ಇಂದು ಐಸಿಸಿ ಮಹತ್ವದ ಸಭೆ; ಚಾಂಪಿಯನ್ಸ್​ ಟ್ರೋಫಿ ಭವಿಷ್ಯ ನಿರ್ಧಾರ

web icc champs
Published on

ದುಬೈ: ಮುಂದಿನ ವರ್ಷ ಫೆಬ್ರವರಿ-ಮಾರ್ಚ್​ನಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ "ಮಿನಿ ವಿಶ್ವಕಪ್​' ಖ್ಯಾತಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಏಕದಿನ ಟೂರ್ನಿಯ ಭವಿಷ್ಯವನ್ನು ನಿರ್ಧರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ನ (ಐಸಿಸಿ) ಆಡಳಿತ ಮಂಡಳಿ ಶುಕ್ರವಾರ ವರ್ಚುವಲ್​ ಮೂಲಕ ಮಹತ್ವದ ಸಭೆ ನಡೆಸಲಿದೆ. ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಭಾರತ ನಿರಾಕರಿಸಿರುವುದರಿಂದ ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಒಲವು ತೋರುವ ನಿರೀಕ್ಷೆ ಇದೆ.

2025ರ ಫೆಬ್ರವರಿ 19ರಿಂದ ಮಾರ್ಚ್​ 9ರವರೆಗೆ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ 9ನೇ ಆವೃತ್ತಿ ಪಾಕಿಸ್ತಾನದಲ್ಲಿ ನಿಗದಿಯಾಗಿದೆ. 8 ತಂಡಗಳು ಭಾಗವಹಿಸಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಬೇಕಿದೆ. ಆದರೆ ಭದ್ರತಾ ಭೀತಿಯಿಂದಾಗಿ ಭಾರತ ತಂಡವನ್ನು ಪಾಕ್​ಗೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ವಿಷಯವನ್ನು ಬಿಸಿಸಿಐ ತಿಳಿಸಿದ ಬೆನ್ನಲ್ಲೇ ಐಸಿಸಿ, ಹೈಬ್ರಿಡ್​ ಮಾದರಿಯಲ್ಲಿ (ಭಾರತದ ಪಂದ್ಯಗಳು ಪಾಕ್​ನಿಂದ ಹೊರಗೆ ಆಯೋಜನೆ) ಟೂರ್ನಿ ನಡೆಸಲು ಐಸಿಸಿ ಪ್ರಯತ್ನಿಸಿದರೂ, ಆತಿಥೇಯ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಇದನ್ನು ತಿರಸ್ಕರಿಸಿದೆ. ಇದರಿಂದಾಗಿ ಟೂರ್ನಿ ಆಯೋಜನೆಗೆ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ 100ಕ್ಕಿಂತ ಕಡಿಮೆ ದಿನಗಳು ಬಾಕಿ ಉಳಿದಿದ್ದರೂ, ಟೂರ್ನಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

"ಹಾಲಿ ಸನ್ನಿವೇಶದಲ್ಲಿ ಹೈಬ್ರಿಡ್​ ಮಾದರಿಯೇ ಅತ್ಯುತ್ತಮ ಆಯ್ಕೆಯಾಗಿದೆ. ಟೂರ್ನಿಯ ಹಿತದೃಷ್ಟಿಯಿಂದ ಇದಕ್ಕೆ ಸಂಬಂಧಿಸಿದವರು ಜಾಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಭಾರತ ಅಥವಾ ಪಾಕಿಸ್ತಾನ ತಂಡಗಳು ಇಲ್ಲದೆ ಆಡುವುದು ಟೂರ್ನಿಗೆ ಉತ್ತಮವಾದುದಲ್ಲ' ಎಂದು ಐಸಿಸಿ ಮೂಲಗಳು ತಿಳಿಸಿವೆ.

2008ರ ಮುಂಬೈ ಉಗ್ರ ದಾಳಿ ಬಳಿಕ ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಈ ಬಾರಿಯೂ ಭದ್ರತಾ ಭೀತಿಯಿಂದ ಭಾರತ ತಂಡವನ್ನು ಪಾಕ್​ಗೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಪಾಕ್​ನಲ್ಲಿ ನಿಗದಿಯಾಗಿರುವ ಅಂಧರ ಟಿ20 ವಿಶ್ವಕಪ್​ಗೂ ಭಾರತ ತಂಡವನ್ನು ಕಳುಹಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ.

ಭಾರತ-ಪಾಕ್​ ಬಿಟ್ಟು ಟೂರ್ನಿ ಇಲ್ಲ...

