ಮತ್ತೆ ಕೋಲ್ಕತ ನೈಟ್​ರೈಡರ್ಸ್​ ನಾಯಕರಾಗಲು ಸಿದ್ಧ ಎಂದ ದಿನೇಶ್​ ಕಾರ್ತಿಕ್​

dinesh-karthik-kkr web
Published on

ಚೆನ್ನೈ: ಐಪಿಎಲ್​ನಲ್ಲಿ ವಿವಿಧ ತಂಡಗಳ ಪರ ಆಡಿರುವ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ದಿನೇಶ್​ ಕಾರ್ತಿಕ್​​, ಕಳೆದ ವರ್ಷದವರೆಗೆ ಕೋಲ್ಕತ ನೈಟ್​ರೈಡರ್ಸ್​ ತಂಡದ ನಾಯಕರಾಗಿದ್ದರು. ಆದರೆ ಬಳಿಕ ತಂಡದ ನಿರ್ವಹಣೆ ಕುಸಿತ ಕಂಡಾಗ, ಬ್ಯಾಟಿಂಗ್​ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ ದಿನೇಶ್​ ಕಾರ್ತಿಕ್​ ನಾಯಕತ್ವ ತ್ಯಜಿಸಿದ್ದರು. ಇದರಿಂದ ಇಂಗ್ಲೆಂಡ್​ ನಾಯಕ ಇವೊಯಿನ್​ ಮಾರ್ಗನ್​ ಕೋಲ್ಕತ ನೈಟ್​ರೈಡರ್ಸ್​ ತಂಡದ ಸಾರಥ್ಯ ವಹಿಸಿದ್ದರು. ಈ ವರ್ಷವೂ ಮಾರ್ಗನ್​ ಕೆಕೆಆರ್​ ನಾಯಕರಾಗಿದ್ದರು. ಆದರೆ ಇದೀಗ ಯುಎಇಯಲ್ಲಿ ಪುನರಾರಂಭಗೊಳ್ಳಲಿರುವ ಐಪಿಎಲ್​ 14ನೇ ಆವೃತ್ತಿಯ 2ನೇ ಭಾಗದ ಪಂದ್ಯಗಳಿಗೆ ಮಾರ್ಗನ್​ ಸಹಿತ ಹಲವು ವಿದೇಶಿ ಆಟಗಾರರು ಗೈರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಿನೇಶ್​ ಕಾರ್ತಿಕ್​ ಮತ್ತೊಮ್ಮೆ ಕೋಲ್ಕತ ನೈಟ್​ರೈಡರ್ಸ್​ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.

ಭಾರತದಲ್ಲಿ ನಡೆದ ಈ ವರ್ಷದ ಐಪಿಎಲ್​ನಲ್ಲಿ ಕೆಕೆಆರ್​ ತಂಡ ಲೀಗ್​ ಹಂತದಲ್ಲಿ ಆಡಿದ ಮೊದಲ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಇದರಿಂದ ಕೆಕೆಆರ್​ ತಂಡ ಮುಂದಿನ ಹಂತಕ್ಕೇರಲು ಉಳಿದ 7 ಪಂದ್ಯಗಳಲ್ಲಿ ಹೆಚ್ಚಿನ ಗೆಲುವಿನ ಅನಿವಾರ್ಯತೆ ಇದೆ. ಈ ಸವಾಲನ್ನು ಎದುರಿಸಲು ಸಿದ್ಧರಾಗಿರುವ ತಮಿಳುನಾಡಿನ ಆಟಗಾರ ದಿನೇಶ್​ ಕಾರ್ತಿಕ್​​, ಒಂದು ವೇಳೆ ಇವೊಯಿನ್​ ಮಾರ್ಗನ್​ ಐಪಿಎಲ್​ 2ನೇ ಭಾಗಕ್ಕೆ ಆಗಮಿಸದಿದ್ದರೆ ಮತ್ತೊಮ್ಮೆ ಕೆಕೆಆರ್​ ತಂಡವನ್ನು ಮುನ್ನಡೆಸಲು ರೆಡಿಯಾಗಿದ್ದೇನೆ ಎಂದಿದ್ದಾರೆ.

ವಿದೇಶಿ ಆಟಗಾರರ ಅಲಭ್ಯತೆ ಬಗ್ಗೆ ಈಗಲೇ ಹೇಳಿಕೆ ನೀಡುವುದು ಸರಿಯಾಗದು. ಆದರೆ ಇವೊಯಿನ್​ ಮಾರ್ಗನ್​ ಮತ್ತು ಪ್ಯಾಟ್​ ಕಮ್ಮಿನ್ಸ್​ ನಮ್ಮ ತಂಡದ ಇಬ್ಬರು ಪ್ರಮುಖ ವಿದೇಶಿ ಆಟಗಾರರು. ಆದರೆ ಅವರಿಬ್ಬರು ಬಾರದಿದ್ದರೆ ನಾನು ತಂಡವನ್ನು ಮುನ್ನಡೆಸುವ ಸವಾಲಿಗೆ ಸಿದ್ಧವಾಗಬೇಕಾಗುತ್ತದೆ ಎಂದು ದಿನೇಶ್​ ಕಾರ್ತಿಕ್​​ ಹೇಳಿದ್ದಾರೆ. ಈ ವರ್ಷ ಮತ್ತು ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ಹಂಬಲವನ್ನೂ ಕಾರ್ತಿಕ್​​ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net