ಜಯ್ ಷಾ ಐಸಿಸಿಗೆ ಹೋದರೆ, ಬಿಸಿಸಿಐನಲ್ಲಿ ಅವರ ಸ್ಥಾನ ತುಂಬುವವರಾರು? ಇವರೇ ನೆಚ್ಚಿನ ಅಭ್ಯರ್ಥಿಗಳು...

web bcci1
Published on

ನವದೆಹಲಿ: ಐಸಿಸಿಯ ಮುಂದಿನ ಚೇರ್ಮನ್​ ಆಗುವ ನಿಟ್ಟಿನಲ್ಲಿ ಜಯ್​ ಷಾ ಹೆಸರು ಕಳೆದ ಕೆಲದಿನಗಳಿಂದ ಮುಂಚೂಣಿಯಲ್ಲಿದೆ. ಆದರೆ ಜಯ್​ ಷಾ ಐಸಿಸಿಗೆ ಹೋದರೆ ಬಿಸಿಸಿಐನಲ್ಲಿ ಅವರಿಂದ ತೆರವಾಗಲಿರುವ ಕಾರ್ಯದರ್ಶಿ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗದಂತಾಗಿದೆ.

ಸದ್ಯ ಬಿಸಿಸಿಐ ಅಧ್ಯಕ್ಷರ ಹುದ್ದೆ ರಬ್ಬರ್​ಸ್ಟಾಂಪ್​ನಂತಿದ್ದು, ಕಾರ್ಯದರ್ಶಿಯಾಗಿ ಜಯ್​ ಷಾ ಅವರೇ ಪ್ರಭಾವಿ ಆಡಳಿತ ನಡೆಸುತ್ತಿದ್ದರು. ಹೀಗಾಗಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಕೆಲವೇ ಸಂಭಾವ್ಯ ಅಭ್ಯರ್ಥಿಗಳು ಸದ್ಯಕ್ಕೆ ಕಾಣಿಸುತ್ತಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್​ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್​ ಶುಕ್ಲಾ ಸದ್ಯ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಆದರೆ ಕೂಲಿಂಗ್​&ಆ್​ಗೆ ಮುನ್ನ ಅವರೂ ಒಂದು ವರ್ಷದವರೆಗೆ ಮಾತ್ರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಮಹಾರಾಷ್ಟ್ರದ ಬಿಜೆಪಿ ನಾಯಕರಾಗಿರುವ ಆಶಿಷ್​ ಶೆಲಾರ್​ ಸದ್ಯ ಬಿಸಿಸಿಐ ಖಜಾಂಚಿಯಾಗಿದ್ದಾರೆ ಮತ್ತು ಮುಂಬೈ ಕ್ರಿಕೆಟ್​ ಸಂಸ್ಥೆಯ ಆಡಳಿತಾಧಿಕಾರಿಯಾಗಿಯೂ ಪ್ರಭಾವಿಯಾಗಿದ್ದಾರೆ. ಆದರೆ ಅವರು ಪೂರ್ಣಪ್ರಮಾಣದ ರಾಜಕಾರಣಿಯಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಹೆಚ್ಚಿನ ಸಮಯ ನೀಡಲು ಅವರು ಸಿದ್ಧರೇ ಎಂಬ ಪ್ರಶ್ನೆ ಏಳುತ್ತದೆ.

ಹಿಮಾಚಲ ಪ್ರದೇಶದ ಅರುಣ್​ ಧುಮಾಲ್​ ಹಾಲಿ ಐಪಿಎಲ್​ ಚೇರ್ಮನ್​ ಆಗಿದ್ದಾರೆ. ಈ ಹಿಂದೆ ಬಿಸಿಸಿಐ ಖಜಾಂಚಿಯಾಗಿದ್ದರು. ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಸಹೋದರರೂ ಆಗಿರುವ ಧುಮಾಲ್​, ಕಾರ್ಯದರ್ಶಿ ಹುದ್ದೆಗೆ ಸದ್ಯದ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ.

ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್​ ಸೈಕಿಯಾ, ದೆಹಲಿ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷ ರೋಹನ್​ ಜೇಟ್ಲಿ, ಬಂಗಾಳ ಕ್ರಿಕೆಟ್​ ಸಂಸ್ಥೆ ಮಾಜಿ ಅಧ್ಯಕ್ಷ ಅವಿಷೇಕ್​ ದಾಲ್ಮಿಯಾ, ಪಂಜಾಬ್​ನ ದಿಲ್​ಶೇರ್​ ಖನ್ನ, ಗೋವಾದ ವಿಪುಲ್​ ಪಡ್ಕೆ, ಛತ್ತೀಸ್​ಗಢದ ಪ್ರಭ್​ತೇಜ್​ ಭಾಟಿಯಾ ಇತರ ಅಚ್ಚರಿಯ ಅಭ್ಯರ್ಥಿಯಾಗಬಲ್ಲವರಾಗಿದ್ದಾರೆ.

ಜಯ್​ ಷಾ ಬಳಿಕ 4 ದಿನಗಳ ಕಾಲಾವಕಾಶ

ಜಯ್​ ಷಾಗೆ ಐಸಿಸಿ ಮಂಡಳಿಯ 16ರ ಪೈಕಿ 15 ಸದಸ್ಯರ ಬೆಂಬಲವಿದೆ. ಆದರೆ ಬಿಸಿಸಿಐ ಕಾರ್ಯದರ್ಶಿ ಆಗಿ ಇನ್ನೂ ಒಂದು ವರ್ಷದ ಅವಧಿ ಬಾಕಿ ಇರುವ ನಡುವೆಯೇ ಅವರು ಐಸಿಸಿಯತ್ತ ಹೋಗುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ. ಈ ಬಗ್ಗೆ ನಿರ್ಧರಿಸಲು ಅವರ ಬಳಿ ಇನ್ನು ಕೇವಲ 4 ದಿನಗಳ ಕಾಲಾವಕಾಶವಿದೆ. ಯಾಕೆಂದರೆ ಐಸಿಸಿ ಚೇರ್ಮನ್​ ಹುದ್ದೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್​ 27 ಕೊನೇ ದಿನವಾಗಿದೆ. ಡಿಸೆಂಬರ್​ 1ರಿಂದ ಐಸಿಸಿಯ ಹೊಸ ಚೇರ್ಮನ್​ ಅಧಿಕಾರಾವಧಿ ಶುರುವಾಗಲಿದೆ.

ಬಿಸಿಸಿಐ ಚೇರ್ಮನ್​ ಆಗಿ 2025ರ ಅಕ್ಟೋಬರ್​ವರೆಗೆ ಜಯ್​ ಷಾ ಅವಧಿ ಇದೆ. ಅಲ್ಲಿಗೆ ಅವರ ಸತತ 2 ವರ್ಷಗಳ ಅವಧಿಯೂ ಮುಗಿಯುವುದರಿಂದ 3 ವರ್ಷಗಳ ಕೂಲಿಂಗ್​&ಆ್​ಗೆ ತೆರಳಬೇಕಾಗುತ್ತದೆ. ಹೀಗಾಗಿ ಐಸಿಸಿ ಹುದ್ದೆಗೇರಲು ಅದು ಅವರಿಗೆ ಪಕ್ವ ಸಮಯವಾಗಿತ್ತು. ಆದರೆ ಹಾಲಿ ಚೇರ್ಮನ್​ ಗ್ರೇಗ್​ ಬಾರ್​ಕ್ಲೇ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿರುವುದರಿಂದ ಹೊಸ ಚೇರ್ಮನ್​ ಆಗಿ ಜಯ್​ ಷಾ ಈಗಲೇ ಅಧಿಕಾರ ಸ್ವೀಕರಿಸುವ ಸಂದಿಗ್ಧತೆಗೂ ಸಿಲುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net