

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದ ಬಹುತೇಕ ದೇಶಗಳಲ್ಲಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿರುವ ನಡುವೆಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಏಕದಿನ ವಿಶ್ವಕಪ್ ಸೂಪರ್ ಲೀಗ್ ಟೂರ್ನಿಯನ್ನು ಸೋಮವಾರ ಅನಾವರಣಗೊಳಿಸಿದೆ. ಇದು 2023ರಲ್ಲಿ ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತಾ ಮಾರ್ಗವಾಗಿರುತ್ತದೆ. 12 ಟೆಸ್ಟ್ ಮಾನ್ಯತೆಯ ದೇಶಗಳ ಜತೆಗೆ ನೆದರ್ಲೆಂಡ್ ಸೇರಿದಂತೆ ಒಟ್ಟು 13 ತಂಡಗಳು ವಿಶ್ವಕಪ್ ಅರ್ಹತಾ ಹೋರಾಟದಲ್ಲಿದ್ದರೂ, ಆತಿಥೇಯ ತಂಡವಾಗಿ ಭಾರತಕ್ಕೆ ನೇರಅರ್ಹತೆ ಖಚಿತವೆನಿಸಿದೆ.
ಜುಲೈ 30ರಿಂದ ನಡೆಯಲಿರುವ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಮತ್ತು ಪ್ರವಾಸಿ ಐರ್ಲೆಂಡ್ ನಡುವಿನ ಏಕದಿನ ಸರಣಿಯೊಂದಿಗೆ ವಿಶ್ವಕಪ್ ಸೂಪರ್ ಲೀಗ್‌ಗೆ ಚಾಲನೆ ದೊರೆಯಲಿದೆ. ಸೂಪರ್ ಲೀಗ್‌ನ ಇತರ ಸರಣಿಗಳ ವೇಳಾಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಪ್ರತಿ ತಂಡ ಒಟ್ಟು ತಲಾ 3 ಪಂದ್ಯಗಳ 8 ಸರಣಿ ಆಡಬೇಕಾಗಿದ್ದು, ಈ ಪೈಕಿ 4 ಸ್ವದೇಶ ಮತ್ತು 4 ವಿದೇಶದಲ್ಲಿ ಆಡಬೇಕು. ಪ್ರತಿ ತಂಡ ತಲಾ 24 ಏಕದಿನ ಪಂದ್ಯ ಆಡಬೇಕಾಗಿದ್ದು, ಸೂಪರ್ ಲೀಗ್‌ನಲ್ಲಿ ಒಟ್ಟಾರೆ 156 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ಒಲಿಂಪಿಕ್ ರಿಂಗ್ಗಳು 2 ಕೋಟಿ ರೂಪಾಯಿಗೆ ಮಾರಾಟ!
12 ಟೆಸ್ಟ್ ಮಾನ್ಯತೆಯ ದೇಶಗಳ ಜತೆಗೆ ನೆದರ್ಲೆಂಡ್ ತಂಡಕ್ಕೆ 2015-17ರ ವಿಶ್ವ ಕ್ರಿಕೆಟ್ ಸೂಪರ್ ಲೀಗ್ ಪ್ರಶಸ್ತಿ ಗೆಲುವಿನ ಸಾಧನೆಗಾಗಿ ಸೂಪರ್ ಲೀಗ್‌ಗೆ ಪ್ರವೇಶ ಲಭಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಬಳಿಕ ಇದು ಕೂಡ ಐಸಿಸಿಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ‘ಈ ಲೀಗ್‌ನಿಂದ ಏಕದಿನ ಕ್ರಿಕೆಟ್‌ಗೆ ಮುಂದಿನ 3 ವರ್ಷ ಪ್ರಸ್ತುತತೆ ಮತ್ತು ಸ್ಪರ್ಧಾತ್ಮಕತೆ ಸಿಗಲಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತೆಯು ಪಣಕ್ಕಿರುವುದು ಇದಕ್ಕೆ ಕಾರಣ’ ಎಂದು ಐಸಿಸಿ ಕಾರ್ಯನಿರ್ವಹಣಾ ವ್ಯವಸ್ಥಾಪಕ ಜೆಫ್ ಅಲರ್ಡೈಸ್ ತಿಳಿಸಿದ್ದಾರೆ.
ಉತ್ತಮ ಮನರಂಜನೆ ಒದಗಿಸುವ ಟಿ20 ಮತ್ತು ಕ್ರಿಕೆಟ್‌ನ ಮೂಲ ಸ್ವರೂಪವೆಂಬ ಗೌರವ ಹೊಂದಿರುವ ಟೆಸ್ಟ್‌ನ ನಡುವೆ ಏಕದಿನ ಕ್ರಿಕೆಟ್‌ಗೆ ಈ ಲೀಗ್ ಹೆಚ್ಚಿನ ಮನ್ನಣೆ ಒದಗಿಸುವ ನಿರೀಕ್ಷೆ ಇದೆ. ಕಳೆದ ಮೇನಲ್ಲೇ ಈ ಸೂಪರ್ ಲೀಗ್ ಆರಂಭಗೊಳ್ಳಬೇಕಾಗಿತ್ತು. ಆದರೆ ಕರೊನಾ ಹಾವಳಿಯಿಂದಾಗಿ ಕ್ರಿಕೆಟ್ ಚಟುವಟಿಕೆ ಸ್ತಬ್ಧಗೊಂಡಿದ್ದ ಕಾರಣದಿಂದಾಗಿ ವಿಳಂಬಗೊಂಡಿದೆ. ಇದರಿಂದಾಗಿ ಈಗಾಗಲೆ 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಮಾರ್ಚ್-ಏಪ್ರಿಲ್‌ನಿಂದ ಅಕ್ಟೋಬರ್-ನವೆಂಬರ್‌ಗೆ ಮುಂದೂಡಲಾಗಿದೆ.
