ಅದೇನಾದ್ರೂ ಸಂಭವಿಸಿದ್ರೆ... ಟೀಮ್​ ಇಂಡಿಯಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಶಾಹಿದ್​ ಅಫ್ರಿದಿ! Shahid Afridi

Shahid Afridi
Published on

Shahid Afridi : ಇತ್ತೀಚೆಗಷ್ಟೇ ಮುಕ್ತಾಯವಾದ ಚಾಂಪಿಯಯ್ಸ್​ ಟ್ರೋಫಿಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಟ್ರೋಫಿ ಎತ್ತಿಹಿಡಿದ ಟೀಮ್​ ಇಂಡಿಯಾವನ್ನು ಪಾಕಿಸ್ತಾನದ ದಿಗ್ಗಜ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಶ್ಲಾಘಿಸಿದ್ದಾರೆ.

ಚಾಂಪಿಯನ್ಸ್​ ಟ್ರೋಫಿ ಆಡಿದ ಅದೇ ತಂಡದೊಂದಿಗೆ ಭಾರತವು ವಿಶ್ವ ಇಲೆವೆನ್ ವಿರುದ್ಧವೂ ಸುಲಭವಾಗಿ ಗೆಲ್ಲುತ್ತದೆ ಎಂದು ಅಫ್ರಿದಿ ಭವಿಷ್ಯ ನುಡಿದರು. ಟೀಮ್​ ಇಂಡಿಯಾ ಆಟಗಾರರು ಚಾಂಪಿಯನ್ ಆಗಲು ಶೇ. 100ರಷ್ಟು ಅರ್ಹರು ಎಂದು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಫ್ರಿದಿ ಮನಸಾರೆ ಹೊಗಳಿದರು.

ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಆಯ್ಕೆದಾರರು ಸರಿಯಾದ ತಂಡವನ್ನು ಆಯ್ಕೆ ಮಾಡಿದ್ದಾರೆ. ದುಬೈನಲ್ಲಿನ ಪರಿಸ್ಥಿತಿಯನ್ನು ಮೊದಲೇ ಊಹಿಸಿ ಸ್ಪಿನ್ ಬೌಲರ್​ಗಳೊಂದಿಗೆ ಟೂರ್ನಿ ಪ್ರವೇಶಿಸಿದರು. ಅಲ್ಲದೆ, ಒಂದೇ ಕಡೆ ಆಡಿದ್ದು ಕೂಡ ಭಾರತಕ್ಕೆ ವರದಾನವಾಯಿತು. ಟ್ರೋಫಿಯ ಗೆಲುವಿನಲ್ಲಿ ಆಯ್ಕೆದಾರರ ಪಾತ್ರವನ್ನು ಮರೆಯುವಂತಿಲ್ಲ. ದುಬೈನಲ್ಲಿ ಸ್ಪಿನ್ನರ್‌ಗಳ ಪಾತ್ರ ಬಹಳ ಮುಖ್ಯವಾಗಿತ್ತು. ದುಬೈ ಪಿಚ್​ನಲ್ಲಿ ಆಡಿದ ಅನುಭವ ನನಗಿರುವುದರಿಂದ ಸ್ಪಿನ್ನರ್‌ಗಳ ಪಾತ್ರದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಸ್ಪಿನ್ನರ್‌ಗಳು ಮಾತ್ರವಲ್ಲ, ಇಡೀ ಭಾರತ ತಂಡ ಬಲಿಷ್ಠವಾಗಿದೆ. ಇದೇ ತಂಡದೊಂದಿಗೆ, ವಿಶ್ವದ ಯಾವುದೇ ತಂಡವನ್ನು ಸೋಲಿಸಬಹುದು. ಒಂದು ವೇಳೆ ವಿಶ್ವ ಇಲೆವೆನ್ ತಂಡದೊಂದಿಗೆ ಆಡಿದರೆ ಭಾರತ ಸುಲಭವಾಗಿ ಗೆಲ್ಲುತ್ತದೆ ಎಂದು ಅಫ್ರಿದಿ ಹೇಳಿದರು.