ಭಾರತ ಬಾರದಿದ್ದರೂ ಟೂರ್ನಿ ನಡೆಸಬೇಕೆಂದು ಪಿಸಿಬಿ ಬಯಸಿದ್ದರೂ, ಭಾರತವನ್ನು ಬಿಟ್ಟು ಟೂರ್ನಿ ನಡೆಸಲು ಐಸಿಸಿ ಸಿದ್ಧವಿಲ್ಲ. ಜತೆಗೆ ಟೂರ್ನಿಯ ಆಕರ್ಷಣೆ-ಮಹತ್ವ ಉಳಿಸಿಕೊಳ್ಳಲು ಭಾರತ-ಪಾಕಿಸ್ತಾನ ಪಂದ್ಯ ಆಯೋಜನೆಯೂ ಅಗತ್ಯವಾಗಿದೆ. ಆರ್ಥಿಕ ಹಿತದೃಷ್ಟಿಯಿಂದಲೂ ಇಂಡೋ&ಪಾಕ್​ ಪಂದ್ಯ ಮಹತ್ವ ಪಡೆದಿದೆ. ಭಾರತ&ಪಾಕಿಸ್ತಾನ ತಂಡಗಳನ್ನು ಪ್ರತ್ಯೇಕ ಗುಂಪುಗಳಲ್ಲಿ ಆಡಿಸಲು ಟೂರ್ನಿಯ ನೇರಪ್ರಸಾರ ಹಕ್ಕು ಹೊಂದಿರುವ ಕಂಪನಿ ಒಪ್ಪುವುದಿಲ್ಲ. ಆರ್ಥಿಕ ಲಾಭಕ್ಕಾಗಿ ಭಾರತ-ಪಾಕ್​ ಪಂದ್ಯ ಅಗತ್ಯವಾಗಿದೆ. ನಾಕೌಟ್​ನಲ್ಲಿ ಮತ್ತೆ ಉಭಯ ತಂಡಗಳು ಮುಖಾಮುಖಿ ಆದರೆ ಅದು ಬೋನಸ್​ ಆಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಐಸಿಸಿ ಮುಂದಿರುವ ಮೂರು ಆಯ್ಕೆಗಳು

1. ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಪಾಕಿಸ್ತಾನವನ್ನು ಒಪ್ಪಿಸುವುದು.

2. ಸಂಪೂರ್ಣ ಟೂರ್ನಿಯನ್ನು ಯುಎಇ ಅಥವಾ ದ. ಆಫ್ರಿಕಾಕ್ಕೆ ಸ್ಥಳಾಂತರಿಸುವುದು.

3. ಕೊನೆಯ ಆಯ್ಕೆಯಾಗಿ ಟೂರ್ನಿ ರದ್ದು ಅಥವಾ ಅನಿರ್ದಿಷ್ಟಾವಧಿಗೆ ಮುಂದೂಡುವುದು.

ಪ್ರಸಾರ ವಾಹಿನಿಯಿಂದ ಒತ್ತಡ

ಚಾಂಪಿಯನ್ಸ್​ ಟ್ರೋಫಿಯ ನೇರಪ್ರಸಾರ ಹಕ್ಕು ಹೊಂದಿರುವ "ಜಿಯೋ ಸ್ಟಾರ್​' ಸಂಸ್ಥೆ, ಟೂರ್ನಿಯ ವೇಳಾಪಟ್ಟಿ ವಿಳಂಬದ ಬಗ್ಗೆ ಅಸಮಾಧಾನಗೊಂಡಿದೆ ಮತ್ತು ಟೂರ್ನಿ ಆಯೋಜನೆಗೆ ಸಂಬಂಧಿಸಿದ ಬಿಕ್ಕಟ್ಟು ಬೇಗನೆ ಬಗೆಹರಿಸಬೇಕೆಂದು ಐಸಿಸಿ ಮೇಲೆ ಒತ್ತಡ ಹೇರಿದೆ. ಐಸಿಸಿ&ಜಿಯೋ ಸ್ಟಾರ್​ ಒಪ್ಪಂದದ ಪ್ರಕಾರ, ಟೂರ್ನಿಯ ವೇಳಾಪಟ್ಟಿಯನ್ನು ಕನಿಷ್ಠ 90 ದಿನ ಮುನ್ನವಾದರೂ ಬಿಡುಗಡೆಗೊಳಿಸಬೇಕು. ಆದರೆ ಐಸಿಸಿ ಈಗಾಗಲೆ ಈ ನಿಯಮಾವಳಿಯನ್ನು ಉಲ್ಲಂಘಿಸಿದೆ.

ಲಂಕಾ ಎ ಪ್ರವಾಸ ರದ್ದು ಹೊಡೆತ

ಇಸ್ಲಾಮಾಬಾದ್​ನಲ್ಲಿ ತೀವ್ರ ರಾಜಕೀಯ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಶ್ರೀಲಂಕಾ ಎ ತಂಡ ಪಾಕಿಸ್ತಾನ ಪ್ರವಾಸವನ್ನು ಮುಂದೂಡಿತ್ತು. ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಇಮ್ರಾನ್​ ಖಾನ್​ ನೇತೃತ್ವದ ತೆಹ್ರೀಕ್​-ಇ-ಇನ್​ಸಾಫ್​ ಪಕ್ಷ ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದು, ತೀವ್ರ ಹಿಂಸಾಚಾರಕ್ಕೂ ಕಾರಣವಾಗಿದೆ. ಇದು ಪಾಕಿಸ್ತಾನದ ಚಾಂಪಿಯನ್ಸ್​ ಟ್ರೋಫಿ ಆತಿಥ್ಯಕ್ಕೂ ಹಿನ್ನಡೆ ತರುವ ಸಾಧ್ಯತೆ ಇದೆ.

