

Ravichandran Ashwin : ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಟಿ20 ಲೀಗ್-2026 ಹರಾಜಿನಲ್ಲಿ ಭಾರಿ ಅವಮಾನ ಎದುರಿಸಿದ್ದಾರೆ. 1.06 ಕೋಟಿ ರೂಪಾಯಿ ಮೂಲ ಬೆಲೆಗೆ ಹರಾಜಿನ ಮೊದಲ ಸುತ್ತಿಗೆ ಪ್ರವೇಶಿಸಿದ ಅಶ್ವಿನ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿವೃತ್ತರಾದ ಅಶ್ವಿನ್, ವಿದೇಶಿ ಲೀಗ್‌ಗಳಲ್ಲಿ ಆಡಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ILT-20 ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಈ ಹಿರಿಯ ಸ್ಪಿನ್ನರ್ ಅನ್ನು ತೆಗೆದುಕೊಳ್ಳಲು ಯಾವುದೇ ಫ್ರಾಂಚೈಸಿ ಮುಂದೆ ಬಾರದಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸದ್ಯ ಅಶ್ವಿನ್ ಅವರು ಮಾರಾಟವಾಗದೆ ಉಳಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಅಶ್ವಿನ್ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಐದು ಫ್ರಾಂಚೈಸಿಗಳ ಪರ 221 ಪಂದ್ಯಗಳನ್ನು ಆಡಿರುವ ಅಶ್ವಿನ್ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2010 ಮತ್ತು 2012ರ ಸೀಸನ್ಗಳಲ್ಲಿ ಚಾಂಪಿಯನ್‌ಶಿಪ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಒಟ್ಟಾರೆಯಾಗಿ, 333 ಟಿ20 ಪಂದ್ಯಗಳಲ್ಲಿ 317 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಸೀಸನ್ನಲ್ಲಿ ಅಶ್ವಿನ್ ಅವರು ಸಿಎಸ್‌ಕೆ ಪರ ಆಡಿದ್ದರು. ಸಿಎಸ್‌ಕೆ ಅವರನ್ನು 9.75 ಕೋಟಿ ರೂ.ಗಳ ಭಾರಿ ಬೆಲೆಗೆ ಖರೀದಿಸಿತು.
ಐಎಲ್‌ಟಿ-20 ಹರಾಜಿನಲ್ಲಿ ಇಂತಹ ದಿಗ್ಗಜ ಆಟಗಾರ ಮಾರಾಟವಾಗದೆ ಉಳಿದಿರುವುದು ಆಶ್ಚರ್ಯಕರವಾಗಿದೆ. ಆದಾಗ್ಯೂ, ದಂತಕಥೆಯ ಭಾರತೀಯ ಸ್ಪಿನ್ನರ್ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲು ಅನುಮತಿ ಪಡೆದಿದ್ದಾರೆ. ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನ 15ನೇ ಸೀಸನ್ನಲ್ಲಿ ಸಿಡ್ನಿ ಥಂಡರ್ಸ್ ಪರ ಆಡಲು ಅಶ್ವಿನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಬಿಬಿಎಲ್‌ನಲ್ಲಿ ಸಿಡ್ನಿ ಥಂಡರ್ಸ್ ಅನ್ನು ಪ್ರತಿನಿಧಿಸುವ ಮೊದಲ ಭಾರತೀಯ ಪುರುಷ ಕ್ರಿಕೆಟಿಗ ಅಶ್ವಿನ್ ಆಗಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ (ಬಾರ್ಡರ್ ಗವಾಸ್ಕರ್ ಟ್ರೋಫಿ)ದ ವೇಳೆ ಅಶ್ವಿನ್ ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಗೊತ್ತೇ ಇದೆ. (ಏಜೆನ್ಸೀಸ್)