

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಜಯ ಸಾಧಿಸಿದಂತಹ ರೋಚಕ ಕ್ಷಣದ ಹ್ಯಾಂಗೋವರ್ನಿಂದ ಬರಲು ಈವರೆಗೂ ಆಗುತ್ತಿಲ್ಲ. ಅಷ್ಟೊಂದು ಕುತೂಹಲಭರಿತವಾಗಿತ್ತು ಕಳೆದ ಭಾನುವಾರ (ಅ.23) ಮೆಲ್ಬೋರ್ನ್ನಲ್ಲಿ ನಡೆದ ಸೂಪರ್ 12 ಹಂತದ ಪಂದ್ಯ. ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡವನ್ನು ಗೆಲುವಿನ ದಡ ಸೇರಿಸಿದ್ದ ವಿರಾಟ್ ಕೊಹ್ಲಿ ಒಂದೆಡೆಯಾದರೆ, ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿದ ರವಿಚಂದ್ರನ್ ಅಶ್ವಿನ್ ಸಹ ಕ್ರೀಡಾಭಿಮಾನಿಗಳ ಗಮನ ಸೆಳೆದರು.
ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾ ಗೆಲ್ಲಲ್ಲು 16 ರನ್ ಬೇಕಾಗಿದ್ದಾಗ ಬೌಲಿಂಗ್ಗೆ ಇಳಿದ ಮೊಹಮ್ಮದ್ ನವಾಜ್, ಮೊದಲ ಎಸೆತದಲ್ಲೇ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದ ಹಾರ್ದಿಕ್ ಪಾಂಡ್ಯ (40) ವಿಕೆಟ್ ಪಡೆದು ಭಾರತಕ್ಕೆ ಶಾಕ್ ನೀಡಿದರು. ನಂತರ ಬಂದ ದಿನೇಶ್ ಕಾರ್ತಿಕ್ ಕೂಡ 19ನೇ ಓವರ್ನ 5ನೇ ಎಸೆತದಲ್ಲಿ ಔಟಾದರು. ಈ ವೇಳೆ ಪಂದ್ಯ ಗೆಲ್ಲಲು ಒಂದು ಎಸೆತಕ್ಕೆ 2 ರನ್ ಅವಶ್ಯಕತೆ ಇತ್ತು. ಈ ವೇಳೆ ಅಶ್ವಿನ್ ಕ್ರೀಸ್ಗೆ ಆಗಮಿಸಿದರು. ಅವರ ನವಾಜ್ ಎಸೆದ ಮೊದಲ ಎಸೆತವೇ ವೈಡ್ ಆಯಿತು. ಅಲ್ಲಿಗೆ ಪಂದ್ಯ ಟೈ ಆಯಿತು. ಬೇರೆ ಆಟಗಾರರಾಗಿದ್ದರೆ ಅದು ಕೊನೆಯ ಹಂತದಲ್ಲಿ ವೈಡ್ ಬಾಲನ್ನು ಸಹ ಹೊಡೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಅಶ್ವಿನ್ ವೈಡ್ ಬಾಲನ್ನು ಸೂಕ್ಷ್ಮವಾಗಿ ಗಮನಿಸಿ ತಂಡಕ್ಕೆ ಒಂದು ರನ್ ತಂದು ಕೊಟ್ಟರು. ಓವರ್ನ ಕೊನೆಯ ಎಸೆತದಲ್ಲಿ 1 ರನ್ ಅವಶ್ಯಕತೆ ಇತ್ತು. ಈ ವೇಳೆ ಕ್ಷೇತ್ರ ರಕ್ಷಕರೆಲ್ಲ ಮುಂದೆ ಬಂದು ರನ್ ಕದಿಯುವ ಯತ್ನಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ, ಅಶ್ವಿನ್ ಕ್ಷೇತ್ರ ರಕ್ಷಕರ ಮೇಲೆ ಚೆಂಡನ್ನು ಬಾರಿಸುವ ಮೂಲಕ ಚೆಂಡನ್ನು ಬೌಂಡರಿಗೆ ಅಟ್ಟಿದರು. ಈ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.
ಈ ಕ್ಷಣದ ಬಗ್ಗೆ ಬಿಸಿಸಿಐ.ಟಿವಿಯಲ್ಲಿ ಋಷಿಕೇಶ್ ಕಾಂತಿಕರ್ ಜೊತೆ ಮಾತನಾಡಿದ ಅಶ್ವಿನ್, ಒಂದು ವೇಳೆ 19ನೇ ಓವರ್ನ 5ನೇ ಎಸೆತ ವೈಡ್ ಆಗದೇ ನನ್ನ ಪ್ಯಾಡಿಗೆ ಬಡಿದಿದ್ದರೆ ನಾನು ಕ್ರಿಕೆಟ್ನಿಂದಲೇ ವಿದಾಯ ಹೇಳಬೇಕಾಗುತ್ತಿತ್ತು ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.
ಒಂದು ವೇಳೆ ನವಾಜ್ ಎಸೆದ ಚೆಂಡ್ ಸ್ಪಿನ್ ಆಗಿ ನನ್ನ ಪ್ಯಾಡಿಎ ಬಡಿದು ಔಟ್ ಆಗಿದ್ದರೆ, ನಾನು ಸೀದ ಡ್ರೆಸ್ಸಿಂಗ್ ರೂಮ್ಗೆ ಹೋಗಿ, ಟ್ವಿಟರ್ಗೆ ಲಾಗಿನ್ ಆಗಿ " ತುಂಬಾ ಧನ್ಯವಾದಗಳು, ನನ್ನ ಕ್ರಿಕೆಟ್ ವೃತ್ತಿಜೀವನ ಮತ್ತು ಪ್ರಯಾಣ ಅದ್ಭುತವಾಗಿದೆ ಮತ್ತು ಎಲ್ಲರಿಗೂ ಧನ್ಯವಾದಗಳು" ಎಂದು ಹೇಳಿ ನಿವೃತ್ತಿ ಘೋಷಿಸುತ್ತಿದ್ದೆ ಎಂದು ಅಶ್ವಿನ್ ನಗುತ್ತಾ ಹೇಳಿದರು.
ಭಾನುವಾರ (ಅ.23) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ 160ರನ್ಗಳ ಗುರಿ ಬೆನ್ನು ಹತ್ತಿದ ಭಾರತ, ಕೇವಲ 31 ರನ್ಗೆ ಪ್ರಮುಖ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನ ದವಡೆಗೆ ಸಿಲುಕಿತು. ಆದರೆ, ಈ ಹಂತದಲ್ಲಿ ವಿರಾಟ್ ಕೊಹ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ನೂರು ರನ್ಗಳ ಜೊತೆಯಾಟ ಮೂಲಕ ಪಂದ್ಯವನ್ನು ಮತ್ತೆ ಭಾರತ ಕಡೆಗೆ ತಿರುಗಿಸಿದರು.
ವಿರಾಟ್ ಕೊಹ್ಲಿ (53 ಎಸೆತಗಳಲ್ಲಿ ಅಜೇಯ 82) ಮತ್ತು ಹಾರ್ದಿಕ್ ಪಾಂಡ್ಯ (40) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಅದ್ಭುತ ಗೆಲುವು ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. (ಏಜೆನ್ಸೀಸ್)