ಆಸೀಸ್​ನಲ್ಲೂ ಭಾರತ ಹೀನಾಯವಾಗಿ ಸೋತರೆ ಗಂಭೀರ್​ ಟಿ20-ಏಕದಿನಕ್ಕೆ ಸೀಮಿತ; ಟೆಸ್ಟ್​ ತಂಡಕ್ಕೆ ಪ್ರತ್ಯೇಕ ಕೋಚ್​?

web gam
Published on

ನವದೆಹಲಿ: ತವರಿನಲ್ಲಿ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವೈಟ್​ವಾಷ್​ ಸೋಲು ಅನುಭವಿಸಿ ಮುಖಭಂಗ ಎದುರಿಸಿರುವ ಭಾರತ ತಂಡಕ್ಕೆ ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​-ಗಾವಸ್ಕರ್​ ಟ್ರೋಫಿ ಪ್ರತಿಷ್ಠೆಯ ಪ್ರಶ್ನೆ ಎನಿಸಿದೆ. ಒಂದು ವೇಳೆ ಆಸೀಸ್​ ನೆಲದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲೂ ಭಾರತ ತಂಡ ಹೀನಾಯವಾಗಿ ಸೋತರೆ, ಗೌತಮ್​ ಗಂಭೀರ್​ ಟೆಸ್ಟ್​ ತಂಡದ ಕೋಚ್​ ಹುದ್ದೆ ಕಳೆದುಕೊಳ್ಳಲಿದ್ದಾರೆ. ಆಗ ಬಿಸಿಸಿಐ ಟೆಸ್ಟ್​ ಮತ್ತು ಸೀಮಿತ ಓವರ್​ ತಂಡಗಳಿಗೆ ಪ್ರತ್ಯೇಕ ಕೋಚ್​ ನೇಮಿಸಲಿದೆ. ಗಂಭೀರ್​ ಏಕದಿನ ಮತ್ತು ಟಿ20 ತಂಡಗಳ ಕೋಚ್​ ಆಗಿ ಮಾತ್ರ ಮುಂದುವರಿದರೆ, ವಿವಿಎಸ್​ ಲಕ್ಷ್ಮಣ್​ಗೆ ಟೆಸ್ಟ್​ ತಂಡದ ಹೊಣೆ ನೀಡಲಾಗುವುದು ಎಂದು ವರದಿಯಾಗಿದೆ.

ಕಿವೀಸ್​ ವಿರುದ್ಧದ ಸೋಲಿನ ಹಿನ್ನೆಲೆಯಲ್ಲಿ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಶುಕ್ರವಾರ ನಡೆದ 6 ಗಂಟೆಗಳ ಸುದೀರ್ ಸಭೆಯಲ್ಲಿ ಗಂಭೀರ್​ ಜತೆಗೆ ನಾಯಕ ರೋಹಿತ್​ ಶರ್ಮ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಕೂಡ ಭಾಗವಹಿಸಿದ್ದರು. ಈ ವೇಳೆ ಕಿವೀಸ್​ ವಿರುದ್ಧದ ಸರಣಿಯ ಮುಂಬೈ ಟೆಸ್ಟ್​ಗೆ ಸಂಪೂರ್ಣ ಸ್ಪಿನ್​ ಸ್ನೇಹಿ ಪಿಚ್​ ಆಯ್ಕೆ ಮತ್ತು ವೇಗಿ ಜಸ್​ಪ್ರೀತ್​ ಬುಮ್ರಾಗೆ ವಿಶ್ರಾಂತಿ ನೀಡಿದ ನಿರ್ಧಾರ ಕುರಿತು ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತು. ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಕಾರ್ಯದರ್ಶಿ ಜಯ್​ ಷಾ, ಕೋಚ್​ ಆಗಿ ಗಂಭೀರ್​ ಕಾರ್ಯವಿಧಾನದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಗಂಭೀರ್​ 3 ತಿಂಗಳ ಹಿಂದಷ್ಟೇ ಕೋಚ್​ ಆಗಿ ನೇಮಕಗೊಂಡಿದ್ದು, 2027ರ ಏಕದಿನ ವಿಶ್ವಕಪ್​ವರೆಗೂ ಅವಧಿ ಹೊಂದಿದ್ದಾರೆ. ಆದರೆ ಆಸ್ಟ್ರೆಲಿಯಾ ನೆಲದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಟೆಸ್ಟ್​ ತಂಡದ ಕೋಚ್​ ಹುದ್ದೆಯಿಂದ ಬಿಸಿಸಿಐ ಅವರನ್ನು ಕೆಳಗಿಳಿಸಲಿದೆ. ಇದರಿಂದ ಭಾರತ ಮೊಟ್ಟಮೊದಲ ಬಾರಿಗೆ ಟೆಸ್ಟ್​ ಮತ್ತು ಸೀಮಿತ ಓವರ್​ಗಳಿಗೆ ಪ್ರತ್ಯೇಕ ಕೋಚ್​ ನೇಮಿಸಿದಂತೆ ಆಗಲಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೇರುವ ನಿಟ್ಟಿನಲ್ಲಿ ಭಾರತ 4-0 ಅಥವಾ 5&0ಯಿಂದ ಸರಣಿ ಗೆಲ್ಲಬೇಕಿದೆ. ಇನ್ನು ಇತರ ಪೂರಕ ಲಿತಾಂಶಗಳ ಆಧಾರದಲ್ಲಿ ಫೈನಲ್​ಗೇರುವ ಆಸೆ ಜೀವಂತ ಉಳಿಸಿಕೊಳ್ಳಲು ಭಾರತ ಸರಣಿಯಲ್ಲಿ ಕನಿಷ್ಠ 2 ಟೆಸ್ಟ್​ ಪಂದ್ಯಗಳನ್ನಾದರೂ ಗೆಲ್ಲಬೇಕಿದೆ.

ಟೆಸ್ಟ್​ ತಂಡದ ಕೋಚ್​ ಹುದ್ದೆಯಿಂದ ಬಿಡುಗಡೆಗೊಳಿಸಿದರೆ ಗಂಭೀರ್​ ಕೇವಲ ಟಿ20-ಏಕದಿನ ತಂಡಗಳ ಕೋಚ್​ ಆಗಿ ಮಾತ್ರ ಮುಂದುವರಿಯಲು ಒಪ್ಪುವರೇ ಎಂಬ ಪ್ರಶ್ನೆಯೂ ಎದ್ದಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್​ ಲಕ್ಷ್ಮಣ್​ ಸದ್ಯ ಭಾರತ ಟಿ20 ತಂಡದೊಂದಿಗೆ ದ. ಆಫ್ರಿಕಾ ಪ್ರವಾಸಕ್ಕೆ ಹಂಗಾಮಿ ಕೋಚ್​ ಆಗಿ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net