

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಗಂಭೀರ್ ಅವರು ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಸೀಸನ್-17ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ಈ ಬಾರಿ ಚಾಂಪಿಯನ್ ಪಟ್ಟವನ್ನು ಗಳಿಸಿತು.
ಕೆಕೆಆರ್ ಟ್ರೋಫಿ ಗೆಲ್ಲಲು ಮೆಂಟರ್ ಆಗಿ ಗಂಭೀರ್ ತೆಗೆದುಕೊಂಡ ಖಡಕ್ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಗಂಭೀರ್ ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಸಿಸಿಐ ಹಾಗೂ ಗಂಭೀರ್ ನಡುವೆ ಒಪ್ಪಂದ ನಡೆದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ವರದಿಯಾಗಿದೆ. ಜೂನ್ 2ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನೊಂದಿಗೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಇದಾದ ನಂತರ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.
ಆದರೆ, ಮುಖ್ಯ ಕೋಚ್ ಆಗಿ ಗಂಭೀರ್ ಆಗಮಿಸಿದರೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ತಂಡದಿಂದ ಗೇಟ್ಪಾಸ್ ಸಿಗಲಿದೆ ಎಂಬ ಚರ್ಚೆಯು ನಡೆಯುತ್ತಿವೆ. ಅಂದರೆ, ರೋಹಿತ್ ಮತ್ತು ಕೊಹ್ಲಿಯನ್ನು ಟಿ20 ತಂಡದಿಂದ ಕೈಬಿಡಲಾಗುತ್ತದೆ. ಕೇವಲ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಈ ಟಿ20 ವಿಶ್ವಕಪ್ ಕೊನೆಯ ಅವಕಾಶವಾಗಿದೆ. ಈ ಟಿ20 ವಿಶ್ವಕಪ್‌ನೊಂದಿಗೆ ಉಭಯ ಆಟಗಾರರ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನ ಕೊನೆಗೊಳ್ಳಲಿದೆ ಎಂದು ವರದಿಯಾಗಿದೆ. ಇದಾದ ಬಳಿಕ ಭಾರತ ಟಿ20 ತಂಡದ ಆಯ್ಕೆಗೆ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸುವುದಿಲ್ಲ ಎಂದು ತಿಳಿದುಬಂದಿದೆ.
ಅಂದಹಾಗೆ ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಆದರೆ ಮೊದಲು ಹೊಸ ಟಿ20 ತಂಡವನ್ನು ರಚಿಸಲು ಬಯಸಿದ್ದಾರೆ ಎಂಬ ವರದಿಗಳಿವೆ. ಆದರೆ, ಈ ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎಂಬ ಯಾವುದೇ ಸ್ಪಷ್ಟತೆ ಇಲ್ಲ. ರೋಹಿತ್ ಶರ್ಮ ನಿರ್ಗಮನದ ನಂತರ ಟಿ20 ತಂಡದ ನೂತನ ನಾಯಕ ಯಾರು ಎಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬರಲಿದೆ.
ಇನ್ನು ಗೌತಿ ಆಗಮನದಿಂದ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗುವುದಂತೂ ಖಚಿತ ಎಂಬ ಮಾತು ಕೇಳಿ ಬರುತ್ತಿದೆ. ಅದರಲ್ಲೂ ರೋಹಿತ್ ಶರ್ಮರ ನಾಯಕತ್ವ ಮತ್ತು ವೃತ್ತಿ ಜೀವನ ತೂಗುಗತ್ತಿಯಲ್ಲಿರಲಿದೆ. ಯಾವಾಗ ಬೇಕಾದರೂ ಅವರನ್ನು ಮೂಲೆಗುಂಪು ಮಾಡಬಹುದು. ಹೊಸ ಯುವ ತಂಡವನ್ನು ಕಟ್ಟಲು ಗಂಭೀರ್ ಯೋಚಿಸಿದ್ದು, ಹಿರಿಯ ಆಟಗಾರರನ್ನು ನಿರ್ಲಕ್ಷಿಸಿದರು ಅಚ್ಚರಿಪಡಬೇಕಿಲ್ಲ.
ಅಂದಹಾಗೆ ಗೌತಮ್ ಗಂಭೀರ್ ಅವರು 2027ರವರೆಗೆ ಭಾರತ ತಂಡದ ಕೋಚ್ ಆಗಿರುತ್ತಾರೆ. ಈ ನಡುವೆ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, 2026ರಲ್ಲಿ ಟಿ20 ವಿಶ್ವಕಪ್ ಮತ್ತು 2027ರಲ್ಲಿ ಏಕದಿನ ವಿಶ್ವಕಪ್. ಈ ಮೂರು ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಸದ್ಯ ಭಾರತ ತಂಡ ಉನ್ನತ ಸ್ಥಿತಿಯಲ್ಲಿದೆ. ಆದರೆ, ರೋಹಿತ್ ಶರ್ಮರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು ಗಂಭೀರ್ ಪ್ರವೇಶದೊಂದಿಗೆ ಕೊನೆಗೊಂಡರೆ ಆಶ್ಚರ್ಯಪಡಬೇಕಿಕಲ್ಲ. (ಏಜೆನ್ಸೀಸ್)