ಭಾರತದ ಯುವ ಸ್ಪಿನ್ನರ್​ ರವಿ ಬಿಷ್ಣೋಯಿ ಈಗ ವಿಶ್ವ ನಂ. 1 ಟಿ20 ಬೌಲರ್​!

ravi web
Published on

ಬೆಂಗಳೂರು: ಭಾರತದ ಯುವ ಲೆಗ್​ ಸ್ಪಿನ್ನರ್​ ರವಿ ಬಿಷ್ಣೋಯಿ ಐಸಿಸಿ ಟಿ20 ಬೌಲಿಂಗ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯಲ್ಲಿ 9 ವಿಕೆಟ್​ ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ 23 ವರ್ಷದ ರವಿ ಬಿಷ್ಣೋಯಿ, ಆ ಸಾಧನೆಯ ಫಲವಾಗಿ ವಿಶ್ವ ನಂ. 1 ಟಿ20 ಬೌಲರ್​ ಎನಿಸಿದ್ದಾರೆ. ಇದರೊಂದಿಗೆ ಐಸಿಸಿ ಟಿ20 ರ್ಯಾಂಕಿಂಗ್​ನ ತಂಡ, ಬ್ಯಾಟಿಂಗ್​ (ಸೂರ್ಯಕುಮಾರ್​ ಯಾದವ್​) ಮತ್ತು ಬೌಲಿಂಗ್​ ವಿಭಾಗದಲ್ಲೇ ಭಾರತೀಯರೇ ನಂ. 1 ಆದಂತಾಗಿದೆ.

2022ರ ೆಬ್ರವರಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ರವಿ ಬಿಷ್ಣೋಯಿ ಇದುವರೆಗೆ ಆಡಿದ 21 ಟಿ20 ಪಂದ್ಯಗಳಲ್ಲಿ 34 ವಿಕೆಟ್​ ಕಬಳಿಸಿದ್ದಾರೆ. ಒಟ್ಟಾರೆ 699 ರೇಟಿಂಗ್​ ಪಾಯಿಂಟ್​ ಕಲೆಹಾಕುವ ಮೂಲಕ 5 ಸ್ಥಾನ ಬಡ್ತಿ ಪಡೆದಿರುವ ಬಿಷ್ಣೋಯಿ, ಅ್ಘಾನಿಸ್ತಾನದ ರಶೀದ್​ ಖಾನ್​ (692) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ವಾನಿಂದು ಹಸರಂಗ ಮತ್ತು ಇಂಗ್ಲೆಂಡ್​ನ ಆದಿಲ್​ ರಶೀದ್​ ತಲಾ 679 ಅಂಕ ಕಲೆಹಾಕಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ.

ಬಿಷ್ಣೋಯಿ ಟಿ20 ಬೌಲರ್​ಗಳ ರ್ಯಾಂಕಿಂಗ್​ನಲ್ಲಿ ಅಗ್ರ 10ರೊಳಗಿರುವ ಏಕೈಕ ಭಾರತೀಯರಾಗಿದ್ದಾರೆ. 18ನೇ ಸ್ಥಾನದಲ್ಲಿರುವ ಅಕ್ಷರ್​ ಪಟೇಲ್​ ನಂತರದ ಅತ್ಯುತ್ತಮ ರ್ಯಾಂಕ್​ ಹೊಂದಿರುವ ಭಾರತೀಯ ಬೌಲರ್​ ಆಗಿದ್ದಾರೆ. ಆಸೀಸ್​ ವಿರುದ್ಧದ ಸರಣಿಯಲ್ಲಿ ನಾಯಕರೂ ಆಗಿ 4-1ರಿಂದ ಸರಣಿ ಗೆಲುವು ಕಂಡ ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆಲ್ರೌಂಡರ್​ಗಳ ರ್ಯಾಂಕಿಂಗ್​ನಲ್ಲಿ ಹಾರ್ದಿಕ್​ ಪಾಂಡ್ಯ 3ನೇ ಸ್ಥಾನದಲ್ಲಿ ಉಳಿದಿದ್ದಾರೆ.

ನಂ. 1 ಭಾರತೀಯರು

*ಟಿ20 ತಂಡ ರ್ಯಾಂಕಿಂಗ್​

*ಏಕದಿನ ತಂಡ ರ್ಯಾಂಕಿಂಗ್​

*ಟೆಸ್ಟ್​ ತಂಡ ರ್ಯಾಂಕಿಂಗ್​

*ಏಕದಿನ ಬ್ಯಾಟಿಂಗ್​: ಶುಭಮಾನ್​ ಗಿಲ್​

*ಟಿ20 ಬ್ಯಾಟಿಂಗ್​: ಸೂರ್ಯಕುಮಾರ್​

*ಟೆಸ್ಟ್​ ಬೌಲಿಂಗ್​: ಆರ್​. ಅಶ್ವಿನ್​

*ಟಿ20 ಬೌಲಿಂಗ್​: ರವಿ ಬಿಷ್ಣೋಯಿ

*ಟೆಸ್ಟ್​ ಆಲ್ರೌಂಡರ್​: ರವೀಂದ್ರ ಜಡೇಜಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net