

ಬೆಂಗಳೂರು: ಅಭಿಮಾನಿಗಳ ಬಹುವರ್ಷಗಳ ಬೇಡಿಕೆಯನ್ನು ಆರ್ಸಿಬಿ ತಂಡ ಕೊನೆಗೂ ಈಡೇರಿಸಲು ಮುಂದಾಗಿದೆ. ಇಂಗ್ಲಿಷ್ನಲ್ಲಿ "ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್' (Bangalore) ಎಂದಿರುವ ತಂಡದ ಹೆಸರು ಇನ್ನು ಮುಂದೆ "ರಾಯಲ್ ಚಾಲೆಂಜರ್ಸ್ ಬೆಂಗಳೂರು' (Bengaluru) ಎಂದು ಬದಲಾಗುವ ನಿರೀಕ್ಷೆ ಹರಡಿದೆ. ಆರ್ಸಿಬಿ ತಂಡ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಪ್ರಕಟಿಸಿರುವ ವಿಶೇಷ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಮಾರ್ಚ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಆದರೆ "ಆರ್ಸಿಬಿ' ಎಂಬ ಶಾರ್ಟ್ನೇಮ್ ಹಾಗೆಯೇ ಇರಲಿದೆ.
ಆರ್ಸಿಬಿ ತಂಡದ ಪ್ರೋಮೋ ವಿಡಿಯೋದಲ್ಲಿ ರಿಷಬ್ ಶೆಟ್ಟಿ, ಕಂಬಳದ ಮೂರು ಕೋಣಗಳ ಬಳಿ "ಕಾಂತಾರ' ಸ್ಟೈಲ್ನಲ್ಲಿ ಬರುತ್ತಾರೆ. ರಾಯಲ್, ಚಾಲೆಂಜರ್ಸ್ ಮತ್ತು ಬ್ಯಾಂಗಲೋರ್ ಎಂದು ಬರೆದ ಕೆಂಪು ಬಟ್ಟೆ ಕೋಣಗಳ ಮೇಲಿರುತ್ತದೆ. ಈ ಪೈಕಿ "ಬ್ಯಾಂಗಲೋರ್' ಎಂದು ಬರೆದಿರುವ ಕೋಣದ ಬಳಿ ಬಂದು ರಿಷಬ್ ಅದನ್ನು ಅಲ್ಲಿಂದ ಹೋಗುವಂತೆ ಸೂಚಿಸುತ್ತಾರೆ. ನಂತರ "ಅರ್ಥ ಆಯ್ತಾ?' ಎಂದು ವೀಕ್ಷಕರ ಕಡೆ ತಿರುಗಿ ಪ್ರಶ್ನೆ ಹಾಕುತ್ತಾರೆ. ಈ ಮೂಲಕ ಬ್ಯಾಂಗಲೋರ್ ಇನ್ನು ಬೆಂಗಳೂರು ಆಗಲಿದೆ ಎಂಬ ಸುಳಿವು ನೀಡಿದ್ದಾರೆ.
ಐಪಿಎಲ್ ಆರಂಭಗೊಂಡು 16 ವರ್ಷಗಳೇ ಕಳೆದಿದ್ದರೂ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಕ್ಕದಿರುವ ಆರ್ಸಿಬಿ ತಂಡ ಹೆಸರಿನಲ್ಲಿ ಸಣ್ಣ ಮಾರ್ಪಾಡುವ ಮಾಡಿಕೊಳ್ಳುವ ಮೂಲಕ ಅದೃಷ್ಟ ಖುಲಾಯಿಸುವ ಮತ್ತು ರಾಜ್ಯದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವ ತವಕದಲ್ಲಿದೆ.
ಇತರ ಲೀಗ್ಗಳಲ್ಲಿ ಬೆಂಗಳೂರು ಇದೆ
ಐಪಿಎಲ್ ಹೊರತಾಗಿ ಇತರ ಎಲ್ಲ ಕ್ರೀಡಾ ಲೀಗ್ಗಳಲ್ಲಿ ಆಡುವ ಬೆಂಗಳೂರಿನ ತಂಡಗಳು ಈಗಾಗಲೆ ಇಂಗ್ಲಿಷ್ನಲ್ಲಿ "ಬೆಂಗಳೂರು' ಎಂಬ ಹೆಸರನ್ನೇ ಹೊಂದಿವೆ. ಐಎಸ್ಎಲ್ನಲ್ಲಿ ಆಡುವ ಬೆಂಗಳೂರು ಎಫ್ಸಿ, ಪ್ರೊ ಕಬಡ್ಡಿ ಲೀಗ್ನಲ್ಲಿ ಆಡುವ ಬೆಂಗಳೂರು ಬುಲ್ಸ್, ಪೆಮ್ ವಾಲಿಬಾಲ್ ಲೀಗ್ನಲ್ಲಿ ಆಡುವ ಬೆಂಗಳೂರು ಟಾರ್ಪಿಡೋಸ್, ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಆಡುವ ಬೆಂಗಳೂರು ರ್ಯಾಪ್ಟರ್ಸ್ ತಂಡಗಳು ಇಂಗ್ಲಿಷ್ನಲ್ಲೂ 'Bengaluru' ಎಂಬ ಹೆಸರನ್ನೇ ಹೊಂದಿವೆ.