ನೇ ಓವರ್‌ನಲ್ಲಿ 23 ರನ್ ಕಸಿಯುವ ಮೂಲಕ ಲಿವಿಂಗ್‌ಸ್ಟೋನ್ ಗೆಲುವು ಸುಲಭಗೊಳಿಸಿದರು.
ಹರ್‌ಪ್ರೀತ್ ಆಘಾತ
ಪ್ರಿಯಂ ಗಾರ್ಗ್ (4) ವಿಕೆಟ್ ಕಬಳಿಸುವ ಮೂಲಕ ರಬಾಡ ಸನ್‌ರೈಸರ್ಸ್‌ಗೆ ಮೊದಲ ಆಘಾತ ನೀಡಿದ್ದರು. ಬಳಿಕ ರಾಹುಲ್ ತ್ರಿಪಾಠಿ (20) ಮತ್ತು ಏಡನ್ ಮಾರ್ಕ್ರಮ್ (21) ಹರ್‌ಪ್ರೀತ್ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ನಿಕೋಲಸ್ ಪೂರನ್ (5) ಮತ್ತೊಮ್ಮೆ ವೈಲ್ಯ ಕಂಡರು. ಆರಂಭಿಕ ಅಭಿಷೇಕ್ ಶರ್ಮ (43 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಉಪಯುಕ್ತ ಕೊಡುಗೆಯೊಂದಿಗೆ ಸನ್‌ರೈಸರ್ಸ್ ಮೊತ್ತ ಏರಿಸಲು ನೆರವಾದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (25) ಮತ್ತು ರೊಮಾರಿಯೊ ಶೆರ್ಡ್ (26*) ಸನ್‌ರೈಸರ್ಸ್ ಮೊತ್ತ ಏರಿಸಲು ನೆರವಾದರು. ಇವರಿಬ್ಬರು 6ನೇ ವಿಕೆಟ್‌ಗೆ 29 ಎಸೆತಗಳಲ್ಲಿ 58 ರನ್ ಸೇರಿಸಿದರು.
ಸನ್‌ಗೆ ಭುವನೇಶ್ವರ್ ನಾಯಕ
ಪತ್ನಿ 2ನೇ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಕೇನ್ ವಿಲಿಯಮ್ಸನ್ ತವರಿಗೆ ಮರಳಿದ ಕಾರಣ ಸನ್‌ರೈಸರ್ಸ್ ತಂಡವನ್ನು ಅಂತಿಮ ಲೀಗ್ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಿದರು. ವಿಲಿಯಮ್ಸನ್ ಸ್ಥಾನವನ್ನು ರೊಮಾರಿಯೊ ಶೆರ್ಡ್ ತುಂಬಿದರು. ಕನ್ನಡಿಗ ಜೆ. ಸುಚಿತ್ ಕೂಡ 11ರ ಬಳಗಕ್ಕೆ ಮರಳಿದರು. ಪಂಜಾಬ್ ಪರ ಪ್ರೇರಕ್ ಮಂಕಡ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.