ಐಸಿಸಿ ಮಾರ್ಗಸೂಚಿಗೆ ಕ್ರಿಕೆಟಿಗರಿಂದ ಟೀಕೆ: ಕಾರ್ಯಸಾಧ್ಯವಲ್ಲ, ಮರುಪರಿಶೀಲಿಸಲು ಆಗ್ರಹ

ICC
Published on

ನವದೆಹಲಿ: ಕರೊನಾ ಹಾವಳಿಯ ನಂತರ ಕ್ರಿಕೆಟ್ ಚಟುವಟಿಕೆಗಳ ಪುನರಾರಂಭಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈಗಾಗಲೆ ವಿವಿಧ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಆದರೆ ಈ ಪೈಕಿ ಕೆಲ ಮಾರ್ಗಸೂಚಿಗಳು ಕಾರ್ಯಸಾಧ್ಯವಲ್ಲ ಮತ್ತು ಅವುಗಳನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಕೆಲ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದಾರೆ.

ತಂಡಗಳ ಆಟಗಾರರು ಕೋವಿಡ್-19ರಿಂದ ಮುಕ್ತವಾಗಿರುವು ದನ್ನು ಖಚಿತಪಡಿಸಿಕೊಳ್ಳಲು ಪಂದ್ಯಕ್ಕೆ ಪೂರ್ವಭಾವಿಯಾಗಿ 14 ದಿನಗಳ ಐಸೋಲೇಷನ್ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂಬುದನ್ನೂ ಸೇರಿಸಿ ಹಲವು ಮಾರ್ಗಸೂಚಿಗಳನ್ನು ಐಸಿಸಿ ಕಳೆದ ವಾರ ಬಿಡುಗಡೆ ಮಾಡಿತ್ತು. ಇದರಿಂದ ಮುಂದಿನ ದಿನಗಳಲ್ಲಿ ಕ್ರಿಕೆಟ್ ಚಟುವಟಿಕೆ

ಗಳು ಸಂಪೂರ್ಣ ಭಿನ್ನವಾಗಿರುತ್ತವೆ ಎಂಬ ಸಂದೇಶವನ್ನು ಸಾರಿತ್ತು. ಪ್ರತಿ ಬಾರಿ ಚೆಂಡು ಮುಟ್ಟಿದ ಬಳಿಕ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು, ತರಬೇತಿಯ ವೇಳೆ ಮೂತ್ರ ಅಥವಾ ಸ್ನಾನಕ್ಕೆ ಹೋಗಬಾರದು, ಚೆಂಡಿಗೆ ಎಂಜಲು ಹಚ್ಚಬಾರದು, ಆಟಗಾರರ ಕ್ಯಾಪ್, ಸನ್​ಗ್ಲಾಸ್ ಮತ್ತು ಟವೆಲ್​ಗಳನ್ನು ಸಹ-ಆಟಗಾರರು ಅಥವಾ ಅಂಪೈರ್​ಗಳಿಗೆ ಹಸ್ತಾಂತರಿಸಬಾರದು ಎಂಬಿತ್ಯಾದಿ ನಿಬಂಧನೆಗಳನ್ನೂ ಐಸಿಸಿ ವಿಧಿಸಿತ್ತು.

