More

    ಆರ್‌ಸಿಬಿಗೆ ಪ್ಲೇಆಫ್​ ಲಕ್; ಡೆಲ್ಲಿ ತಂಡವನ್ನು ಹೊರದಬ್ಬಿದ ಮುಂಬೈ ಇಂಡಿಯನ್ಸ್

    ಮುಂಬೈ: ಸಂಘಟಿತ ನಿರ್ವಹಣೆ ತೋರಿದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-15ರಲ್ಲಿ ಪ್ಲೇಆಫ್​ ಲೆಕ್ಕಾಚಾರದ ದೃಷ್ಟಿಯಿಂದ ಮಹತ್ವದ್ದಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಪರಾಭವಗೊಳಿಸಿ ಟೂರ್ನಿಗೆ ಗೆಲುವಿನ ವಿದಾಯ ಹಾಡಿತು. ಈ ಲಿತಾಂಶದಿಂದ ಭರ್ಜರಿ ಲಾಭ ಪಡೆದ ಆರ್‌ಸಿಬಿ ತಂಡ 4ನೇ ಸ್ಥಾನಿಯಾಗಿ ಪ್ಲೇಆಫ್​ ಹಂತಕ್ಕೇರಿದರೆ, ಡೆಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 5 ಬಾರಿಯ ಚಾಂಪಿಯನ್ ಮುಂಬೈ ತಂಡ ಗೆಲುವಿನ ನಡುವೆಯೂ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿಯಿತು.

    ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ವೇಗಿ ಜಸ್‌ಪ್ರೀತ್ ಬುಮ್ರಾ (25ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಡುವೆಯೂ 7 ವಿಕೆಟ್‌ಗೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್ ಗಳಿಸಿ ಡೆಲ್ಲಿ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು.

    ಕಿಶನ್-ಬ್ರೆವಿಸ್ ಚೇಸಿಂಗ್
    ನಾಯಕ ರೋಹಿತ್ ಶರ್ಮ (2) ಮತ್ತೊಮ್ಮೆ ಬೇಗನೆ ನಿರ್ಗಮಿಸಿದರು. ಆಗ ಇಶಾನ್ ಕಿಶನ್ (48 ರನ್, 35 ಎಸೆತ, 3 ಬೌಂಡರಿ, 4 ಸಿಕ್ಸರ್) ಮತ್ತು ಡಿವಾಲ್ಡ್ ಬ್ರೆವಿಸ್ (37 ರನ್, 33 ಎಸೆತ, 1 ಬೌಂಡರಿ, 3 ಸಿಕ್ಸರ್) ಮುಂಬೈ ಚೇಸಿಂಗ್‌ಗೆ ಬಲ ತುಂಬಿದರು. ಕೊನೇ 33 ಎಸೆತಗಳಲ್ಲಿ 65 ರನ್ ಬೇಕಾಗಿದ್ದಾಗ ಜತೆಗೂಡಿದ ತಿಲಕ್ ವರ್ಮ (21) ಮತ್ತು ಟಿಮ್ ಡೇವಿಡ್ (34 ರನ್, 11 ಎಸೆತ, 2 ಬೌಂಡರಿ, 4 ಸಿಕ್ಸರ್) 20 ಎಸೆತಗಳಲ್ಲಿ 50 ರನ್ ಕಸಿದರು. ಇದರಿಂದ ಮುಂಬೈ ಜಯದ ಹಾದಿ ಸುಗಮಗೊಂಡಿತು.

    ಪಂತ್-ಪೊವೆಲ್ ಆಸರೆ
    ಡೆಲ್ಲಿ ತಂಡ 50 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜತೆಯಾದ ನಾಯಕ ರಿಷಭ್ ಪಂತ್ (39ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ರೊವ್ಮನ್ ಪೊವೆಲ್ (43 ರನ್, 34 ಎಸೆತ, 1 ಬೌಂಡರಿ, 4 ಸಿಕ್ಸರ್) ಜೋಡಿ 44 ಎಸೆತಗಳಲ್ಲಿ 75 ರನ್ ಸೇರಿಸುವ ಮೂಲಕ ಚೇತರಿಕೆ ಒದಗಿಸಿತು. ಇನಿಂಗ್ಸ್‌ನ 16ನೇ ಓವರ್‌ನಲ್ಲಿ ರಮಣ್‌ದೀಪ್ ಸಿಂಗ್ ಈ ಜೋಡಿಯನ್ನು ಬೇರ್ಪಡಿಸಿದರು. ಸ್ಲಾಗ್ ಓವರ್‌ಗಳಲ್ಲಿ ಅಕ್ಷರ್ ಪಟೇಲ್ (19*) ಸಿಡಿದರು. ಕೊನೇ 5 ಓವರ್‌ಗಳಲ್ಲಿ 53 ರನ್ ಸಿಡಿಸುವ ಮೂಲಕ ಡೆಲ್ಲಿ 160ರ ಸನಿಹ ತಲುಪಿತು.