ತಮ್ಮ ಅತ್ಯುತ್ತಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಲ್ಲದಿದ್ದರೂ ಭಾರತ ಈ ಪಂದ್ಯಾವಳಿಯಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಏಕದಿನ ಸ್ವರೂಪದಲ್ಲಿ ಉತ್ತಮ ದಾಖಲೆ ಹೊಂದಿರುವ ಮೊಹಮ್ಮದ್ ಸಿರಾಜ್ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡದೇ ಭಾರತೀಯ ಆಯ್ಕೆದಾರರು ದಿಟ್ಟ ನಿರ್ಧಾರ ತೆಗೆದುಕೊಂಡರು. ನಾಲ್ಕು ಸ್ಪಿನ್ನರ್‌ಗಳೊಂದಿಗೆ ಆಡುವುದು ಟೀಮ್ ಇಂಡಿಯಾಕ್ಕೆ ಲಾಭವಾಗಿದೆ. ಪಾಕಿಸ್ತಾನವು ಕೇವಲ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ (ಅಬ್ರಾರ್ ಅಹ್ಮದ್) ನೊಂದಿಗೆ ಟೂರ್ನಿಗೆ ಪ್ರವೇಶಿಸುವ ಮೂಲಕ ದೊಡ್ಡ ತಪ್ಪು ಮಾಡಿತು ಎಂದು ಅಫ್ರಿದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂದಹಾಗೆ ಪಾಕಿಸ್ತಾನ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ಅಜೇಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯಾವಳಿಯಲ್ಲಿ, ಭಾರತವು ಗ್ರೂಪ್​ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮತ್ತು ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಮತ್ತೊಂದೆಡೆ, ಹಾಲಿ ಚಾಂಪಿಯನ್ ಪಾಕಿಸ್ತಾನವು ಒಂದೇ ಒಂದು ಪಂದ್ಯವನ್ನು ಗೆಲ್ಲದೇ ಗ್ರೂಪ್​ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿತು.

ಪಾಕಿಸ್ತಾನವು ತವರು ನೆಲದಲ್ಲಿ ಆಡುವ ಲಾಭವನ್ನು ಪಡೆಯಲು ಸಾಧ್ಯವಾಗದೆ, ಗ್ರೂಪ್​ ಹಂತದ ಮೂರು ಪಂದ್ಯಗಳಲ್ಲಿ ಎರಡನ್ನು (ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ) ಸೋತಿತು. ಬಾಂಗ್ಲಾದೇಶದ ವಿರುದ್ಧದ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಯಿತು. ಹಾಲಿ ಚಾಂಪಿಯನ್ ಆಗಿ ಟೂರ್ನಮೆಂಟ್ ಪ್ರವೇಶಿಸಿ ತವರು ನೆಲದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗಲಿಲ್ಲ. ಇದರಿಂದ ಪಾಕ್​​ ತಂಡವೂ ತನ್ನದೇಯಾದ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ.

ಆ ದೇಶದ ಮಾಜಿ ಆಟಗಾರರು ಪಾಕಿಸ್ತಾನ ತಂಡದ ಮೇಲೆ ಕೆಸರು ಎರಚುತ್ತಿದ್ದಾರೆ. ತಂಡವನ್ನು ಆಯ್ಕೆ ಮಾಡಿದ ಆಯ್ಕೆದಾರರನ್ನು ಟೀಕಿಸುತ್ತಿದ್ದಾರೆ. ಪಾಕಿಸ್ತಾನ ಸೋತಿದ್ದಕ್ಕಿಂತ ತಮ್ಮ ದೇಶ ಆಯೋಜಿಸಿದ್ದ ಪಂದ್ಯಾವಳಿಯನ್ನು ಭಾರತ ಗೆದ್ದಿದ್ದಕ್ಕೆ ಹೆಚ್ಚು ಅಸಮಾಧಾನಗೊಂಡಿದ್ದಾರೆ. ಅವರು ಭಾರತೀಯ ತಂಡವನ್ನು ಹೊರಗೆ ಹೊಗಳುವಂತೆ ನಟಿಸಿದರೂ, ಅವರ ಒಳಗೆ ಮಾತ್ರ ತುಂಬಾ ಬೇಸರ ಇರುವುದಂತೂ ಸತ್ಯ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net