ಕ್ವಾರಂಟೈನ್ ನಂತರವೂ ಯಾಕೆ ಕಿರಿಕಿರಿ: ‘ವೈಯಕ್ತಿಕ ಕ್ರೀಡೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಕ್ರಿಕೆಟ್, ಫುಟ್​ಬಾಲ್​ನಂಥ ಟೀಮ್ ಗೇಮ್ಳಲ್ಲಿ ಇದು ಬಹಳ ಕಷ್ಟ. ಪಂದ್ಯದ ವೇಳೆ ಸ್ಲಿಪ್ ಫೀಲ್ಡರ್ ಬೇಕೆಂದಿದ್ದಾಗ ಅವರನ್ನು ನಿಲ್ಲಿಸದೇ ಇರಬೇಕೇ? ತಂಡವೊಂದು ಕೋವಿಡ್-19 ಪರೀಕ್ಷೆಗೆ ಒಳಗಾಗಿ, 14 ದಿನಗಳ ಕ್ವಾರಂಟೈನ್​ನಲ್ಲೂ ಇರಬೇಕೆಂಬುದು ಉತ್ತಮ ನಡೆ. ಆದರೆ ಅದರ ನಂತರವೂ ಪಂದ್ಯದ ವೇಳೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿರುವುದು ಆಟವನ್ನು ಕಠಿಣವಾಗಿಸಿದೆ. ಹಾಗಿದ್ದರೆ ಕ್ವಾರಂಟೈನ್ ಅವಧಿ ಅರ್ಥಕಳೆದುಕೊಳ್ಳುತ್ತದೆ’ ಎಂದು ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಪ್ರತಿ ಬಾರಿ ಸ್ಯಾನಿಟೈಸ್ ಕಷ್ಟ: ‘ಆಟಗಾರರ ಸುರಕ್ಷತೆಗೆ ಪ್ರಮುಖ ಆದ್ಯತೆ ಇರಬೇಕು ನಿಜ. ಆದರೆ ಅದರಿಂದ ಆಟವನ್ನು ಜಟಿಲಗೊಳಿಸಬಾರದು. ಬೌಲರ್ ಅಥವಾ ಫೀಲ್ಡರ್ ಪ್ರತಿ ಬಾರಿ ಚೆಂಡನ್ನು ಮುಟ್ಟಿದಾಗಲೂ ಸ್ಯಾನಿಟೈಸ್ ಮಾಡಬೇಕೆಂದಿದ್ದರೆ ಬಹಳ ಕಷ್ಟ. ಬೌಲರ್ ಒಬ್ಬ ಪ್ರತಿ ಓವರ್​ನಲ್ಲಿ ಆರು ಬಾರಿ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಇರ್ಫಾನ್ ಪಠಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಎಸೆತದ ಬಳಿಕ ಕೈ ನಿರ್ಮಲಗೊಳಿಸಬೇಕೆಂಬ ಐಸಿಸಿ ಮಾರ್ಗಸೂಚಿ ಕಾರ್ಯಸಾಧ್ಯವಲ್ಲ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪಣೇಸರ್ ಕೂಡ ಹೇಳಿದ್ದಾರೆ.

ಜೈವಿಕ ಸುರಕ್ಷತೆ ಸಾಧ್ಯವಾಗದು

ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಗಳನ್ನು ಜೈವಿಕ-ಸುರಕ್ಷಾ ಸ್ಥಳಗಳಲ್ಲಿ ಆಯೋಜಿಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ. ಆದರೆ ಇದು ಸಾಧ್ಯವಾಗದ ಮಾತು ಎಂದು ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಕೂಡ ಭಾರತ ತಂಡಕ್ಕೆ ಆತಿಥ್ಯ ವಹಿಸುವ ವೇಳೆ ಜೈವಿಕ ಸುರಕ್ಷಾ ವಾತಾವರಣ ನಿರ್ವಿುಸುವುದಾಗಿ ಹೇಳಿಕೊಂಡಿತ್ತು. ‘ಒಂದು ವೇಳೆ ಪರೀಕ್ಷೆ, ಕ್ವಾರಂಟೈನ್​ಗಳು ಮುಗಿದ ಬಳಿಕವೂ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಒಬ್ಬ ಆಟಗಾರ ಪಾಸಿಟಿವ್ ಆದರೆ ಏನು ಮಾಡುವುದು? ಇದರಿಂದ ಪಂದ್ಯವನ್ನು ಅಕಾಲಿಕವಾಗಿ ಸ್ಥಗಿತಗೊಳಿಸಬೇಕಾಗುತ್ತದೆ. ಹೀಗಾಗಿ ಕರೊನಾ ವಿರುದ್ಧ ವೈದ್ಯಕೀಯ ವ್ಯವಸ್ಥೆ ಸುಧಾರಿಸುವವರೆಗೆ ಕಾಯುವುದು ಉತ್ತಮ’ ಎಂದು ಎನ್​ಸಿಎ ಮುಖ್ಯಸ್ಥರೂ ಆಗಿರುವ ದ್ರಾವಿಡ್ ಹೇಳಿದ್ದಾರೆ.

