

ನವದೆಹಲಿ: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಭಾರತ ಪಾಕಿಸ್ತಾನಕ್ಕೆ ಬರಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಒತ್ತಾಯ ಇದೀಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ರಾಷ್ಟ್ರದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯುವ 50 ಓವರ್‌ಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವಿಶ್ವದ ಟಾಪ್ ಎಂಟು ತಂಡಗಳು ಸ್ಪರ್ಧಿಸಲು ಸಜ್ಜಾಗಿದೆ. ಈ ಪೈಕಿ ಟೀಮ್ ಇಂಡಿಯಾ (ICC Champions Trophy) ಪ್ರಬಲ ಸರ್ಧಿಯಾಗಿ ಗುರುತಿಸಿಕೊಂಡಿದೆ. ಪ್ರತ್ಯೇಕವಾಗಿ ತಮ್ಮ ಪಂದ್ಯಗಳನ್ನು ದುಬೈಗೆ ವರ್ಗಾಯಿಸಿದರೆ ಮಾತ್ರ ನಾವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದೇವೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ. ಈ ನಡೆಯನ್ನು ಖಂಡಿಸಿರುವ ಪಾಕ್, ಇದೀಗ ಮತ್ತೊಂದು ಹೊಸ ಬಾಣವನ್ನು ನೇರವಾಗಿ ಐಸಿಸಿ ಅಂಗಳಕ್ಕೆ ಬಿಟ್ಟಿದೆ.
ಟೀಮ್ ಇಂಡಿಯಾವನ್ನು ಹೇಗಾದರೂ ಮಾಡಿ ತಮ್ಮ ನೆಲಕ್ಕೆ ಕರೆಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ಪಾಕಿಸ್ತಾನ, ಒಂದಲ್ಲ ಒಂದು ಅಸ್ತ್ರವನ್ನು ಪ್ರಯೋಗಿಸುತ್ತಲೇ ಇದೆ. ಆದರೆ, ಸದ್ಯದ ಮಟ್ಟಿಗೆ ಇದ್ಯಾವುದನ್ನು ಭಾರತೀಯ ಕ್ರಿಕೆಟ್ ಮಂಡಳಿ ಒಪ್ಪಿಲ್ಲ. ಬಿಸಿಸಿಐ ನೀಡಿರುವ ಹೈಬ್ರಿಡ್ ಮಾಡೆಲ್ನ ತಿರಸ್ಕರಿಸಿರುವ ಪಿಸಿಬಿ, ಒಂದೆರೆಡು ಪಂದ್ಯಗಳನ್ನಾದರೂ ಪಾಕ್ನಲ್ಲಿ ಭಾರತ ಆಡಬೇಕು ಎಂದು ಐಸಿಸಿಗೆ ಮನವಿ ಮಾಡಿದೆ. ಆದರೆ, ಇದಕ್ಕೆ ಐಸಿಸಿ ಮಾನ್ಯತೆ ನೀಡಿಲ್ಲ. ಈ ಬೆನ್ನಲ್ಲೇ ಹೊಸ ಪ್ರಯೋಗ ಮಾಡಿರುವ ಪಿಸಿಬಿ, ಚಾಂಪಿಯನ್ಸ್ ಟ್ರೋಫಿ 2025ರ ಪ್ರವಾಸವನ್ನು ಪಾಕಿಸ್ತಾನ ಆಕ್ರಮಿತ ಕಾಶೀರದಲ್ಲಿ(ಪಿಒಕೆ) ಆಯೋಜಿಸಲು ಬಯಸಿದೆ. ಸದ್ಯ ಇದು ದೊಡ್ಡ ವಿವಾದಕ್ಕೆ ಕಾರಣವಾಗಬಹುದು ಎಂದು ಐಸಿಸಿ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಗಮನಸೆಳೆಯಲು ಸಜ್ಜಾಗಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನ ಆಕ್ರಮಿತ ಕಾಶೀರದಲ್ಲಿ ಆಯೋಜಿಸುವುದು ಸರಿಯಲ್ಲ. ಇದು ದೊಡ್ಡ ವಿವಾದಕ್ಕೆ ಕಾರಣವಾಗಹುದು. ಸ್ಕರ್ಡು, ಮುರ್ರೇ ಮತ್ತು ಮುಜಾಫರ್ಬಾದ್ ಪ್ರದೇಶಗಳಲ್ಲಿ ಪಂದ್ಯ ಆಡಿಸುವುದು ಬೇಡ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ಮನವಿಯನ್ನು ನಾವು ತಿರಸ್ಕರಿಸುತ್ತೇವೆ ಎಂದು ಭಾರತೀಯ ಕ್ರಿಕೆಟ್ ಕೌನ್ಸಿಲ್ ಸ್ಪಷ್ಟವಾಗಿ ತಿಳಿಸಿದೆ.