

ಬೆಂಗಳೂರು: ಪ್ರಸಕ್ತ ಐಪಿಎಲ್ ಟೂರ್ನಿಯ ಲೀಗ್ ಹಂತವು ಮುಗಿದಿದೆ. ನಿರ್ಣಾಯಕ ಪ್ಲೇಆಫ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲ 10 ತಂಡಗಳು ತಮ್ಮ 14 ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ಹೆಚ್ಚು ಗೆಲುವುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ 4 ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಉಳಿದ ಆರು ತಂಡಗಳು ಹೊರಬಿದ್ದಿವೆ. ಕೆಕೆಆರ್, ಎಸ್ಆರ್ಎಚ್, ಆರ್ಆರ್ ಮತ್ತು ಆರ್ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ. ಪ್ಲೇ ಆಫ್ ಪ್ರವೇಶ ಪಡೆಯುತ್ತೇವೆ ಎಂದು ಭಾವಿಸಿದ್ದ ಸಿಎಸ್‌ಕೆ ತವರಿನ ಹಾದಿ ಹಿಡಿದಿದೆ. ಇದರೊಂದಿಗೆ ಈ ಸೀಸನ್‌ನಲ್ಲಿ ಲೆಜೆಂಡರಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಆಟ ಮುಕ್ತಾಯವಾಗಿದೆ. ಆದರೆ, ಮುಂದಿನ ಐಪಿಎಲ್ ಸೀಸನ್ನಲ್ಲೂ ಧೋನಿ ಆಡಬೇಕು ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದಾರೆ. ಇತ್ತೀಚೆಗೆ ಅಂಬಟಿ ರಾಯುಡು ಕೂಡ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್ನಿಂದ ಧೋನಿ ನಿವೃತ್ತಿಯಾಗುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಧೋನಿ ಮುಂದಿನ ಐಪಿಎಲ್ ಸೀಸನ್ನಲ್ಲೂ ಆಡಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ 18ನೇ ಆವೃತ್ತಿಯಲ್ಲಿ ಧೋನಿ ಆಡಿದರೆ, ಬಿಸಿಸಿಐ ಈ ಒಂದು ಕೆಲಸ ಮಾಡುವಂತೆ ಟೀಮ್ ಇಂಡಿಯಾ ಹಾಗೂ ಸಿಎಸ್‌ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಮುಂದಿನ ಸೀಸನ್ನಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಸುವಂತೆ ಬಿಸಿಸಿಐ ಬಳಿ ರಾಯುಡು ಕೇಳಿಕೊಂಡಿದ್ದಾರೆ. ಈ ನಿಯಮ ಇದ್ದರೆ ಮುಂದಿನ ಸೀಸನ್ನಲ್ಲೂ ಧೋನಿ ಆಡುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ, ಇದು ಧೋನಿಯ ಕೊನೆಯ ಸೀಸನ್ ಎಂಬ ಪ್ರಚಾರ ಟೂರ್ನಿ ಆರಂಭಕ್ಕೂ ಮುನ್ನವೇ ನಡೆದಿತ್ತು. ಆದಾಗ್ಯೂ ಧೋನಿ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಧೋನಿ ಅವರು ಈ ಸೀಸನ್‌ನಲ್ಲಿ ಬೃಹತ್ ಇನ್ನಿಂಗ್ಸ್ ಆಡದಿದ್ದರೂ, ಕ್ರೀಡಾಭಿಮಾನಿಗಳಿಗೆ, ವಿಶೇಷವಾಗಿ ಅವರ ಅಭಿಮಾನಿಗಳ ಮನಸ್ಸಿಗೆ ಮುದ ನೀಡುವಂತೆ ಉತ್ತಮ ಹೊಡೆತಗಳನ್ನು ಹೊಡೆ ಹೊಡೆದಿದ್ದಾರೆ. ಈ ಐಪಿಎಲ್ನಲ್ಲಿ ವಿಂಟೇಜ್ ಧೋನಿಯನ್ನು ಪರಿಚಯಿಸಿದ ಅವರು ಬೃಹತ್ ಸಿಕ್ಸರ್‌ಗಳನ್ನು ಸಿಡಿಸಿದರು. ಅದರಲ್ಲೂ ಆರ್ಸಿಬಿ ವಿರುದ್ಧ ಮೇ 18ರಂದು ನಡೆದ ನಿರ್ಣಾಯಕ ಪಂದ್ಯದಲ್ಲಿ 110 ಮೀಟರ್ ಉದ್ದದ ಟೂರ್ನಿಯ ಅತ್ಯಂತ ಉದ್ದದ ಸಿಕ್ಸರ್ ಸಿಡಿಸಿದರು.
ರುತುರಾಜ್ಗೆ ನಾಯಕತ್ವ ಹಸ್ತಾಂತರಿಸಿದ್ದರಿಂದ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಎಂದು ಹೇಳಲಾಗಿದೆ. ಆದರೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಸಿದರೆ ಧೋನಿ ಮುಂದಿನ ಐಪಿಎಲ್ ಸೀಸನ್ ಆಡಬಹುದು ಎಂದು ರಾಯುಡು ಹೇಳಿದ್ದಾರೆ. ಮುಂದಿನ ಸೀಸನ್‌ನಲ್ಲಿ ಕೇವಲ ಬ್ಯಾಟಿಂಗ್ ಮಾಡುವ ಮೂಲಕ ಧೋನಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆಯಿದೆ. ಆದ್ದರಿಂದ ಅದನ್ನು ರದ್ದುಗೊಳಿಸದೆ ಆ ನಿಯಮವನ್ನು ಮುಂದುವರಿಸಲು ರಾಯುಡು ವಿನಂತಿಸಿದ್ದಾರೆ. (ಏಜೆನ್ಸೀಸ್)