ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ರೇಸ್​ನಲ್ಲಿ ಮೂವರು ಭಾರತೀಯರು!

icc odi web
Published on

ನವದೆಹಲಿ: ಭಾರತದ ಮೂವರು ಆಟಗಾರರು 2023ರ ಸಾಲಿನ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ವಿಶೇಷವೆನಿಸಿದೆ. ತವರಿನ ವಿಶ್ವಕಪ್​ನಲ್ಲಿ ಗರಿಷ್ಠ ರನ್​ ಬಾರಿಸಿ ಸರಣಿಶ್ರೇಷ್ಠರೆನಿಸಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ, ಗರಿಷ್ಠ ವಿಕೆಟ್​ ಕಬಳಿಸಿದ ಮೊಹಮದ್​ ಶಮಿ ಮತ್ತು ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ರನ್​ಮಳೆ ಹರಿಸಿದ ಶುಭಮಾನ್​ ಗಿಲ್​ ಪ್ರಶಸ್ತಿ ರೇಸ್​ನಲ್ಲಿದ್ದಾರೆ. ನ್ಯೂಜಿಲೆಂಡ್​ನ ಡೆರಿಲ್​ ಮಿಚೆಲ್​ ಪ್ರಶಸ್ತಿ ಸ್ಪರ್ಧೆಯಲ್ಲಿರುವ 4ನೇ ಆಟಗಾರರಾಗಿದ್ದಾರೆ.

ಕೊಹ್ಲಿ 2023ರಲ್ಲಿ 27 ಏಕದಿನ ಪಂದ್ಯಗಳಲ್ಲಿ 1,377 ರನ್​ ಸಿಡಿಸಿದ್ದಾರೆ. ಹಾಲಿ ವರ್ಷ 6 ಶತಕ ಸಿಡಿಸುವ ಮೂಲಕ ಅವರು ಏಕದಿನ ಕ್ರಿಕೆಟ್​ನಲ್ಲಿ ಶತಕಗಳ ಅರ್ಧಶತಕವನ್ನೂ ಪೂರೈಸಿದ್ದಾರೆ. ವಿಶ್ವಕಪ್​ನಲ್ಲಿ ಅವರು ಗರಿಷ್ಠ 765 ರನ್​ ಸಿಡಿಸಿ ಹೊಸ ದಾಖಲೆ ಬರೆದಿದ್ದರು.

ಅನುಭವಿ ವೇಗಿ ಮೊಹಮದ್​ ಶಮಿ 2023ರಲ್ಲಿ ಆಡಿದ 19 ಏಕದಿನಗಳಲ್ಲಿ 43 ವಿಕೆಟ್​ ಕಬಳಿಸಿದ್ದರು. ವಿಶ್ವಕಪ್​ನಲ್ಲಿ ಮೊದಲ 4 ಪಂದ್ಯಗಳಿಗೆ ತಂಡದಿಂದ ಹೊರಗಿದ್ದ ಅವರು, ನಂತರ ಆಡಿದ ಏಳೇ ಪಂದ್ಯಗಳಲ್ಲಿ 24 ವಿಕೆಟ್​ ಕಬಳಿಸಿದ್ದರು. ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ಎದುರು 57 ರನ್​ಗಳಿಗೆ 7 ವಿಕೆಟ್​ ಕಬಳಿಸಿ ದಾಖಲೆ ಬರೆದಿದ್ದರು.

23 ವರ್ಷದ ಶುಭಮಾನ್​ ಗಿಲ್​ 2023ರಲ್ಲಿ ಆಡಿದ 29 ಏಕದಿನ ಪಂದ್ಯಗಳಲ್ಲಿ 1,584 ರನ್​ ಸಿಡಿಸಿದ್ದರು. ಜತೆಗೆ 24 ಕ್ಯಾಚ್​ ಕೂಡ ಹಿಡಿದಿದ್ದಾರೆ. 5 ಶತಕ ಸಿಡಿಸಿದ್ದರು. ಈ ಪೈಕಿ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಮಹಿಳೆಯರ ವಿಭಾಗದಲ್ಲಿ ಆಸ್ಟ್ರೆಲಿಯಾದ ಆಶ್ಲೆ ಗಾರ್ಡ್​ನರ್​, ಶ್ರೀಲಂಕಾದ ಚಾಮರಿ ಅಟಪಟ್ಟು, ಇಂಗ್ಲೆಂಡ್​ನ ನಾಟ್​ ಸೀವರ್​&ಬ್ರಂಟ್​ ಮತ್ತು ನ್ಯೂಜಿಲೆಂಡ್​ನ ಅಮೆಲಿಯಾ ಕೆರ್​ ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಡೆರಿಲ್​ ಮಿಚೆಲ್​ 2023ರಲ್ಲಿ ಆಡಿದ 26 ಏಕದಿನಗಳಲ್ಲಿ 1,204 ರನ್​, 9 ವಿಕೆಟ್​, 22 ಕ್ಯಾಚ್​ನೊಂದಿಗೆ ಸರ್ವಾಂಗೀಣ ನಿರ್ವಹಣೆ ತೋರಿದ್ದಾರೆ.

ವರ್ಷದ ವಿವಿಧ ಪ್ರಶಸ್ತಿ ರೇಸ್​ನಲ್ಲಿರುವವರಿಗೆ ಮತ ಚಲಾಯಿಸಲು ಐಸಿಸಿ ತನ್ನ ವೆಬ್​ಸೈಟ್​ನಲ್ಲಿ ಅಭಿಮಾನಿಗಳಿಗೂ ಅವಕಾಶ ಕಲ್ಪಿಸಿದೆ. ಐಸಿಸಿ ವರ್ಷದ ಟೆಸ್ಟ್​ ಆಟಗಾರ ಮತ್ತು ಸರ್​ ಗ್ಯಾರಿ ಸೋಬರ್ಸ್​ ಟ್ರೋಫಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿರುವವರ ಹೆಸರನ್ನು ಐಸಿಸಿ ಶುಕ್ರವಾರ ಪ್ರಕಟಿಸಲಿದೆ. ಜನವರಿ ಕೊನೇ ವಾರ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net