ಸೂಪರ್ ಲೀಗ್ ತಂಡಗಳು
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ, ಜಿಂಬಾಬ್ವೆ, ಅಫ್ಘಾನಿಸ್ತಾನ, ಐರ್ಲೆಂಡ್, ನೆದರ್ಲೆಂಡ್.
ಅಂಕಪದ್ಧತಿ
ಗೆಲುವಿಗೆ 10 ಅಂಕ, ಟೈ-ರದ್ದುಗೊಂಡ ಪಂದ್ಯಕ್ಕೆ 5 ಅಂಕ, ಸೋತ ತಂಡಕ್ಕೆ ಯಾವುದೇ ಅಂಕ ಇರುವುದಿಲ್ಲ.
8 ತಂಡಗಳಿಗೆ ಅರ್ಹತೆ
ಸೂಪರ್ ಲೀಗ್‌ನ 13 ತಂಡಗಳ ಪೈಕಿ ಆತಿಥೇಯ ಭಾರತ ಸೇರಿದಂತೆ ಅಗ್ರ 8 ತಂಡಗಳಿಗೆ 2023ರ ವಿಶ್ವಕಪ್‌ಗೆ ನೇರಅರ್ಹತೆ ಸಿಗಲಿದೆ. ಬಳಿಕ ಉಳಿದ 5 ತಂಡಗಳು ಮತ್ತೊಂದು ಅರ್ಹತೆ ಸುತ್ತಿನಲ್ಲಿ 5 ಅಸೋಸಿಯೇಟ್ ತಂಡಗಳ ಜತೆಗೆ ಆಡಬೇಕಾಗಿದ್ದು, ಅಲ್ಲಿಂದ 2 ತಂಡಗಳಿಗೆ ವಿಶ್ವಕಪ್ ಅರ್ಹತೆ ಸಿಗಲಿದೆ. 2023ರಲ್ಲಿ ಭಾರತದಲ್ಲಿನ ವಿಶ್ವಕಪ್‌ನಲ್ಲಿ 2019ರಂತೆ ಒಟ್ಟು 10 ತಂಡಗಳು ಕಣದಲ್ಲಿರಲಿವೆ.
ಪ್ರತಿ ತಂಡಗಳ ಮುಖಾಮುಖಿ ಇಲ್ಲ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಂತೆ ವಿಶ್ವಕಪ್ ಸೂಪರ್ ಲೀಗ್‌ನಲ್ಲೂ ಎಲ್ಲ 13 ತಂಡಗಳು ಪರಸ್ಪರ ಮುಖಾಮುಖಿ ಆಗುವುದಿಲ್ಲ. ಹೀಗಾಗಿ ಕೆಲ ಪ್ರಮುಖ ತಂಡಗಳ ನಡುವೆಯೇ ಮುಖಾಮುಖಿ ಏರ್ಪಡದೆ ಇರಬಹುದು. ಐಸಿಸಿ ರ‌್ಯಾಂಕಿಂಗ್ ಆಧಾರದಲ್ಲಿ ತಂಡಗಳ ಮುಖಾಮುಖಿ ವಿಂಗಡನೆಯಾಗಲಿದೆ ಎಂದು ಐಸಿಸಿ 2018ರಲ್ಲೇ ತಿಳಿಸಿತ್ತು.
ಸರಣಿಯಲ್ಲಿ 3ಕ್ಕಿಂತ ಹೆಚ್ಚು ಪಂದ್ಯವನ್ನೂ ಆಡಬಹುದು
ಸೂಪರ್ ಲೀಗ್ ಅನ್ವಯ ಪ್ರತಿ ಸರಣಿಯಲ್ಲಿ 3 ಏಕದಿನ ಪಂದ್ಯಗಳಷ್ಟೇ ಇರಬೇಕು. ಆದರೆ ತಂಡಗಳು ಇದಕ್ಕಿಂತ ಹೆಚ್ಚು ಅಂದರೆ 5-7 ಪಂದ್ಯಗಳ ಸರಣಿಯನ್ನೂ ಆಡಬಹುದು. ಈ ವೇಳೆ ಸರಣಿಯ ಮೊದಲ 3 ಪಂದ್ಯಗಳು ಮಾತ್ರ ಸೂಪರ್ ಲೀಗ್‌ನ ಭಾಗವಾಗಿರುತ್ತವೆ. ಅಲ್ಲದೆ ಸೂಪರ್ ಲೀಗ್‌ನ ಭಾಗವಾಗದಿರುವ ಸರಣಿಗಳನ್ನೂ ತಂಡಗಳು ಆಡಬಹುದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಂತೆ 2, 3, 5 ಪಂದ್ಯಗಳ ಸರಣಿಗೆ ಪ್ರತ್ಯೇಕ ರೀತಿಯ ಅಂಕ ವ್ಯವಸ್ಥೆ ಇರುವುದಿಲ್ಲ. ಸರಣಿಯಲ್ಲಿ 3 ಪಂದ್ಯಗಳಿರಬೇಕಾಗಿದ್ದು, ಪ್ರತಿ ಸರಣಿಯಲ್ಲಿ ಒಟ್ಟು 30 ಅಂಕಗಳು ಪಣಕ್ಕಿರುತ್ತವೆ.