

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಮಹತ್ವದ ಸಭೆ ಮಂಗಳವಾರದಿಂದ 4 ದಿನಗಳ ಕಾಲ ದುಬೈನಲ್ಲಿ ನಡೆಯಲಿದ್ದು, ಏಷ್ಯಾಕಪ್ ಟ್ರೋಫಿ ವಿವಾದವನ್ನು ಪ್ರಸ್ತಾಪಿಸಲು ಬಿಸಿಸಿಐ ಸಿದ್ಧಗೊಂಡಿದೆ. ವಿಜೇತ ಭಾರತ ತಂಡಕ್ಕೆ ಟ್ರೋಫಿಯನ್ನು ವಿತರಿಸಲು ಅವಕಾಶ ನೀಡದೆ ಹರಸ್ಯ ಸ್ಥಳದಲ್ಲಿ ಬಚ್ಚಿಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಬಿಸಿಸಿಐ ತನ್ನ ಪ್ರತಿಭಟನೆಯನ್ನು ಐಸಿಸಿ ಎದುರು ನಡೆಸಲಿದೆ.
ಮಹಿಳೆಯರ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಏಷ್ಯಾಕಪ್ ಟ್ರೋಫಿ ವಿಚಾರವನ್ನು ಪ್ರಸ್ತಾಪಿಸಿ ಮೊಹ್ಸಿನ್ ನಖ್ವಿಗೆ ಟಾಂಗ್ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ಗೆಲುವಿನ ಬಳಿಕ ನಮ್ಮ ಮಹಿಳಾ ತಂಡ ಕೂಡಲೆ ಟ್ರೋಫಿಯನ್ನು ಪಡೆಯಿತು. ಆದರೆ ನಮ್ಮ ಪುರುಷರ ತಂಡ ದುಬೈನಲ್ಲಿ ಏಷ್ಯಾಕಪ್ ಗೆದ್ದು ಇಷ್ಟು ದಿನಗಳಾದರೂ ಇನ್ನೂ ಟ್ರೋಫಿ ಪಡೆದಿಲ್ಲ. ಅದು ಇನ್ನೂ ಮುಂಬೈನ ಬಿಸಿಸಿಐ ಮುಖ್ಯ ಕಚೇರಿಗೂ ಬಂದಿಲ್ಲ' ಎಂದಿದ್ದಾರೆ.
ಏಷ್ಯಾಕಪ್ ಟ್ರೋಫಿ ಹಸ್ತಾಂತರಿಸಬೇಕೆಂದು ಬಿಸಿಸಿಐ 10 ದಿನಗಳ ಹಿಂದೆಯೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಪತ್ರ ಬರೆದಿತ್ತು. ಆದರೆ ಅದು ಇನ್ನೂ ಬಾರದಿರುವುದರಿಂದ ನಾವು ಐಸಿಸಿ ಮೊರೆ ಹೋಗುವುದು ಅನಿವಾರ್ಯವಾಗಿದೆ. ಐಸಿಸಿ ನಮಗೆ ನ್ಯಾಯ ಒದಗಿಸಿ, ಟ್ರೋಫಿ ಪಡೆಯಲು ನೆರವಾಗುವ ಭರವಸೆ ಇದೆ ಎಂದು ಸೈಕಿಯಾ ತಿಳಿಸಿದ್ದಾರೆ. ಮೊಹ್ಸಿನ್ ನಖ್ವಿ ಪಾಕ್ ಸರ್ಕಾರದ ಪ್ರಭಾವಿ ಸಚಿವರೂ ಆಗಿದ್ದು, ಅವರ ಭಾರತ ವಿರೋಧಿ ಹೇಳಿಕೆಗಳಿಂದಾಗಿ, ಸೂರ್ಯಕುಮಾರ್ ಪಡೆ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಆದರೆ ಬೇರೆ ಅತಿಥಿಗಳಿಂದ ಟ್ರೋಫಿ ಸ್ವೀಕರಿಸಲು ಸಿದ್ಧವಿತ್ತು. ಆಗ ನಖ್ವಿ ಟ್ರೋಫಿಯೊಂದಿಗೆ ಸ್ಟೇಡಿಯಂನಿಂದ ಪಲಾಯನ ಮಾಡಿದ್ದರು.