ಅವಸರದ ನಡೆ ಎಂದ ಆಕಾಶ್ ಚೋಪ್ರಾ

ಕರೊನಾದಿಂದ ಜಾಗತಿಕ ಪರಿಸ್ಥಿತಿ ಪ್ರತಿದಿನಕ್ಕೆ ಬದಲಾಗುತ್ತಿದೆ. ಹೀಗಿರುವಾಗ ಕ್ರಿಕೆಟ್ ಪುನರಾರಂಭಕ್ಕೆ ಐಸಿಸಿ ಈಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವುದು ಅವಸರದ ನಡೆ ಎಂದು ಮಾಜಿ ಆರಂಭಿಕ ಹಾಗೂ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ‘ಪ್ರತಿ ಬಾರಿ ಚೆಂಡನ್ನು ಮುಟ್ಟಿದ ಬಳಿಕ ಕೈಗಳನ್ನು ನಿರ್ಮಲಗೊಳಿಸಬೇಕು ಎಂಬುದು ಕಾರ್ಯಸಾಧ್ಯವಿಲ್ಲ. ಪ್ರತಿ ಆಟಗಾರರೂ ಕೋವಿಡ್-19 ಪರೀಕ್ಷೆಗೆ ಒಳಪಟ್ಟು, ಕ್ವಾರಂಟೈನ್​ನಲ್ಲಿದ್ದೇ ಆಡಲು ಮೈದಾನಕ್ಕೆ ಇಳಿಯುವಾಗ ಇಂಥ ಕ್ರಮಗಳನ್ನೆಲ್ಲ ಹೆಚ್ಚುವರಿಯಾಗಿ ಸೇರಿಸಿಕೊಳ್ಳುವ ಅಗತ್ಯವಿದೆಯೇ? ಮೈದಾನದಲ್ಲಿ ಹೇಗಾದರೂ ಇರಲಿ, ಡ್ರೆಸ್ಸಿಂಗ್ ರೂಂಗೆ ಮರಳಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ಹೀಗಾಗಿ ಈ ಕ್ರಮಗಳೆಲ್ಲ ಅವಸರದ್ದಾಗಿವೆ. ಕ್ರಿಕೆಟ್ ಪುನರಾರಂಭದ ಸನಿಹ ಬಂದಾಗ ಮಾತ್ರ ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟತೆ ಸಿಗಲು ಸಾಧ್ಯ’ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಫುಟ್​ಬಾಲ್​ನಿಂದ ಕಲಿಯಿರಿ

ಜರ್ಮನಿ ಸಹಿತ ಯುರೋಪ್​ನ ಕೆಲವೆಡೆ ಈಗಾಗಲೆ ಫುಟ್​ಬಾಲ್ ಚಟುವಟಿಕೆಗಳು ಆರಂಭಗೊಂಡಿವೆ. ಮುಂದೆ ಕ್ರಿಕೆಟ್ ಪುನರಾರಂಭದ ವೇಳೆ ಇನ್ನಷ್ಟು ಕ್ರೀಡೆಗಳು ಆರಂಭಗೊಂಡಿರುತ್ತವೆ. ಹೀಗಾಗಿ ಅವುಗಳಿಂದ ಪಾಠ ಕಲಿತುಕೊಳ್ಳಲು ಕ್ರಿಕೆಟ್​ಗೆ ಅವಕಾಶವಿರುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net