

ಪಟ್ನಾ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ಈಗಾಗಲೇ ನಾನಾ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟದಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಆರ್ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ (Tejashwi Yadav) ಮಾತನಾಡಿದ್ದು, ಭಾರತ ಪಾಕಿಸ್ತಾನದ ನೆಲದಲ್ಲಿ ಆಡಬೇಕೆಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ತೇಜಸ್ವಿ ಯಾದವ್ (Tejashwi Yadav), 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಭಾರತ ಪಾಕಿಸ್ತಾನಕ್ಕೆ ಹೋಗಬೇಕು. ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸುವುದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರೂ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದಿಲ್ಲವೇ. ಅದೇ ರೀತಿ ನಮ್ಮವರು ಕೂಡ ಅಲ್ಲಿಗೆ ಹೋಗಿ ಚಾಂಪಿಯನ್ಸ್ ಟ್ರೋಫಿ ಆಡಬೇಕು. ಈ ಎಲ್ಲಾ ಗೊಂದಲಗಳಿಂದಾಗಿ ಇನ್ನೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟವಾಗಿಲ್ಲ.
ಭಾರತ ತಂಡ ಯಾಕೆ ಪಾಕಿಸ್ತಾನಕ್ಕೆ ಹೋಗಬಾರದು? ಅದಕ್ಕೆ ಸಮಸ್ಯೆಯೇನು? ಒಂದು ವೇಳೆ ಪ್ರಧಾನ ಮಂತ್ರಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ಸವಿದು ಬರಬಹುದು ಎಂದರೆ ಟೀಮ್ ಇಂಡಿಯಾ ಕ್ರಿಕೆಟ್ ಆಡುವುದಕ್ಕೆ ಆ ದೇಶಕ್ಕೆ ಹೋಗಿ ಬರಲು ಸಮಸ್ಯೆಯೇನು? ನಾನು ನನ್ನ ಹೇಳಿಕೆಗೆ ಬದ್ದನಾಗಿರುತ್ತೇನೆ. ಭಾರತ ಪಾಕಿಸ್ತಾನದ ನೆಲದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಬೇಕೆಂದು ಎಂದು ತೇಜಸ್ವಿ ಯಾದವ್ (Tejashvi Yadav) ಹೇಳಿದ್ದಾರೆ.
ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳು ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. 2008ರಲ್ಲಿ ಭಾರತ ಕಡೆಯದಾಗಿ ಪಾಕ್ ನೆಲದಲ್ಲಿ ಏಷ್ಯಾಕಪ್ ಆಡಿತ್ತು. ಆ ಬಳಿಕ ಉಭಯ ದೇಶಗಳು ಐಸಿಸಿ (ICC) ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಡೆಸುವ ಟೂರ್ನಿಗಳಲ್ಲಿ ಮುಖಾಮುಖಿಯಾಗುತ್ತಿವೆ.