    ಪವರ್‌ಪ್ಲೇನಲ್ಲಿ ಬುಮ್ರಾ ಶಾಕ್
    ಬಿರುಸಿನ ಆರಂಭದ ನಿರೀಕ್ಷೆಯಲ್ಲಿದ್ದ ಡೆಲ್ಲಿಗೆ ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಡೇನಿಯಲ್ ಸ್ಯಾಮ್ಸ್ ಆಘಾತ ನೀಡಿದರು. ಡೇವಿಡ್ ವಾರ್ನರ್ (5) ಥರ್ಡ್‌ಮ್ಯಾನ್‌ನಲ್ಲಿದ್ದ ಜಸ್‌ಪ್ರೀತ್ ಬುಮ್ರಾಗೆ ಕ್ಯಾಚ್ ನೀಡಿ ಔಟಾದರು. ಅದರ ಬೆನ್ನಲ್ಲೇ ದಾಳಿಗಿಳಿದ ಬುಮ್ರಾ ಮಿಚೆಲ್ ಮಾರ್ಷ್ (0) ಮತ್ತು ಪೃಥ್ವಿ ಷಾ (24) ವಿಕೆಟ್‌ಗಳನ್ನು 6 ಎಸೆತಗಳ ಅಂತರದಲ್ಲಿ ಕಬಳಿಸಿದರು. ಇದರಿಂದ ಡೆಲ್ಲಿ ಪವರ್‌ಪ್ಲೇನಲ್ಲಿ 3 ವಿಕೆಟ್‌ಗೆ 37 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ರ್ಸ್ರಾಜ್ ಖಾನ್ (10) ಕೂಡ ನಿರಾಸೆ ಮೂಡಿಸಿದರು.

    ಮುಂಬೈಗೆ ಆರ್‌ಸಿಬಿ ಬೆಂಬಲ!
    ಮುಂಬೈ ಗೆದ್ದರೆ ಮಾತ್ರ ಪ್ಲೇಆ್ಗೇರುವ ಅವಕಾಶ ಹೊಂದಿದ್ದ ಆರ್‌ಸಿಬಿ ತಂಡ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಅದಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿತು. ಆರ್‌ಸಿಬಿ ತಂಡ ಸಾಮಾಜಿಕ ಜಾಲತಾಲಗಳಲ್ಲಿ ತನ್ನ ಲಾಂಛನದ ಬಣ್ಣವನ್ನು ಮುಂಬೈ ತಂಡದ ನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡಿದ್ದರೆ, ಡೆಲ್ಲಿ ವಿರುದ್ಧದ ಪಂದ್ಯವನ್ನು ಜತೆ ವೀಕ್ಷಿಸಿದ ಆರ್‌ಸಿಬಿ ಆಟಗಾರರು, ಮುಂಬೈ ಮೇಲುಗೈ ಸಾಧಿಸಿದಾಗ ಸಂಭ್ರಮಿಸಿದರು. ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಹಿಂದೆ ಮುಂಬೈ ಪರ ಆಡಿದ್ದ ಪಂದ್ಯಗಳ ಚಿತ್ರ ಪೋಸ್ಟ್ ಮಾಡಿ ಬೆಂಬಲ ಸೂಚಿಸಿದರು. ಮುಂಬೈ ಗೆಲುವಿನ ಬಳಿಕ ಆರ್‌ಸಿಬಿ ತಂಡದ ಆಟಗಾರರು, ಅಭಿಮಾನಿಗಳು ಮುಂಬೈಗೆ ಧನ್ಯವಾದವನ್ನೂ ಸಲ್ಲಿಸಿದರು.

    ಸಚಿನ್ ಪುತ್ರ ಕಣಕ್ಕಿಳಿಯಲೇ ಇಲ್ಲ!
    ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ಅಭಿಮಾನಿಗಳ ಕನಸು ಮುಂಬೈ ತಂಡದ ಕೊನೇ ಲೀಗ್ ಪಂದ್ಯದಲ್ಲೂ ನನಸಾಗಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಕೆಲ ಅಭಿಮಾನಿಗಳು, ‘ಅರ್ಜುನ್ ಅವರನ್ನು ಹೊಂದಲು ನಿಮ್ಮದು ಅರ್ಹ ತಂಡವಲ್ಲ. ಅವರನ್ನು ತಂಡದಿಂದ ರಿಲೀಸ್ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೇ ಲೀಗ್‌ಗೆ 2 ಬದಲಾವಣೆ ಮಾಡಿದ ಮುಂಬೈ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಸಂಜಯ್ ಯಾದವ್ ಬದಲಿಗೆ ಡಿವಾಲ್ಡ್ ಬ್ರೆವಿಸ್ ಮತ್ತು ಹೃತಿಕ್ ಶೋಕಿನ್‌ರನ್ನು ಮರಳಿ ಕಣಕ್ಕಿಳಿಸಿತು. ಡೆಲ್ಲಿ ಪರ ಪೃಥ್ವಿ ಷಾ ಜ್ವರದಿಂದ ಚೇತರಿಸಿ ಮತ್ತೆ ಆಡಿದರೆ, ಲಲಿತ್ ಯಾದವ್ ಹೊರಗುಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts