

ನವದೆಹಲಿ: ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಕಳೆದ ಡಿಸೆಂಬರ್ನಿಂದ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಸ್ಟಾಪ್ ಕ್ಲಾಕ್ ನಿಯಮಾವಳಿಯನ್ನು ಜೂನ್ನಿಂದ ಶಾಶ್ವತವಾಗಿ ಜಾರಿಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿರ್ಧರಿಸಿದೆ. ಜೂನ್ನಲ್ಲಿ ಅಮೆರಿಕ&ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದ ಈ ನಿಯಮ ಜಾರಿಗೆ ಬರಲಿದೆ.
ಸ್ಟಾಪ್ ಕ್ಲಾಕ್ ನಿಯಮದ ಅನ್ವಯ ಪ್ರತಿ ಓವರ್ ನಡುವೆ 60 ಸೆಕೆಂಡ್ಗಳ ಕೌಂಟ್ಡೌನ್ ಇರುತ್ತದೆ. ಈ ಕೌಂಟ್ಡೌನ್ ಸೊನ್ನೆಯನ್ನು ತಲುಪುವ ಮುನ್ನ ಮುಂದಿನ ಓವರ್ ಆರಂಭಗೊಳ್ಳಬೇಕು. ಈ ಕೌಂಟ್ಡೌನ್ ಏಕದಿನ ಮತ್ತು ಟಿ20 ಪಂದ್ಯಗಳ ಪ್ರತಿ ಓವರ್ಗಳ ನಡುವೆ ಇರುತ್ತದೆ. ಇದನ್ನು ಉಲ್ಲಂಘಿಸಿದರೆ ಮೊದಲ 2 ಸಲ ಎಚ್ಚರಿಕೆ ನೀಡಲಾಗುತ್ತದೆ. 3ನೇ ಬಾರಿ 5 ರನ್ ದಂಡ ವಿಧಿಸಲಾಗುತ್ತದೆ. ಪಂದ್ಯದ ನಡುವೆ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಈ ನಿಯಮ ಜಾರಿಗೊಳಿಸಲಾಗಿದೆ.
ಪ್ರತಿ ಓವರ್ ನಡುವೆ ಕ್ರೀಡಾಂಗಣದ ದೈತ್ಯಪರದೆಯಲ್ಲಿ 60 ಸೆಕೆಂಡ್ಗಳ ಎಲೆಕ್ಟ್ರಾನಿಕ್ ಸ್ಟಾಪ್ ಕ್ಲಾಕ್ ತೋರಿಸಲಾಗುತ್ತದೆ. ಇದರ ಉಲ್ಲಂನೆ ಆದಾಗ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಮೈದಾನದ ಅಂಪೈರ್ಗೆ ಇರುತ್ತದೆ. ಜತೆಗೆ ಬ್ಯಾಟರ್, ಬೌಲರ್, ಫೀಲ್ಡರ್ಸ್ ಅಥವಾ ಬೇರೆ ಯಾರಿಂದಾಗಿ ಈ ವಿಳಂಬ ಆಯಿತು ಎಂದೂ ಅವರು ನಿರ್ಧರಿಸಬೇಕಾಗುತ್ತದೆ.
"ಸ್ಟಾಪ್ ಕ್ಲಾಕ್ ಅನ್ನು 2024ರ ಏಪ್ರಿಲ್ವರೆಗೆ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಇದರ ಸಕಾರಾತ್ಮಕ ಲಿತಾಂಶ ಈಗಾಗಲೆ ಬಂದಿದ್ದು, ಪಂದ್ಯಗಳು ಸರಿಯಾದ ಸಮಯದಲ್ಲಿ ಮುಕ್ತಾಯ ಕಾಣುತ್ತಿವೆ. ಪ್ರತಿ ಏಕದಿನ ಪಂದ್ಯದಲ್ಲೂ ಸುಮಾರು 20 ನಿಮಿಷ ಉಳಿಕೆಯಾಗುತ್ತಿದೆ' ಎಂದು ಐಸಿಸಿ ತಿಳಿಸಿದೆ.