ಸ್ಥಳಾಂತರ ಆಯ್ಕೆಯೂ ಇದೆ

ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಲು ಪಿಸಿಬಿ ಖಡಾಖಂಡಿತವಾಗಿ ನಿರಾಕರಿಸಿದರೆ, ಬೇರೆಡೆಗೆ ಸ್ಥಳಾಂತರಿಸುವ ಆಯ್ಕೆಯೂ ಐಸಿಸಿ ಮುಂದಿದೆ. ಈ ನಿಟ್ಟಿನಲ್ಲಿ ಯುಎಇ ಮತ್ತು ದ. ಆಫ್ರಿಕಾ ಸದ್ಯಕ್ಕೆ ಬದಲಿ ತಾಣವಾಗಿ ಮುಂಚೂಣಿಯಲ್ಲಿವೆ.

ಬಹಿಷ್ಕರಿಸುವುದೇ ಪಾಕ್​?

ಹೈಬ್ರಿಡ್​ ಮಾದರಿಗೆ ಪಾಕ್​ ಒಪ್ಪದಿದ್ದಾಗ ಐಸಿಸಿ, ಚಾಂಪಿಯನ್ಸ್​ ಟ್ರೋಫಿ ಸ್ಥಳಾಂತರಕ್ಕೆ ಮುಂದಾಗಬಹುದು. ಆಗ ಪಾಕ್​ ಕ್ರಿಕೆಟ್​ ಮಂಡಳಿ, ಟೂರ್ನಿಯನ್ನೇ ಬಹಿಷ್ಕರಿಸಿ ತನ್ನ ಆಕ್ರೋಶ ಪ್ರದರ್ಶಿಸುವ ಸಾಧ್ಯತೆಯೂ ಇದೆ. ಆದರೆ ಪಿಸಿಬಿಯ ಹಾಲಿ ಆರ್ಥಿಕ ದು@ಸ್ಥಿತಿಯಲ್ಲಿ ಈ ಆಯ್ಕೆ ಅದಕ್ಕೆ ದುಬಾರಿಯಾಗಿ ಪರಿಣಮಿಸಬಹುದು. ಅಲ್ಲದೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಳಿಂದಲೂ ಹಿಂದೆ ಸರಿಯಲು ಪಿಸಿಬಿ ಚಿಂತಿಸಬಹುದು. ಭಾರತದಲ್ಲಿ 2025ರ ಮಹಿಳೆಯರ ಏಕದಿನ ವಿಶ್ವಕಪ್​, 2026ರ ಟಿ20 ವಿಶ್ವಕಪ್​, 2029ರ ಚಾಂಪಿಯನ್ಸ್​ ಟ್ರೋಫಿ, 2031ರ ಏಕದಿನ ವಿಶ್ವಕಪ್​ ನಿಗದಿಯಾಗಿವೆ.

ಏನಿದು ಹೈಬ್ರಿಡ್​ ಮಾದರಿ?

ಹೈಬ್ರಿಡ್​ ಮಾದರಿಯ ಅನ್ವಯ ಚಾಂಪಿಯನ್ಸ್​ ಟ್ರೋಫಿ 15 ಪಂದ್ಯಗಳ ಪೈಕಿ 10 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಮತ್ತು ಸೆಮಿಫೈನಲ್​-ಫೈನಲ್​ ಸಹಿತ ಇತರ 5 ಪಂದ್ಯಗಳನ್ನು ಬೇರೆಡೆ ನಡೆಸುವುದು ಐಸಿಸಿ ಯೋಜನೆಯಾಗಿದೆ. ಇದರನ್ವಯ ಭಾರತ ತಂಡದ ಎಲ್ಲ ಲೀಗ್​ ಪಂದ್ಯಗಳೂ ಪಾಕ್​ನಿಂದ ಹೊರಗೆ ಆಯೋಜನೆಗೊಳ್ಳಲಿವೆ. ಕಳೆದ ವರ್ಷ ಏಷ್ಯಾಕಪ್​ ಟೂರ್ನಿಯ ವೇಳೆಯೂ ಇದೇ ಮಾದರಿಯನ್ನು ಅನುಸರಿಸಿ, ಭಾರತದ ಪಂದ್ಯ ಮತ್ತು ನಾಕೌಟ್​ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಿ, ಇತರ ಪಂದ್ಯಗಳನ್ನಷ್ಟೇ ಪಾಕ್​ನಲ್ಲಿ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net